Advertisement
ಪಟಾಕಿ ಸಿಡಿಸುವುದರಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮ ಹಾಗೂ ಮನುಷ್ಯರಿಗೆ ಉಂಟುಮಾಡುವ ಅಪಾಯದ ಬಗ್ಗೆ ಜನರು ಎಚ್ಚರಗೊಂಡಿದ್ದಾರೆ. ಹಾಗಾಗಿ ಹಬ್ಬದ ಸಮಯದಲ್ಲಿ ಪಟಾಕಿ ಸದ್ದು ಕ್ಷೀಣಿಸುತ್ತಿದೆ. ಹಲವಾರು ವರ್ಷದಿಂದ ಪಟಾಕಿ ಬೆಲೆಯಲ್ಲಿ ಏರಿಕೆ ಕಾಣದಿದ್ದರೂ ಜನ ಮಾತ್ರ ಅದರ ಆಕರ್ಷಣೆಗೆ ಒಳಗಾಗದೆ ದೂರವೇ ಉಳಿದಿದ್ದಾರೆ. ಹಬ್ಬದ ಸಮಯದಲ್ಲಿ ಲಕ್ಷಾಂತರ ಬಂಡವಾಳ ಹೂಡಿ ಮಾರಾಟಕ್ಕಿಳಿಯುವವರುಇದೀಗ ನಷ್ಟದ ಹಾದಿ ಹಿಡಿದಿದ್ದಾರೆ.
Related Articles
Advertisement
ಹಸಿರು ಪಟಾಕಿಗಳ ಸ್ಟಿಕ್ಕರ್: ಈ ವರ್ಷ ಹಸಿರು ಪಟಾಕಿಗಳ ಹೆಸರಿನಲ್ಲಿ ಕೆಲ ಮಾರುಕಟ್ಟೆಗೆ ಬಂದಿವೆಯಾದರೂ ಅವುಗಳ ನಿಖರತೆ ಅರಿಯಲು ಸಾಧ್ಯವಾಗುತ್ತಿಲ್ಲ. ಪಟಾಕಿ ಮಾರಾಟಗಾರರು ಪ್ರತಿ ವರ್ಷ ಮಾರಾಟ ಮಾಡುವ ಪಟಾಕಿಗಳನ್ನೇ ಈಗಲೂ ಮಾರಾಟಕ್ಕೆ ಇಟ್ಟಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೂ ಯಾವ ಪಟಾಕಿಗಳನ್ನು ಮಾರಾಟ ಮಾಡಬೇಕು. ಯಾವುದನ್ನು ನಿಷೇಧ ಮಾಡಲಾಗಿದೆ ಎಂಬ ಬಗ್ಗೆ ಮೇಲ ಧಿಕಾರಿಗಳಿಂದ ಸ್ಪಷ್ಟ ಮಾರ್ಗಸೂಚಿ ಬಂದಿಲ್ಲ. ಹೀಗಾಗಿ ಗೊಂದಲ ಮೂಡಿದೆ. ರಾತ್ರಿ 8 ರಿಂದ 10 ಗಂಟೆಗೆ ಸೀಮಿತವಾಗಿ ಪಟಾಕಿ ಸಿಡಿಸಬೇಕು. ಆ ನಂತರವೂ ಪಟಾಕಿ ಸಿಡಿಸಿದರೆ ಕಾನೂನುಕ್ರಮ ಜರುಗಿಸುವ ಎಚ್ಚರಿಕೆ ಮಾತ್ರ ಹೊರಬಿದ್ದಿದೆ.
ಮಳೆ ಭೀತಿ:ಈ ಬಾರಿ ಪಟಾಕಿ ಮಾರಾಟಕ್ಕೆ ಮಳೆ ಕಾಟವೂ ಅಡ್ಡಿಯಾಗಿದೆ. ಮಳಿಗೆ ಇರುವ ಜಾಗ ಸಮತಟ್ಟಾಗಿಲ್ಲ. ಮಳೆ ಸುರಿದರೆ ನೀರೆಲ್ಲವೂ ಮಳಿಗೆಯೊಳಗೆ ಹರಿದುಬರುತ್ತಿದೆ. ಹಾಗಾಗಿ ರಟ್ಟಿನ ಬಾಕ್ಸ್‌ಗಳನ್ನು ಕೆಳಕ್ಕೆ ಹಾಸಿ ಮರದ ಸ್ಟ್ಯಾಂಡ್‌ಗಳ ಮೇಲೆ ಪಟಾಕಿ ಜೋಡಿಸಿಡಲಾಗಿದೆ. ಮಳಿಗೆ ಮುಂಭಾಗಕ್ಕೆ ಮರದ ಆಧಾರದೊಂದಿಗೆ ಪ್ಲಾಸ್ಟಿಕ್ ಹೊದಿಕೆ ನಿರ್ಮಿಸಿ ಮಳೆಯಿಂದ ಪಟಾಕಿಗಳನ್ನು ರಕ್ಷಣೆ ಮಾಡಿದೆ.
ಭಾರೀ ಶಬ್ಧದ ಪಟಾಕಿ ಮಾರದಂತೆ ಸೂಚನೆ: ಭಾರೀ ಪ್ರಮಾಣದಲ್ಲಿ ಶಬ್ಧ ಬರುವ ಪಟಾಕಿಗಳನ್ನು ಮಾರಾಟ ಮಾಡದಂತೆ ಮಾರಾಟಗಾರರಿಗೆ ಸೂಚನೆ ನೀಡಲಾಗಿದೆ. ಈ ಬಾರಿ ಒಳಾಂಗಣ ಕ್ರೀಡಾಂಗಣದ ಬಳಿ 15 ಮಳಿಗೆಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ವಿದ್ಯುತ್ಛಕ್ತಿ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಪಟಾಕಿಗಳ ಬಗೆಯ ಬಗ್ಗೆ ಯಾವುದೇ ಮಾರ್ಗಸೂಚಿ ಬಂದಿಲ್ಲ. ಆದರೂ, ಪರಿಸರಕ್ಕೆ ಹಾನಿ ಉಂಟುಮಾಡುವ ಪಟಾಕಿಗಳನ್ನು ಮಾರಾಟ ಮಾಡದಂತೆ ಸೂಚಿಸಿದ್ದೇವೆಂದು ನಗರಸಭೆ ಪೌರಾಯುಕ್ತ ಎಸ್. ಲೋಕೇಶ್ ತಿಳಿಸಿದ್ದಾರೆ.
-ಮಂಡ್ಯ ಮಂಜುನಾಥ್