Advertisement

ಪ್ರಥಮ ಚಿಕಿತ್ಸೆ ತಾತ್ಕಾಲಿಕ ನೋವು ಶಮನಕಾರಿ

09:55 AM Feb 12, 2020 | mahesh |

ಪ್ರಥಮ ಚಿಕಿತ್ಸೆ ಕೌಶಲ ಪ್ರತಿಯೊಬ್ಬರೂ ಕಲಿಯಲೇಬೇಕಾದುದು. ಏಕೆಂದರೆ, ಜೀವನದಲ್ಲಿ ಹಲವು ಸಂದರ್ಭಗಳಲ್ಲಿ ಪ್ರತಿಯೊಬ್ಬರಿಗೂ ಇದರ ಅಗತ್ಯ ಬೀಳಬಹುದು. ಈ ಬಗ್ಗೆ ಒಂದಿಷ್ಟು ಜ್ಞಾನ ಪಡೆಯುವುದು ಕೂಡ ಆವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪ್ರಥಮ ಚಿಕಿತ್ಸೆ ಯಾವ ರೀತಿಯಲ್ಲಿ ಉಪಯೋಗವಾಗುವುದು ಎಂಬುವುದನ್ನು ಇಲ್ಲಿ ತಿಳಿಸಲಾಗಿದೆ.

Advertisement

ಯಾವುದೇ ತತ್‌ಕ್ಷಣಕ್ಕೆ ಕಾಣಿಸಿಕೊಳ್ಳುವ ನೋವು, ಕಾಯಿಲೆಗಳಿಗೆ ಪ್ರಥಮ ಚಿಕಿತ್ಸೆಯ ಮೂಲಕ ಒಂದಷ್ಟು ರಿಲ್ಯಾಕ್ಸ್‌ ನೀಡಲು ಸಾಧ್ಯ. ಆದರೆ, ಬಹುತೇಕ ಸಂದರ್ಭಗಳಲ್ಲಿ ತತ್‌ಕ್ಷಣಕ್ಕೆ ಅರಿವಿಗೆ ಬಾರದಿರುವುದು, ತಿಳಿದಿದ್ದರೂ ಕ್ಷಣದಲ್ಲಿ ಮರೆತುಹೋಗುವ ಕಾರಣಗಳಿಂದಾಗಿ ರೋಗಿಗಳನ್ನು ನೇರವಾಗಿ ಆಸ್ಪತ್ರೆಗೆ ಕೊಂಡೊಯ್ಯುವುದೇ ಹೆಚ್ಚು.

ಸಣ್ಣ ಪುಟ್ಟ ಗಾಯಗಳು, ಪ್ರಾಣಿಗಳ ಕಡಿತ, ಹೃದಯಾಘಾತ ಸಹಿತ ಸಣ್ಣ ಮಟ್ಟಿನಿಂದ ಹಿಡಿದು ಜೀವಕ್ಕೇ ಅಪಾಯ ತರುವಂತಹ ತತ್‌ಕ್ಷಣ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆ ಪ್ರಥಮ ಚಿಕಿತ್ಸೆ ನೀಡಿದರೆ, ಆ ರೋಗಿಯ ಜೀವವನ್ನೇ ಉಳಿಸಲು ಸಾಧ್ಯ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇಂತಹ ಸಂದರ್ಭಗಳು ಎದುರಾದಾಗ ಪ್ರಥಮ ಚಿಕಿತ್ಸೆ ಒದಗಿಸುವ ಮೂಲಕ ಆ ವ್ಯಕ್ತಿಯನ್ನು ಬದುಕಿಸುವ, ಇಲ್ಲವೇ ನೋವನ್ನು ಸ್ವಲ್ಪ ಮಟ್ಟಿಗೆ ತಡೆದುಕೊಳ್ಳಲು ಪ್ರಥಮ ಚಿಕಿತ್ಸೆ ಮೂಲಕ ನೆರವಾಗಬಹುದು.

