ಜಮ್ಮು: ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಯನ್ನು ಮುಂದುವರಿಸಿರುವ ಪಾಕಿಸ್ಥಾನ, ಶನಿವಾರ ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ಎಲ್‌ಒಸಿಯಲ್ಲಿ ಮುಂಚೂಣಿ ನೆಲೆಗಳು ಹಾಗೂ ಗಡಿ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆಯೂ ಪರಿಣಾಮಕಾರಿಯಾಗಿ ಪ್ರತ್ಯುತ್ತರ ನೀಡಿದೆ. ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.
ನೋಡಲ್ ಅಧಿಕಾರಿಗಳ ನೇಮಕ: ಈ ನಡುವೆ, ಕಾಶ್ಮೀರಿಗರಿಗೆ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಶನಿವಾರ ನೋಡಲ್ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಕೇಂದ್ರ ಗೃಹ ಇಲಾಖೆಯ ವೆಬ್‌ಸೈಟ್‌ನಲ್ಲಿ ಈ ಅಧಿಕಾರಿಗಳ ವಿವರಗಳನ್ನು ಪ್ರಕಟಿಸಲಾಗಿದೆ.
ಮೂವರ ಮೇಲೆ ಕೇಸ್: ಪುಲ್ವಾಮಾ ದಾಳಿಯ ಬಳಿಕ ಭಾರತೀಯ ಸೇನೆಯ ಬಗ್ಗೆ ಅವಹೇಳನಕಾರಿ ಸಂದೇಶ ರವಾನಿಸಿದ್ದ ಉತ್ತರಪ್ರದೇಶದ ಬರೇಲಿಯ ಇಂಡಿಯನ್ ವೆಟರಿನರಿ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಮೂವರು ಕಾಶ್ಮೀರಿ ವಿದ್ಯಾರ್ಥಿನಿಯರ ವಿರುದ್ಧ ಕೇಸು ದಾಖಲಿಸಲಾಗಿದೆ. ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಅಮಿತ್ ಶರ್ಮಾ ಎಂಬವರು ನೀಡಿದ ದೂರಿನನ್ವಯ ಕೇಸು ದಾಖಲಿಸಲಾ ಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕ್ ಕಾನ್ಸುಲೇಟ್ ಮುಂದೆ ಪ್ರತಿಭಟನೆ: ಏತನ್ಮಧ್ಯೆ, ನ್ಯೂಯಾರ್ಕ್‌ನಲ್ಲಿರುವ ಪಾಕಿಸ್ಥಾನದ ರಾಯಭಾರಿ ಕಚೇರಿ ಮುಂದೆ ಭಾರೀ ಸಂಖ್ಯೆಯ ಭಾರತೀಯ-ಅಮೆರಿಕನ್ನರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ. ಪುಲ್ವಾಮಾ ದಾಳಿ ಖಂಡಿಸಿ ಹಾಗೂ ತಪ್ಪಿತಸ್ಥರಾದ ಪಾಕ್ ಮೂಲದ ಉಗ್ರ ಸಂಘಟನೆಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ.
ಪಾಕ್ ಅಧಿಕಪ್ರಸಂಗಿತನ: ಪುಲ್ವಾಮಾ ದಾಳಿಯ ಹೊಣೆ ಹೊತ್ತಿರುವ ಜೈಶ್ ಉಗ್ರ ಸಂಘಟನೆಯ ವಿಚಾರದಲ್ಲಿ ಮೌನಕ್ಕೆ ಶರಣಾಗಿರುವ ಪಾಕಿಸ್ಥಾನ, ಮತ್ತೆ ಕಾಶ್ಮೀರದ ವಿಚಾರದಲ್ಲಿ ಮೂಗು ತೂರಿಸುವ ಮೂಲಕ ಅಧಿಕಪ್ರಸಂಗಿತನವನ್ನು ಪ್ರದರ್ಶಿಸಿದೆ. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಆರೋಪಿಸಿ ವಿಶ್ವಸಂಸ್ಥೆಗೆ ಪಾಕ್ ವಿದೇಶಾಂಗ ಸಚಿವ ಶಾ ಮೆಹೂ¾ದ್ ಖುರೇಷಿ ಪತ್ರ ಬರೆದಿದ್ದಾರೆ.
ಅಷ್ಟೇ ಅಲ್ಲ, ಮಾನವ ಹಕ್ಕು ಉಲ್ಲಂಘನೆ ವಿಚಾರದಿಂದ ಜಗತ್ತಿನ ಗಮನ ಬೇರೆಡೆಗೆ ಸೆಳೆಯುವ ಉದ್ದೇಶದಿಂದಲೇ ಭಾರತವು ಪಾಕ್ ಮೇಲೆ ಪುಲ್ವಾಮಾ ದಾಳಿಯ ಆರೋಪ ಹೊರಿಸಿದೆ ಎಂದೂ ಆರೋ ಪಿಸುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದಾರೆ.