Advertisement

ನಿರಂತರ ಮಳೆಗೆ ಸದ್ದು ಮಾಡದ ಪಟಾಕಿ

08:50 PM Oct 26, 2019 | Lakshmi GovindaRaju |

ಮೈಸೂರು: ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿಗಳ ಢಂ, ಢುಂ ಸದ್ದಿಗೆ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ತಡೆಯೊಡ್ಡಿದೆ. ಪದೇ ಪದೆ ಸುರಿಯುತ್ತಿರುವ ಮಳೆಯಿಂದಾಗಿ ಜನರು ಪಟಾಕಿ ಅಂಗಡಿಗಳತ್ತ ಇನ್ನೂ ಮುಖಮಾಡಿಲ್ಲ.

Advertisement

ನಗರದ ಹೆಬ್ಬಾಳ್‌ ಕೈಗಾರಿಕೆ ಪ್ರದೇಶದಲ್ಲಿ ವರ್ಷ ಪೂರ್ತಿ ಪಟಾಕಿ ಮಾರಾಟ ಮಾಡುವ ಅಂಗಡಿಗಳ ಜೊತೆಗೆ ಜೆ.ಕೆ.ಮೈದಾನದಲ್ಲಿ 14 ಮಳಿಗೆ, ಹೆಬ್ಬಾಳ್‌, ಕುವೆಂಪುನಗರದ ಬಂದಂತಮ್ಮ ಕಾಳಮ್ಮ ದೇವಸ್ಥಾನ, ಚಾಮುಂಡಿಪುರಂ ವೃತ್ತ, ಬಲ್ಲಾಳ್‌ ವೃತ್ತ, ದಸರಾ ವಸ್ತು ಪ್ರದರ್ಶನದ ಬಳಿ ತಲಾ ಐದು ಪಟಾಕಿ ಮಳಿಗೆಗಳಿಗೆ ಮಹಾ ನಗರಪಾಲಿಕೆ ಅನುಮತಿ ನೀಡಿದೆ.

ಬಣ್ಣ ಬಣ್ಣದ ಬಾಕ್ಸ್‌ಗಳಲ್ಲಿ ಆಟಂಬಾಂಬ್‌, ಲಕ್ಷ್ಮೀಪಟಾಕಿ, ಚಿನಕುರಳಿ ಪಟಾಕಿ, ಸುರ್‌ಸುರ್‌ಬತ್ತಿ, ಕೃಷ್ಣ ಚಕ್ರ, ಹೂ ಕುಂಡಗಳು, ರಾಕೆಟ್‌ಗಳು, ಬಾನಲ್ಲಿ ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಆಕರ್ಷಕ ಪಟಾಕಿಗಳು ಗಮನ ಸೆಳೆಯುತ್ತಿವೆ. ಆದರೆ, ಜೆ.ಕೆ.ಮೈದಾನದಲ್ಲಿ ಪಟಾಕಿ ಮಾರಾಟಗಾರರು ಅಂಗಡಿ ತೆರೆದು ಕುಳಿತಿದ್ದರೂ ಮಳೆಯಿಂದಾಗಿ ಇಡೀ ಮೈದಾನ ಕೆಸರುಗದ್ದೆಯಾಗಿರುವುದರಿಂದ ಜನರು ಅತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ.

2018ರಲ್ಲಿ ಸುಪ್ರೀಂಕೋರ್ಟ್‌ ಸಾಂಪ್ರದಾಯಿಕ ಪಟಾಕಿಗಳನ್ನು ನಿಷೇಧಿಸಿ ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ ನೀಡಿದೆ. ಕಳೆದ ವರ್ಷ ಮೈಸೂರಿನಲ್ಲೆಲ್ಲೂ ಕಾಣದ ಹಸಿರು ಪಟಾಕಿ ಈ ವರ್ಷ ಅಲ್ಲೊಂದು ಇಲ್ಲೊಂದು ಅಂಗಡಿಯಲ್ಲಿ ಕಂಡುಬಂದರೂ ಜನ ಖರೀದಿಸಲು ಇಷ್ಟಪಡುತ್ತಿಲ್ಲ. ಹಸಿರು ಪಟಾಕಿ, ಸಾಂಪ್ರದಾಯಿ ಪಟಾಕಿಗಳಿಗಿಂತ ಶೇ.30ರಷ್ಟು ಮಾಲಿನ್ಯ ಕಡಿಮೆ ಮಾಡಲಿದೆ.