ಅಪಘಾತ, ರಕ್ತಸ್ರಾವ, ಮೂಳೆ ಮುರಿತ, ಹೊಡೆತ, ಪ್ರಾಣಿಗಳ ಇರಿತ, ಕಡಿತ ಅಥವಾ ಇತರ ಅನಾರೋಗ್ಯ ಮುಂತಾದವುಗಳನ್ನು ನಾವು ಪ್ರತಿನಿತ್ಯ ನೋಡುತ್ತಿರುತ್ತೇವೆ. ಇಂತಹ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಗಳಿಂದಾಗಿ ವ್ಯಕ್ತಿಯ ಜೀವ ಉಳಿಸಲೂ ಸಾಧ್ಯವಿದೆ. ವೈದ್ಯಕೀಯ ಚಿಕಿತ್ಸೆ ದೊರೆಯುವ ಮುಂಚಿನ ಅವಧಿಯಲ್ಲಿ ಅಗತ್ಯವಾಗಿ ಇದನ್ನು ನೀಡಬೇಕು. ಹಳ್ಳಿಗಳಲ್ಲಿ ಔಷಧೀಯ ಗುಣ ಹೊಂದಿರುವ ಗಿಡ, ಇತರ ಉತ್ಪನ್ನಗಳಿರುವುದರಿಂದ ಅದನ್ನೇ ಬಳಸಿಕೊಂಡು ಪ್ರಥಮ ಚಿಕಿತ್ಸೆ ನೀಡಬಹುದು. ನಗರದಲ್ಲಿ ಪ್ರತಿ ಮನೆ, ಕಚೇರಿ, ಕೆಲಸದ ಸ್ಥಳಗಳಲ್ಲಿ ತುರ್ತು ಚಿಕಿತ್ಸೆ ಕಿಟ್‌ ಇದ್ದರೊಳಿತು.

ತುರ್ತು ಚಿಕಿತ್ಸೆಯ ಮುಖ್ಯ ಉದ್ದೇಶ
ಗಾಯ ಅಥವಾ ಅವಘಡಗಳುಂಟಾದಾಗ ಒದಗಿಸುವ ತತ್‌ಕ್ಷಣದ
ಅಥವಾ ಆರಂಭಿಕ ಆರೈಕೆಯನ್ನು ಪ್ರಥಮ ಚಿಕಿತ್ಸೆ ಎಂದು ವ್ಯಾಖ್ಯಾನಿಸಬಹುದು. ಮನೆಯಲ್ಲೇ ಮಾಡಿಕೊಳ್ಳಬಹುದಾದ, ಅಥವಾ ಜೀವ ರಕ್ಷಣೆಗಾಗಿ ತತ್‌ಕ್ಷಣಕ್ಕೆ ಮಾಡಬೇಕಾದ ಚಿಕಿತ್ಸೆಗಳನ್ನು ರೋಗಿಗೆ ನೀಡಬಹುದಾದರೂ, ಇದಕ್ಕೂ ತರಬೇತಿ ಪಡೆದ ವೃತ್ತಿಪರರು ಇರುತ್ತಾರೆ. ಲಭ್ಯ ಉಪಕರಣಗಳ ಮೂಲಕ ಅವರು ಚಿಕಿತ್ಸೆ ನೀಡುತ್ತಾರೆ. ಜೀವ ಉಳಿಸುವುದರ ಜತೆಗೆ ಆಗಿರುವ ಅವಘಡ ಹೆಚ್ಚಾಗದಂತೆ ತಡೆಯುವುದು ತುರ್ತು ಚಿಕಿತ್ಸೆಯ ಮುಖ್ಯ ಉದ್ದೇಶ. ಉದಾಹರಣೆಗೆ ಅಪಘಾತದಂತಹ ಸಂದರ್ಭದಲ್ಲಿ ತತ್‌ಕ್ಷಣಕ್ಕೆ ಗಾಯಾಳುವಿನ ಶರೀರದಿಂದ ರಕ್ತ ಸ್ರಾವವಾಗದಂತೆ ತಡೆದು ಬ್ಯಾಂಡೇಜ್‌ ಸುತ್ತುವುದು, ಮೂಳೆ ಮುರಿತಕ್ಕೊಳಗಾಗಿದ್ದರೆ ದಬ್ಬೆ ಕಟ್ಟಿ ಅಲ್ಪಕಾಲ ನೋವು ತಡೆಯಲು ಸಹಕರಿಸುವುದಾಗಿದೆ.

