Advertisement

ಇಬ್ಬರು ರೌಡಿಗಳ ಮೇಲೆ ಫೈರಿಂಗ್‌

01:36 PM Oct 20, 2018 | Team Udayavani |

ಕಲಬುರಗಿ: ಅಪಹರಣ ಮತ್ತು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿಗಳಿಬ್ಬರ ಮೇಲೆ ಪೊಲೀಸರು ಶುಕ್ರವಾರ ಬೆಳಗ್ಗೆ ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.

Advertisement

ಈ ರೌಡಿಗಳು ಗುರುವಾರ ವ್ಯಕ್ತಿಯೊಬ್ಬನನ್ನು ಅಪಹರಿಸಿ ಲಕ್ಷ ರೂ. ಬೇಡಿಕೆಯಿಟ್ಟಿದ್ದಲ್ಲದೇ ರಸ್ತೆಯಲ್ಲಿ ಕೆಲವರನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಬಜಾರನ ಕುಖ್ಯಾತ ರೌಡಿಗಳಾದ ಬಾಬು ಅಲಿಯಾಸ್‌ ಬಾಬ್ಯಾ ಹಾಗೂ ಉಮೇಶ ಮಾಳಗೆ ಎನ್ನುವರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ. ದಾಳಿಯಲ್ಲಿ ಇಬ್ಬರು ರೌಡಿಗಳ ಕಾಲುಗಳಿಗೆ ಗುಂಡು ತಗುಲಿವೆ.

ದಾಳಿ ನಡೆಸಿದ ವೇಳೆ ರೌಡಿಗಳು ನಡೆಸಿದ ಪ್ರತಿ ದಾಳಿಗೆ ಪೊಲೀಸರೂ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾ ಗಿದೆ. ದಾಳಿಗೆ ರೌಡಿಗಳು ಪ್ರತಿ ದಾಳಿ ನಡೆಸಿದ್ದರಿಂದ ಗುಂಡಿನ ದಾಳಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಮೆಕ್ಯಾನಿಕ್‌ನೊಬ್ಬನನ್ನು ಅಪಹರಿಸಿ ಮನಸ್ಸಿಗೆ ಬಂದಂತೆ ಹೊಡೆದು ಲಕ್ಷ ರೂ.ಗೆ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕಿದ್ದರಿಂದ ಗುರುವಾರ ತಡರಾತ್ರಿ ಇಬ್ಬರು ರೌಡಿಗಳನ್ನು ಸೆರೆ ಹಿಡಿಯಲು ಪೊಲೀಸ್‌ ರು ಮುಂದಾಗಿದ್ದರು. ದಾಳಿ ನಡೆಸಿದ ವೇಳೆ ರೌಡಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರಿಂದ  ಪಿಎಸ್‌ಐ ಸೇರಿದಂತೆ ಐವರು ಪೊಲೀಸರಿಗೆ ಗಾಯಗಳಾಗಿವೆ. 

ರೌಡಿಗಳನ್ನು ಹಿಮ್ಮೆಟ್ಟಿಸಲು ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದ್ದರಿಂದ ಕಲಬುರಗಿ ಶಹಾಬಜಾರದ ಉಮೇಶ ಮಾಳಗೆ ಮತ್ತು ಬಾಬು ಅಲಿಯಾಸ್‌ ಬಾಬ್ಯಾ ಎನ್ನುವ ರೌಡಿಗಳಿಬ್ಬರಿಗೆ ಗುಂಡೇಟು ಬಿದ್ದಿವೆ. ಈ ಇಬ್ಬರು ಕೊಲೆ, ಸುಲಿಗೆ, ದರೋಡೆ, ಕೊಲೆಗೆ ಯತ್ನ, ಕಿಡ್ನಾಪ್‌ ಸೇರಿದಂತೆ
ಹಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದರು.

