Advertisement

ಅರೆಭಾಷೆ ಆಡುಭಾಷೆಯಾಗಲಿ: ಡಿ.ವಿ.

06:17 AM Mar 03, 2019 | Team Udayavani |

ಸುಳ್ಯ : ಭಾಷೆ ಕುರಿತು ಕೀಳರಿಮೆ ಬಿಡಬೇಕು. ಭಾಷಾ ವ್ಯಾಪ್ತಿ ಕಿರಿದಾಗಿದ್ದರೂ ಅದರಲ್ಲಿನ ಸಂಸ್ಕೃತಿ ಅತ್ಯಂತ ಹಿರಿದಾದುದು ಎಂದು ಕೇಂದ್ರ ರಾಸಾಯನಿಕ ಗೊಬ್ಬರ ಮತ್ತು ಅಂಕಿ
ಅಂಶಗಳ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

Advertisement

ಕೊಡಿಯಾಲಬೈಲು ಸಮುದಾಯ ಭವನದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಸ್ವಾಗತ ಸಮಿತಿ, ಸಮ್ಮೇ ಳನ ಸಮಿತಿ ಮತ್ತು ಗೌಡ ಯುವ ಸೇವಾ ಸಂಘದ ಆಶ್ರಯದಲ್ಲಿ ಶನಿವಾರ ನಡೆದ ಪ್ರಥಮ ಅರೆಭಾಷೆ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಯಾವುದೇ ಭಾಷೆ ಆಡುಭಾಷೆಯಾಗಿ ಬದಲಾದರೆ ನಶಿಸಿ ಹೋಗದು. ಅದರಿಂದ ಭಾಷಾ ಸ್ವಂತಿಕೆ ಉಳಿಸಿಕೊಳ್ಳಲು ಸಾಧ್ಯವಿದೆ. ಅಕಾಡೆಮಿ ಸ್ಥಾಪನೆ ಮೂಲಕ ಅರೆಭಾಷೆಯ ಸೊಗಡು ಹಳ್ಳಿಯಿಂದ ದಿಲ್ಲಿ ತನಕ ಪಸರಿಸಿದೆ. ಕೋಡಿ ಕುಶಾಲಪ್ಪ ಗೌಡ, ಬಿಳಿಮಲೆ ಅವರಂತಹವರು ಭಾಷಾ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಅವರು ಉಲ್ಲೇಖೀಸಿದರು.

ಸುಳ್ಯದಲ್ಲಿ ನಡೆದ ಸ್ವಾತಂತ್ರ್ಯ  ಸಂಗ್ರಾಮ ಪ್ರಥಮ ಎಂದೆನಿಸಿದೆ. ಅದರಲ್ಲಿನ ಹೋರಾಟಗಾರರು ಅರೆಭಾಷೆ ಮಾತನಾಡುವವರು ಎನ್ನುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಲಿಪಿ ಇರುವ ಭಾಷೆ ಮಾತ್ರ ಶ್ರೇಷ್ಠ ಎಂಬ ಭಾವನೆ ಬೇಡ. ಅರೆಭಾಷೆ ಮನುಷ್ಯತ್ವದ ಭಾಷೆ ಎಂದು ಬಣ್ಣಿಸಿದರು.

ಮೂರು ಹಂತದ ಬೆಳವಣಿಗೆ
ಪ್ರಥಮ ಅರೆಭಾಷೆ ಸಾಹಿತ್ಯ ಸಮ್ಮೇಳನಾಧ್ಯಕ್ಷ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್‌. ಗಂಗಾಧರ ಮಾತನಾಡಿ, ಅರೆಭಾಷೆಯು ಆರಂಭದ ಹಂತದಲ್ಲಿ ಜನಾಂಗದವರ ಮನೆ ಭಾಷೆಯಾಗಿ, ಎರಡನೆ ಹಂತದಲ್ಲಿ ಜನಾಂಗ ಮೀರಿ ಬೆಳೆಯುವ ಭಾಷೆಯಾಗಿ, ಮೂರನೆ ಹಂತದಲ್ಲಿ ನಮ್ಮ ಪ್ರದೇಶ ಮೀರಿ ಬೆಳೆಯುವ ಭಾಷೆಯಾಗಿ ವಿಸ್ತಾರಗೊಳ್ಳಬೇಕು ಎಂದರು.

