Advertisement
ಕೋರಮಂಗಲದಲ್ಲಿರುವ ರಹೇಜಾ ಆರ್ಕೆಡ್‌ನಲ್ಲಿರುವ ಫಾರ್ಮ್ ಇಂಡಿಯಾ ಇಂಪ್ಲಿಕ್ಸ್ ಪ್ರೈ.ಲಿಮೆಟೆಡ್ ಕಂಪೆನಿ ಮಾಲೀಕ ಕನ್ಹಯ್ಯ ಲಾಲ್ ಅಗರ್‌ವಾಲ್(54) ಮೇಲೆ ಶನಿವಾರ ಮಧ್ಯಾಹ್ನ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಕನ್ಹಯ್ಯ ಲಾಲ್ ಅವರ ತಲೆಗೆ ಪೆಟ್ಟಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
Related Articles
Advertisement
ಮಧ್ಯಾಹ್ನ 2ಗಂಟೆ ಸುಮಾರಿಗೆ ಒಬ್ಬ ಹೆಲ್ಮೆಟ್‌ಧಾರಿ ಸೇರಿದಂತೆ ಮೂವರು ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ಕಚೇರಿಗೆ ನುಗ್ಗಿದ್ದಾರೆ. ಕೂಡಲೇ ಕನ್ಹಯ್ಯ ಅವರ ಪುತ್ರರಿಬ್ಬರು ದುಷ್ಕರ್ಮಿಗಳನ್ನು ತಡೆದು ಪ್ರಶ್ನಿಸಿದಾಗ ಕೆಲಸ ಕೇಳಿಕೊಂಡು ಬಂದಿರುವುದಾಗಿ ಸಬೂಬು ಹೇಳಿದ್ದಾರೆ. ಸದ್ಯಕ್ಕೆ ಯಾವುದೇ ಕೆಲಸವಿಲ್ಲ ಎಂದು ಕನ್ಹಯ್ಯ ಪುತ್ರರು ಹೇಳುತ್ತಿದ್ದಂತೆ ಮಾತಿನ ನಡುವೇ ಒಬ್ಬ ದುಷ್ಕರ್ಮಿ ಪಿಸ್ತೂಲ್ ತೆಗೆದು ಸುಮಾರು 15 ಅಡಿ ದೂರದಲ್ಲಿ ಗಾಜಿನ ಕ್ಯಾಬಿನ್ ಒಳಗೆ ಕುಳಿತಿದ್ದ ಕನ್ಹಯ್ಯ ಅವರತ್ತ ಗುಂಡು ಹಾರಿಸಿದ್ದಾನೆ.
ಕಚೇರಿಯಲ್ಲೇ ಇದ್ದ ಕಿರಿಯ ಮಗ ರಿಷಿ ಅಗರ್‌ವಾಲ್ ತನ್ನ ತಂದೆಯ ಸಹಾಯಕ್ಕೆ ಧಾವಿಸಿ ಕ್ಯಾಬಿನ್‌ಗೆ ತೆರಳಿ ಟೇಬಲ್‌ನ ಕೆಳಗೆ ಅವಿತುಕೊಳ್ಳುವಂತೆ ಮಾಡಿದ್ದಾನೆ. ಅಷ್ಟರಲ್ಲೇ ಮತ್ತೂರ್ವ ದುಷ್ಕರ್ಮಿ ಎರಡು ಗುಂಡು ಹಾರಿಸಿದ್ದು ಒಂದು ಗುಂಡು ಟೇಬಲ್ ಸೀಳಿಕೊಂಡು ಕನ್ಹಯ್ಯ ಅವರ ತಲೆ ಸವರಿಕೊಂಡು ಹೋಗಿದೆ. ರಕ್ತಸ್ರಾವವಾಗಿ ಕೆಳಗೆ ಬಿದ್ದ ಕನ್ಹಯ್ಯ ಅವರನ್ನು ಕೂಡಲೇ ಕಚೇರಿ ಸಿಬ್ಬಂದಿ, ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಉದ್ಯಮ ವಹಿವಾಟಿಗೆ ಸಂಬಂಧಿಸಿದ ದ್ವೇಷದ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆಸಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಗಾಯಾಳು ಕನ್ಹಯ್ಯ ಚೇತರಿಸಿಕೊಂಡ ಬಳಿಕ ಮತ್ತಷ್ಟು ನಿಖರ ಕಾರಣ ಗೊತ್ತಾಗಲಿದೆ. ಸದ್ಯ ದುಷ್ಕರ್ಮಿಗಳ ಬಗ್ಗೆ ಮಾಹಿತಿ ಸಿಕ್ಕಿದ್ದು ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸವಿದೆ. -ಡಾ.ಬೋರಲಿಂಗಯ್ಯ, ಡಿಸಿಪಿ, ಆಗ್ನೇಯ ವಿಭಾಗ