Advertisement

ಉಮೇಶ ಕೋಕಾ ಕಾಯ್ದೆಯಡಿ ಜೈಲು ಸೇರಿ, ಕೆಲವು ದಿನಗಳ ಹಿಂದಷ್ಟೆ ಜಾಮೀನು ಮೇಲೆ ಬಿಡುಗಡೆಯಾಗಿದ್ದ. ಈ ಇಬ್ಬರು ಕುಖ್ಯಾತ ರೌಡಿಗಳು ಮಾರ್ಕೇಟ್‌ ಸತ್ಯಾನ ಗುಂಪಿನವರಾಗಿದ್ದಾರೆ.
 
ಕಾರ್ಯಾಚರಣೆಯಲ್ಲಿ ಚೌಕ್‌ ಠಾಣೆ ಪೇದೆ ಪ್ರಕಾಶ, ಸ್ಟೇಷನ್‌ ಬಜಾರ ಠಾಣೆ ಪೇದೆ ರಾಜಕುಮಾರ, ಗ್ರಾಮೀಣ ಠಾಣೆಯ ನಿಂಗಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ ಚೌಕ್‌ ಇನ್ಸ್‌ಪೆಕ್ಟರ್‌ ಸಂಗಮೇಶ ಹಿರೇಮಠ, ರಾಘವೇಂದ್ರ ನಗರ ಠಾಣೆಯ ಪಿಎಸ್‌ಐ ಅಕ್ಕಮಹಾದೇವಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಮೂವರು ಪೇದೆಗಳನ್ನು ಯುನೈಟೆಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಅಧಿಕಾರಿಗಳು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಎಸ್ಪಿ ಶಶಿಕುಮಾರ ತಿಳಿಸಿದ್ದಾರೆ.

ಗುಂಡೇಟು ತಿಂದು ಗಾಯಗೊಂಡಿರುವ ರೌಡಿಗಳಿಬ್ಬರನ್ನು ನಗರದ ಜಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಮೇಶನ ಎರಡು ಕಾಲುಗಳಿಗೆ ಗುಂಡು ತಗುಲಿದರೆ, ಬಾಬ್ಯಾನ ಬಲಗಾಲಿಗೆ ಗುಂಡು ಬಿದ್ದಿದೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಆಯುಧ ಪೂಜೆ ದಿನ ಮಧ್ಯಾಹ್ನ ಶಹಾಬಜಾರದಲ್ಲಿ ಗ್ಯಾರೇಜ್‌ ಅಂಗಡಿ ನಡೆಸುತ್ತಿದ್ದ ರಾಮಕೃಷ್ಣ ಎನ್ನುವರನ್ನು ಅಪಹರಿಸಿ ಕೋಣೆಯೊಂದರಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಹಣದ ಬೇಡಿಕೆ ಇಟಿದ್ದರು ಎನ್ನುವ ದೂರು ಬಂದ ತಕ್ಷಣ ಎಸ್ಪಿ ಶಶಿಕುಮಾರ ಅವರು ಎಎಸ್ಪಿ ಲೋಕೇಶ ಬಿ. ಜಗಲಾಸರ್‌ ನೇತೃತ್ವದಲ್ಲಿ ಚೌಕ್‌ ಇನ್ಸ್‌ಪೆಕ್ಟರ್‌ ಸಂಗಮೇಶ ಹಿರೇಮಠ, ಸ್ಟೇಷನ್‌ ಬಜಾರದ ಶಕೀಲ್‌ ಅಂಗಡಿ ಮತ್ತಿತರ ಸಿಬ್ಬಂದಿಗಳಿರುವ ವಿಶೇಷ ತಂಡ ರಚಿಸಿದ್ದರು. ಈ ನಡುವೆ ಗುರುವಾರ ರಾತ್ರಿಯೇ ಈ ರೌಡಿಗಳು ನಗರದ ಅಪ್ಪನ ಕೆರೆ ರಸ್ತೆಯಲ್ಲಿ ಹಲವರನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದರು. ತೀವ್ರ ಶೋಧ ಕಾರ್ಯಕ್ಕಿಳಿದ ಪೊಲೀಸರು ತಂಡದ ಜಾಲ ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶೂಟೌಟ್‌ ಹಾಗೂ ಇಬ್ಬರು ಸವಾರರನ್ನು ಸುಲಿಗೆ ಮಾಡಿರುವ ಕುರಿತ ಪ್ರಕರಣಗಳು ಬ್ರಹ್ಮಪುರ ಠಾಣೆಯಲ್ಲಿ ದಾಖಲಾಗಿವೆ.
ಕಿಡ್ನಾಪ್‌ ಮಾಡಿ ಹಿಂಸೆ ನೀಡಿ ಹಣಕ್ಕೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಹಾಕಿದ ಕುರಿತು ಮೆಕ್ಯಾನಿಕ್‌ ರಾಮಕೃಷ್ಣ ಚೌಕ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ 2017ರಲ್ಲಿ ಒಟ್ಟು ಎಂಟು ಫೈರಿಂಗ್‌ ನಡೆದಿದ್ದವು. 