Advertisement

ಮೂರು ಅಪಾಯಗಳು
ದೈನಂದಿನ ಜೀವನದಲ್ಲಿ ಆಂಗ್ಲ ಭಾಷೆಯ ಬಳಕೆ, ಮಕ್ಕಳಿಗೆ ಅರೆಭಾಷೆ ತಿಳಿಸುವ ಪ್ರಯತ್ನ ಆಗದಿರುವುದು ಹಾಗೂ ಅತಿಯಾದ ಮೊಬೈಲ್‌ ಬಳಕೆ ಇವು ಅರೆಭಾಷೆ ಎದುರಿಸುವ ಮೂರು ಅಪಾಯಗಳು ಎಂದು ಅವರು ಉದಾಹರಣೆ ಸಹಿತ ವಿವರಿಸಿದರು. ಜಾತಿ ಜಾತಿಗಳೊಟ್ಟಿಗೆ, ಧರ್ಮ ಧರ್ಮಗಳೊಟ್ಟಿಗೆ ಬಾಂಧವ್ಯ, ಸಾಮರಸ್ಯ ಬೆಳೆಸುವಲ್ಲಿ ಭಾಷೆ ಮಹತ್ವದ ಪಾತ್ರ ವಹಿಸಿದೆ. ಸುಳ್ಯ ತಾಲೂಕಿನಲ್ಲಿ ಕನ್ನಡ, ಅರೆಭಾಷೆ, ತುಳು, ಮಳೆಯಾಳ, ಹವ್ಯಕ, ತಮಿಳು ಹೀಗೆ ಬೇರೆ ಬೇರೆ ಭಾಷೆಗಳನ್ನಡುತ್ತಾ ಬಾಂಧವ್ಯ, ಸಾಮರಸ್ಯ ವೃದ್ಧಿಗೆ ಕಾರಣವಾಗಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು.

ಭಾಷೆಯ ಬೆಳವಣಿಗೆಗೆ ಸಹಕಾರಿ
ಸಮ್ಮೇಳನ ಉದ್ಘಾಟಿಸಿದ ವಿಶ್ರಾಂತ ಕುಲಪತಿ ಕೊಳಂಬೆ ಚಿದಾನಂದ ಗೌಡ ಮಾತನಾಡಿ, ಅರೆಭಾಷೆ ಉಳಿದರೆ ಸಂಸ್ಕೃತಿ ಉಳಿದಂತೆ. ಇದು ಹೃದಯದ ಭಾಷೆ. ಹಾಗಾಗಿ ಅರೆಭಾಷೆ ಇನ್ನಷ್ಟು ಬೆಳವಣಿಗೆ ಹೊಂದಲು ಸಾಹಿತ್ಯ ಸಮ್ಮೇಳನ, ಪುಸ್ತಕ ರಚನೆಯಂತಹ ಪ್ರಯತ್ನ ಸಹಕಾರಿ ಎಂದರು.

ಅರೆಭಾಷಾ ಕೃತಿ ಬಿಡುಗಡೆಗೊಳಿಸಿದ ಶಾಸಕ ಎಸ್‌. ಅಂಗಾರ ಮಾತನಾಡಿ, ಜಾತಿ ಮೀರಿದ ವ್ಯಕ್ತಿಗಳಾಗಬೇಕು. ಜಾತಿಯಿಂದ ಪ್ರಾಮುಖ್ಯ ಪಡೆಯಲು ಸಾಧ್ಯವಿಲ್ಲ. ಅರೆಭಾಷೆ ಎಲ್ಲರ ಭಾಷೆ ಆಗಿ ಮನ್ನಣೆ ಗಳಿಸಲಿ ಎಂದರು.

ಸಮ್ಮೇಳನದ ಆಶಯ 
ಆಶಯ ಮಾತುಗಳನ್ನಾಡಿದ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ, ಭಾಷಾ ಅಲ್ಪಸಂಖ್ಯಾಕ ಸ್ಥಾನಮಾನ, 8ನೇ ಪರಿಚ್ಛೇದಕ್ಕೆ ಸೇರ್ಪಡೆ, ಮಂಗಳೂರು ವಿ.ವಿ.ಯಲ್ಲಿ ಅರೆಭಾಷೆ ಅಧ್ಯಯನ ಪೀಠ, ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಬೆಳವಣಿಗೆ ಮೊದಲಾದ ಉದ್ದೇಶ ಸಮ್ಮೇಳನದ್ದಾಗಿದೆ ಎಂದ ಅವರು ಅಕಾಡೆಮಿ ಕಾರ್ಯಚಟುವಟಿಕೆ ಕುರಿತು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next