ಪ್ರಥಮ ಚಿಕಿತ್ಸೆ ಎನ್ನುವುದು ವೈದ್ಯಕೀಯ ಕ್ಷೇತ್ರದ ಪ್ರಮುಖ ಭಾಗ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೊರೆಯುವ ಸೂಕ್ತ ಪ್ರಥಮ ಚಿಕಿತ್ಸೆಯಿಂದಾಗಿ ಜೀವವನ್ನೇ ಉಳಿಸಬಹುದು. ಆದ್ದರಿಂದ ಇದರ ಬಗ್ಗೆ ಪ್ರತಿಯೊಬ್ಬರಿಗೂ ಪ್ರಾಥಮಿಕ ಜ್ಞಾನ ಇರಲೇಬೇಕು. ಇಂತಹ ಉಪಯುಕ್ತ ಮಾಹಿತಿ ಒಳಗೊಂಡ ಪುಸ್ತಕವೇ ಪ್ರಥಮ ಚಿಕಿತ್ಸೆ-ಜೀವರಕ್ಷಣೆ. ಡಾ| ಬಿ. ಆರ್. ಭಟ್ ಬರೆದಿರುವ ಈ ಕೃತಿ ಪ್ರಥಮ ಚಿಕಿತ್ಸೆ ಬಗ್ಗೆ ವಿಸ್ತೃತವಾದ ಮಾಹಿತಿ ನೀಡುತ್ತದೆ. ಪ್ರಥಮ ಚಿಕಿತ್ಸೆಯ ಉದ್ದೇಶ, ವಿಧಗಳನ್ನು ವಿವರಿಸುವುದರ ಜತೆಗೆ ಮಾನವನ ದೇಹದ ಬಗ್ಗೆ, ರೋಗ ಕಾರಣ, ಲಕ್ಷಣಗಳು ಮುಂತಾದ ಉಪಯುಕ್ತ ವಿವರಗಳು ಈ ಪುಸ್ತಕದಲ್ಲಿವೆ. ಅಪಘಾತಗಳು ಸಂಭವಿಸಿದಲ್ಲಿ ತುರ್ತು ಚಿಕಿತ್ಸೆ ಜೀವರಕ್ಷಣೆಗೆ ಸಹಕಾರಿ. ಆದರೆ ಹಲವಾರು ಅಡ್ಡಿ, ಆತಂಕಗಳಿಂದ ಜನ ಸಾಮಾನ್ಯರು ದೂರ ಸರಿಯುತ್ತಾರೆ. ಜೀವನ್ಮರಣ ಸ್ಥಿತಿಯಲ್ಲಿರುವ ವ್ಯಕ್ತಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಲು ಯಾರೂ ಹಿಂಜರಿಯಬಾರದು. ಇದಕ್ಕೆ ಯಾವ ಕಾನೂನಿನ ತೊಡಕು ಬರಲಾರದು ಎನ್ನುತ್ತಾರೆ ಲೇಖಕರು.
1 ಅಪಘಾತ ಅಥವಾ ರೋಗಬಾಧಿತ ವ್ಯಕ್ತಿಗೆ ವೈದ್ಯರ ನೆರವು ಸಿಗುವ ಮೊದಲು ತುರ್ತಾಗಿ ಮಾಡುವ ಆರೈಕೆಯೇ ಪ್ರಥಮ ಚಿಕಿತ್ಸೆ.
ಪ್ರಥಮ ಚಿಕಿತ್ಸೆಯ ಉದ್ದೇಶಗಳು
ರೋಗಿಗೆ ಬೇರೆ ರೀತಿಯ ತೊಂದರೆಯಾಗದಂತೆ ಜಾಗ್ರತೆ ವಹಿಸುವುದು
ರೋಗ ಗುಣವಾಗುವಂತೆ ಪ್ರಯತ್ನಿಸುವುದು
ರೋಗಿಯ ಜೀವ ರಕ್ಷಣೆ
2 ಅರಿತರೆ ಅಪಘಾತವಿಲ್ಲ ಎಂಬ ಅಪಾಯಕಾರಿ ಕಾರ್ಯಕ್ಷೇತ್ರಗಳಲ್ಲಿ ಅನ್ವಯವಾಗುವಂತೆ ಮನೆಗೂ ಅನ್ವಯವಾಗುತ್ತದೆ. ನಾವು ಬಳಸುವ ಯಾವ ವಸ್ತುಗಳಲ್ಲಿ ರಾಸಾಯನಿಕಗಳು ಸೇರಿವೆ?ಅವುಗಳನ್ನು ಬಳಸುವಾಗ ಸಂಭವಿಸಬಹುದಾದ ಅಪಘಾತಗಳ ಸಾಧ್ಯತೆ ಮತ್ತು ದುಷ್ಪರಿಣಾಮ ಮತ್ತು ಚಿಕಿತ್ಸಾಕ್ರಮಗಳ ಬಗ್ಗೆ ನಾವು ತಿಳಿದುಕೊಂಡರೆ ಸಂಭವನೀಯ ಅಪಘಾತಗಳನ್ನು ತಪ್ಪಿಸಬಹುದು.
3 ಬೆಳಗ್ಗೆ ಎದ್ದ ಕೂಡಲೇ ಒಂದು ಲೋಟ ನೀರು ಸೇವನೆ ಜೀರ್ಣಾಂಗಗಳನ್ನು ಉತ್ತೇಜಿಸುತ್ತದೆ. ಊಟದ ಮೊದಲು ನೀರು ಕುಡಿಯುವುದರಿಂದ ಜೀರ್ಣ ಕ್ರಿಯೆ ಉತ್ತಮವಾಗುತ್ತದೆ. ಸ್ನಾನದ ಮೊದಲು ನೀರು ಕುಡಿಯುವುದು ರಕ್ತದ ಒತ್ತಡ ನಿಯಂತ್ರಣಕ್ಕೆ ಸಹಕಾರಿ. ರಾತ್ರಿ ಆಹಾರ ಸೇವನೆಯಲ್ಲಿ ನಿಯಂತ್ರಣವಿರಬೇಕು. ಹೀಗೆ ಅನೇಕ ಉಪಯುಕ್ತ ಮಾಹಿತಿಗಳನ್ನು ಈ ಪುಸ್ತಕ ಒಳಗೊಂಡಿದೆ.
- ರಮೇಶ್ ಬಳ್ಳಮೂಲೆ