ರೌಡಿಗಳ ಉಪಟಳ ಕಂಡರೆ ಮಾಹಿತಿ ನೀಡಿ 
ಕಲಬುರಗಿ ಮಹಾನಗರದಲ್ಲಿ ರೌಡಿಗಳು ಸಾರ್ವಜನಿಕರಿಗೆ ತೊಂದರೆ ನೀಡಿದಲ್ಲಿ ಇಲ್ಲದೇ ರೌಡಿಗಳ ಉಪಟಳ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಎಸ್ಪಿ ಶಶಿಕುಮಾರ ಹಾಗೂ ಎಎಸ್ಪಿ ಲೋಕೇಶ ಬಿ. ಜಗಲಾಸರ ಮನವಿ ಮಾಡಿದ್ದು, ಮಾಹಿತಿ ನೀಡಿದವರ ಹೆಸರುಗಳನ್ನು
ಗೌಪ್ಯವಾಗಿಡಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು. ರೌಡಿಗಳಾದ ಉಮೇಶ ಮಾಳಗೆ, ಬಾಬು ಸೇರಿದಂತೆ ಇನ್ನಿತರ ರೌಡಿಗಳಿಂದ ಕಿರುಕುಳ ಉಂಟಾಗಿದ್ದರೆ ಮಾಹಿತಿ ನೀಡಬಹುದು. ಯಾವುದೇ ಕಾರಣಕ್ಕೂ ಮಾಹಿತಿ ನೀಡಿದವರ ಹೆಸರು ಬಹಿರಂಗಗೊಳಿಸುವುದಿಲ್ಲ. 

ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ, ಅಮಾಯಕರಿಗೆ ತೊಂದರೆ ನೀಡುವ ಕೆಲಸದಲ್ಲಿ ತೊಡಗಿದವರು ಕಂಡು ಬಂದಲ್ಲಿ, ತಮ್ಮ ಗಮನಕ್ಕೆ ತಂದರೆ ನಿರ್ದಾಕ್ಷಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಒಟ್ಟಾರೆ ರೌಡಿಗಳನ್ನು ಬುಡಸಮೇತ ಮಟ್ಟ ಹಾಕಲು ಇಲಾಖೆ ಸದಾ ಬದ್ಧವಿದೆ ಎಂದು ಹೇಳಿದರು.