Advertisement

ನಾಡಿಬಡಿತ ಪರೀಕ್ಷೆ
ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ, ನಾಡಿಬಡಿತವನ್ನು ಪರೀಕ್ಷಿಸಬೇಕು. ರಕ್ತಪರಿಚಲನೆ ನಿಂತು ಹೋಗಿದ್ದಲ್ಲಿ ಹೃದಯದಿಂದ ರಕ್ತ ಹೊರ ಹೋಗಲು ಅನುವಾಗುವಂತೆ ತತ್‌ಕ್ಷಣ ಎದೆಯನ್ನು ದಬ್ಬಬೇಕು. ಆದರೆ ಇದನ್ನು ಒಟ್ಟಾರೆಯಾಗಿ ಮಾಡಿದರೆ ರೋಗಿಯ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆಯಿದೆ. ಕ್ರಮಬದ್ಧವಾಗಿ ಮಾಡಿದರೆ ವೈದ್ಯರನ್ನು ಕಾಣುವ ತನಕ ಜೀವಕ್ಕೆ ಆತಂಕ ಎದುರಾಗದಂತೆ ನೋಡಿಕೊಳ್ಳಬಹುದು.

ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸೆ ತರಬೇತಿ ಪಡೆದುಕೊಂಡರೂ ಜೀವಿತಾವಧಿಯಲ್ಲಿ ಕನಿಷ್ಠ ನಾಲ್ಕು ಮಂದಿಯ ನೋವನ್ನಾದರೂ ಕಡಿಮೆ ಮಾಡಬಹುದು. ಗಾಯಗೊಂಡ ಭಾಗವನ್ನು ನೀರಿನಿಂದ ಸ್ವತ್ಛಗೊಳಿಸಿ ಹದವಾಗಿ ಬ್ಯಾಂಡೇಜ್‌ ಹಚ್ಚಿ ವೈದ್ಯರಲ್ಲಿಗೆ ಕರೆದೊಯ್ಯುವ ಮೂಲಕ ಆತನ ದೇಹದಿಂದ ರಕ್ತಸ್ರಾವವಾಗದಂತೆ ಮತ್ತು ಗಾಯದ ಮೂಲಕ ವೈರಾಣುಗಳು ದೇಹ ಪ್ರವೇಶಿಸದಂತೆ ತಡೆಯಬಹುದು.

ಮಂಜುಗಡ್ಡೆ ಹಚ್ಚಬೇಡಿ
ಸುಟ್ಟ ಗಾಯಗಳಾದ ಸಂದರ್ಭದಲ್ಲಿ ಉರಿ ಶಮನಕ್ಕಾಗಿ ಗಾಯದ ಮೇಲೆ ಸಾಕಷ್ಟು ನೀರು ಹಾಯಿಸಬೇಕು. ಅನಂತರ ಒಣಬಟ್ಟೆಯಿಂದ ಸಡಿಲವಾಗಿ ಸುತ್ತಿ ವೈದ್ಯರಲ್ಲಿಗೆ ಕರೆದುಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಮನೆ ಮದ್ದಾಗಲೀ, ಮಂಜುಗಡ್ಡೆಯಾಗಲಿ ಹಚ್ಚಬಾರದು. ಇದರಿಂದ ಗಾಯ ಜಾಸ್ತಿಯಾಗುವ ಸಾಧ್ಯತೆ ಇದೆ.

ಒತ್ತಡ ಕ್ರಮದಿಂದ ರಕ್ತಸ್ರಾವ ತಡೆ
ಬಿದ್ದು ಅಥವಾ ಇತರ ಕಾರಣದಿಂದ ದೇಹದಲ್ಲಿ ಗಾಯಗಳಾದಾಗ ಒತ್ತಡ ಕ್ರಮದ ಮೂಲಕ ರಕ್ತಸ್ರಾವವನ್ನು ತಡೆಯಬಹುದು. ರಕ್ತಸ್ರಾವ ನಿಂತ ಅನಂತರ ಸೋಪು ಹಾಗೂ ನೀರಿನಲ್ಲಿ ಗಾಯವನ್ನು ಹದವಾಗಿ ತೊಳೆಯಬೇಕು. ಶುದ್ಧವಾದ ಬಟ್ಟೆಯಿಂದ ಉಜ್ಜಿ ರಕ್ತಪರಿಚಲನೆಗೆ ತೊಂದರೆಯಾಗದಂತೆ ಬ್ಯಾಂಡೇಜ್‌ ಸುತ್ತಬೇಕು.

