ಕೊಹಿಮಾ: ನಾಗಾಲ್ಯಾಂಡ್‌ನ ಓಟಿಂಗ್‌ನಲ್ಲಿ ಶನಿವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಹಲವಾರು ನಾಗರಿಕರು ಸಾವನ್ನಪ್ಪಿದ್ದಾರೆ. ಸ್ಥಳೀಯರ ಪ್ರಕಾರ, ಘಟನೆಯ ಸ್ಥಳದಿಂದ ಇದುವರೆಗೆ ಆರು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಓಟಿಂಗ್ ಗ್ರಾಮದ ಜನರ ಗುಂಪೊಂದು ಪಿಕ್-ಅಪ್ ಮಿನಿ ಟ್ರಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ. ಹಲವು ಗಂಟೆಗಳಾದರೂ ಅವರು ಹಿಂತಿರುಗದ ಕಾರಣ ಗ್ರಾಮದ ಹಲವರು ಅವರನ್ನು ಹುಡುಕಲು ಹೋದಾಗ ಟ್ರಕ್‌ನಲ್ಲಿ ಅವರ ಮೃತದೇಹಗಳು ಪತ್ತೆಯಾಗಿವೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಸಿದ್ದರಾಮಯ್ಯಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ: ವಿಡಿಯೋ ವೈರಲ್
ಘಟನೆಯ ನಂತರ ಕೋಪಗೊಂಡ ಸ್ಥಳೀಯರು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ. ವಾಹನಗಳು ಭದ್ರತಾ ಪಡೆಗಳಿಗೆ ಸೇರಿದವು ಎಂದು ವರದಿಯಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ, ಇದು “ಅತ್ಯಂತ ಖಂಡನೀಯ”. ಉನ್ನತ ಮಟ್ಟದ ತನಿಖೆ ಮಾಡಲಾಗುತ್ತದೆ ಎಂದು ಹೇಳಿದರು. ಸಮಾಜದ ಎಲ್ಲ ವರ್ಗದವರೂ ಶಾಂತಿಯಿಂದ ಇರಬೇಕೆಂದು ಮನವಿ ಮಾಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾನುವಾರ ಬೆಳಗ್ಗೆ ಟ್ವೀಟ್ ಮಾಡಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.