ಮಾರಕಾಸ್ತ್ರ ವಶ
ದಾಳಿ ನಡೆಸಿ ಬಂಧಿತವಾಗಿರುವ ರೌಡಿ ಉಮೇಶ ಮಾಳಗೆ ಬಳಿಯಿದ್ದ ಪಿಸ್ತೂಲ್‌ ಹಾಗೂ ಮೂರು ಜೀವಂತ ಗುಂಡುಗಳು, ಮಾರಕಾಸ್ತ್ರ(ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಕಳೆದ ರಾತ್ರಿ ಇಬ್ಬರು ಸವಾರರನ್ನು ಅಡ್ಡಗಟ್ಟಿ ಸುಲಿಗೆ ಮಾಡಿ, ಕಿತ್ತುಕೊಂಡಿದ್ದ ಎರಡು ಬೈಕ್‌ಗಳು ಪತ್ತೆಯಾಗಿವೆ ಎಂದು ಎಂದು ಎಸ್ಪಿ ಶಶಿಕುಮಾರ ಹಾಗೂ ಎಎಸ್ಪಿ ಲೋಕೇಶ ಬಿ.ಜೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಐಜಿಪಿ ಮನೀಷ್‌ ಖರ್ಬೀಕರ್‌, ಎಸ್ಪಿ ಶಶಿಕುಮಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅಪಹರಣಕ್ಕೆ ಕಾರಣ 
ಮಹಾನಗರದ ಜನತೆ ಆಯುಧ ಪೂಜೆ ಹಾಗೂ ದಸರಾ ಸಂಭ್ರಮದಲ್ಲಿ ಮುಳುಗಿದ್ದರೆ ಶಹಾಬಜಾರದಲ್ಲಿರುವ ರಾಮಕೃಷ್ಣನ ಗ್ಯಾರೇಜ್‌ಗೆ ಬಂದ ಮಾಳಗೆ ಗುಂಪಿನವರು ಬೈಕ್‌ (ಮಾಡಿಫಿಕೇಷನ್‌) ಸ್ವರೂಪ ಬದಲು ಮಾಡಿಕೊಡಬೇಕೆಂದು ಕೇಳಿದ್ದರು.  ಆಗೋದಿಲ್ಲ ಎಂದಿದ್ದಕ್ಕೆ ಆತನ ಕಣ್ಣು ಕಟ್ಟಿ ಅಪಹರಿಸಿದ್ದರು. ನಂತರ ಆತನನ್ನು ಕೆಲ ಜಾಗಗಳಿಗೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡಿದ್ದಲ್ಲದೇ, ಆತನ ಬಳಿಯಿದ್ದ ಎಟಿಎಂ ಕಾರ್ಡ್‌,
ಹಣ, ಮೊಬೈಲ್‌ ಕಿತ್ತುಕೊಂಡಿದ್ದರು. ತದನಂತರ ಒಂದು ಲಕ್ಷ ರೂ. ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆತನ ಎಟಿಎಂ ಕಾರ್ಡ್‌ ಬಳಸಿ ಹಣ ಸಹ ಡ್ರಾ ಮಾಡಿಕೊಂಡಿದ್ದರು. ಮಾಳಗೆ ಗುಂಪಿನವರು ಹಣ ಡ್ರಾ ಮಾಡಿಕೊಳ್ಳುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ಗುರುವಾರ ರಾತ್ರಿ 10 ಗಂಟೆಯವರೆಗೂ ರಾಮಕೃಷ್ಣನನ್ನು ತಮ್ಮ ಬಳಿಯೇ ಇರಿಸಿಕೊಂಡು, ಉಳಿದ ಹಣವನ್ನು ನಾಳೆ ತಂದು ಕೊಡು, ಕೊಡದಿದ್ದರೆ ನಿನ್ನನ್ನು ಇಲ್ಲವೇ, ನಿಮ್ಮ ಮನೆಯಲ್ಲಿ ಒಬ್ಬರನ್ನು ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿ ಬಿಟ್ಟು ಕಳುಹಿಸಿದ್ದರು. ರೌಡಿಗಳು ಬಿಟ್ಟ ನಂತರ ರಾಮಕೃಷ್ಣ ನೇರವಾಗಿ ಪೊಲೀಸರ ಬಳಿ ಹೋಗಿ ಆಗಿರುವ ಘಟನೆ ವಿವರಿಸಿ ರಕ್ಷಣೆ ನೀಡುವಂತೆ ಕೋರಿದ್ದರು. ತಕ್ಷಣ ಎಸ್ಪಿ ಶಶಿಕುಮಾರ ಎಎಸ್ಪಿ ಲೋಕೇಶ ಬಿ.ಜೆ. ನೇತೃತ್ವದ ತಂಡ ರಚಿಸಿ ಶೋಧ ಕಾರ್ಯಕ್ಕೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next