ಪ್ರಥಮ ಚಿಕಿತ್ಸೆಗೆ ವೈದ್ಯರ ಅಗತ್ಯವಿಲ್ಲ. ಜನಸಾಮಾನ್ಯರೇ ಒಂದಷ್ಟು ಮುನ್ನೆ
ಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಪ್ರಥಮ ಚಿಕಿತ್ಸೆಯನ್ನು ರೋಗಿಗೆ ನೀಡಬಹುದು. ದ್ವಿತೀಯ ಹಂತದಲ್ಲಿ ವೈದ್ಯರ ಚಿಕಿತ್ಸೆ ಮಾಡಿಸಬಹುದು.

ನಗರ ಪ್ರದೇಶಗಳಲ್ಲಿ ಆಸ್ಪತ್ರೆ ಕಾಲ್ನಡಿಗೆಯ ಅಂತರದಲ್ಲಿರುವುದರಿಂದ ಅಷ್ಟೊಂದು ಸಮಸ್ಯೆ ಎದುರಾಗುವುದಿಲ್ಲ. ಆದರೆ, ಗ್ರಾಮೀಣ ಭಾಗಗಳಲ್ಲಾದರೆ, ತತ್‌ಕ್ಷಣಕ್ಕೆ ಅನಾರೋಗ್ಯಕ್ಕೊಳಗಾದ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಮಯ ಹಿಡಿಯುತ್ತದೆ. ಹಾಗಾಗಿ ಇಲ್ಲಿ ಪ್ರಥಮ ಚಿಕಿತ್ಸೆಯ ಅಗತ್ಯ ಹೆಚ್ಚಿರುತ್ತದೆ.

ಪ್ರಥಮ ಚಿಕಿತ್ಸೆಗೆ ಆದ್ಯತೆ ನೀಡಿ
ತತ್‌ಕ್ಷಣಕ್ಕೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಆ ವ್ಯಕ್ತಿಯ ಪ್ರಥಮ ಚಿಕಿತ್ಸೆಯನ್ನು ಮನೆಯಲ್ಲೇ ನೀಡಬೇಕು. ಆಸ್ಪತ್ರೆ ತಲುಪುವ ತನಕ ಕಾಯಬಾರದು. ಪ್ರಾಣಿಗಳ ಕಡಿತ, ಮೂಳೆ ಮುರಿತ, ಅಪಘಾತದಂತಹ ಸಂದರ್ಭದಲ್ಲಿ ಅತಿಯಾದ ರಕ್ತ ಸೋರಿಕೆಯನ್ನು ತಡೆಗಟ್ಟಲು ಪ್ರಥಮ ಚಿಕಿತ್ಸೆಗಳನ್ನು ಮನೆಯಲ್ಲಿ ನೀಡಬೇಕು. ಮನೆ ಹಿತ್ತಲಲ್ಲಿ ಸಿಗುವ ಔಷಧೀಯ ಸಸ್ಯಗಳಿಂದ ತಯಾರಿಸಿದ ಔಷಧ ಹಚ್ಚುವಿಕೆ ಮುಂತಾದವು ತಾತ್ಕಾಲಿಕ ಶಮನಕಾರಿ ಔಷಧ. ಆದರೆ ಪ್ರಥಮ ಚಿಕಿತ್ಸೆ ನೀಡಿ ಸುಮ್ಮನಿರಬಾರದು, ತತ್‌ಕ್ಷಣವೇ ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ಯಬೇಕು.
– ಡಾ| ಪುನಿತ್‌ ಆರ್‌., ವೈದ್ಯರು

- ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next