Advertisement

ಕಲಬುರಗಿಯಲ್ಲಿ ಮತ್ತೆ ಗುಂಡಿನ ಸದ್ದು

08:39 AM Dec 02, 2017 | Team Udayavani |



Advertisement

ಕಲಬುರಗಿ: ನಗರದಲ್ಲಿ ಸುಲಿಗೆ ಮಾಡುತ್ತಿದ್ದವರನ್ನು ಬಂಧಿಸಲು ತೆರಳಿದ ವೇಳೆ, ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಪೊಲೀಸರು ಒಬ್ಬನ ಮೇಲೆ ಗುಂಡು ಹಾರಿಸಿ ಬಂಧಿಸಿದ ಘಟನೆ ನಗರದ ಹೊರವಲಯದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಆರೋಪಿ ಮಹ್ಮದ್‌ ಇರ್ಫಾನ್‌ ಅನ್ನು ಬಂಧಿಸಿದ್ದು, ಪಿಎಸ್‌ಐ ವಾಹೀದ್‌ ಕೋತ್ವಾಲ ಹಾಗೂ ಗ್ರಾಮೀಣ ಠಾಣೆಯ ಪೇದೆಗಳಾದ ಹುಸೇನ ಬಾಷಾ
ಹಾಗೂ ಕೇಶವ ದುಷ್ಕರ್ಮಿಗಳ ಹಲ್ಲೆಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ನಗರದ ಹೊರವಲಯ ಕೆಸರಟಗಿ ಗಾರ್ಡನ್‌ ಬಳಿಯ ಜಿಡಿಎ ಲೇಔಟ್‌ನಲ್ಲಿ ಬಿದ್ದಾಪೂರ ಕ್ರಾಸ್‌ ಬಳಿ ವ್ಯಕ್ತಿಯೊಬ್ಬರನ್ನು ಬೆದರಿಸಿ ಸುಲಿಗೆ ಮಾಡಿ ಪರಾರಿಯಾಗಿದ್ದವರ ಸುಳಿವಿನ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಆರೋಪಿ ಮಹ್ಮದ್‌ ಇರ್ಫಾನ್‌,
ಮಹ್ಮದ ಯುಸೂಫ್‌ (24) ಹಾಗೂ ಆತನ ಇಬ್ಬರು ಸಹಚರರು ಕಲ್ಲು ಹಾಗೂ ತಲವಾರಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಫರತಾಬಾದ್‌ ಪಿಎಸ್‌ಐ ವಾಹೀದ್‌ ಕೋತ್ವಾಲ್‌ ರಿವಾಲ್ವರ್‌ನಿಂದ ಮಹ್ಮದ್‌ ಇರ್ಫಾನ್‌ ಕಾಲಿಗೆ ಗುಂಡು ಹಾರಿಸಿದ್ದಾರೆ. ಸಹಚರರು ಪರಾರಿಯಾಗಿದ್ದು, ಮಹ್ಮದ ಇರ್ಫಾನ್‌ನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇರ್ಫಾನ್‌ ಯಾರು ?: ಮಹ್ಮದ ಇರ್ಫಾನ್‌ ಕುಖ್ಯಾತ ಸುಲಿಗೆ ಕೋರನಾಗಿದ್ದು, ಸಹಚರರೊಂದಿಗೆ ನಗರದ ಹೊರವಲಯದ ಸಿರನೂರ ಬಳಿ ಗುರುವಾರ ಮಧ್ಯ ರಾತ್ರಿ ಬಿದ್ದಾಪುರ ಕ್ರಾಸ್‌ ಬಳಿ ಅಮರ್‌ ವೈನ್ಸ್‌ ಮ್ಯಾನೇಜರ್‌ನನ್ನು ಅಡ್ಡಗಟ್ಟಿ ಆತನ ಬಳಿಯಿದ್ದ 3,420 ರೂ. ಮೌಲ್ಯದ ಮೊಬೈಲ್‌ ಹಾಗೂ ಟಿವಿಎಸ್‌ ದ್ವಿಚಕ್ರ ವಾಹನವನ್ನು ದೋಚಿಕೊಂಡು ಪರಾರಿಯಾಗಿದ್ದರು.ಈ ಸುದ್ದಿ ರಾತ್ರಿ 2
ಗಂಟೆಗೆ ಎಸ್‌ಪಿ ಎನ್‌.ಶಶಿಕುಮಾರ ಅವರಿಗೆ ತಿಳಿಯುತ್ತಿದ್ದಂತೆ ನಾಲ್ಕು ತಂಡಗಳನ್ನು ರಚಿಸಿ ಹುಡುಕಾಟಕ್ಕೆ ಕಳಿಸಿದ್ದರು. ನಂತರ ಆರೋಪಿಯನ್ನು ಹಿಡಿಯುವಲ್ಲಿ ತಂಡ ಯಶಸ್ವಿಯಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next