ಪಟಾಕಿ ಖರೀದಿಗೆ ನಿರಾಸಕ್ತಿ: ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ವಿವಿಧ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು ಪಟಾಕಿ ಹೊಡೆಯದಂತೆ ಜನಜಾಗೃತಿ ಮೂಡಿಸುವುದರಿಂದ ವರ್ಷದಿಂದ ವರ್ಷಕ್ಕೆ ಪಟಾಕಿ ಹೊಡೆಯುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಈ ಬಾರಿಯೂ ಇದರ ಪರಿಣಾಮ ಉಂಟಾಗಿದೆ. ದೀಪಾವಳಿ ಹಬ್ಬಕ್ಕೆ ಒಂದು ದಿನ ಮಾತ್ರವೇ ಬಾಕಿ ಉಳಿದಿದ್ದರೂ ಸಾರ್ವಜನಿಕರು ಪಟಾಕಿ ಖರೀದಿಸುವಲ್ಲಿ ನಿರಾಸಕ್ತಿ ತೋರಿದ್ದಾರೆ. ಹೀಗಾಗಿ ನಗರದ ಬಹುತೇಕ ಪಟಾಕಿ ಮಳಿಗೆಗಳ ಮುಂದೆ ಬೆರಳೆಣಿಕೆ ಗ್ರಾಹಕರು ಕಂಡುಬಂದರು. ಮಹಿಳೆಯರು ಮತ್ತು ಮನೆಯಲ್ಲಿ ಸಣ್ಣ ಮಕ್ಕಳಿರುವವರು ಮಾತ್ರ ಹಸಿರು ಪಟಾಕಿ ಖರೀದಿಗೆ ಆಸಕ್ತಿ ತೋರಿದರೆ, ಇನ್ನುಳಿದವರು ಸಾಂಪ್ರದಾಯಿಕ ಪಟಾಕಿಗಳತ್ತಲೇ ದೃಷ್ಟಿ ನೆಟ್ಟಿದ್ದಾರೆ.

Advertisement

ಚೀಟಿಯಿಂದಲೂ ಹೊಡೆತ: ಬಡಾವಣೆಗಳಲ್ಲಿ ಅನಧಿಕೃತವಾಗಿ ನಡೆಯುವ ಪಟಾಕಿ ಚೀಟಿ ಕೂಡ ವರ್ಷದಿಂದ ವರ್ಷಕ್ಕೆ ಪಟಾಕಿ ಮಾರಾಟಕ್ಕೆ ಹೊಡೆತ ನೀಡುತ್ತಿದೆ. ತಿಂಗಳಿಗೆ 100 ರೂಪಾಯಿಯಿಂದ ಸಾವಿರ ರೂಪಾಯಿವರೆಗೂ ಪಟಾಕಿ ಚೀಟಿ ನಡೆಯುತ್ತಿದ್ದು, 12 ತಿಂಗಳ ಕಾಲ ಚೀಟಿ ಕಟ್ಟಿದರೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚೀಟಿಯ ಹಣದ ಜೊತೆಗೆ ಪಟಾಕಿ ಮತ್ತು ಸ್ವೀಟ್ಸ್‌ ಬಾಕ್ಸ್‌ ಕೊಡುವುದಲ್ಲದೆ, ಹೆಚ್ಚಿನ ಮೊತ್ತದ ಚೀಟಿಯಾದರೆ ಬೆಳ್ಳಿ ನಾಣ್ಯ, ಬೆಳ್ಳಿ ವಿಗ್ರಹಗಳನ್ನೂ ಉಡುಗೊರೆಯಾಗಿ ನೀಡಲಾಗುತ್ತದೆ. ಹೀಗಾಗಿ ಹೆಚ್ಚಿನವರು ಪಟಾಕಿ ಚೀಟಿ ಕಟ್ಟುವುದರಿಂದ ಹಬ್ಬದಲ್ಲಿ ಪಟಾಕಿ ಅಂಗಡಿಗಳತ್ತ ಬರುವುದಿಲ್ಲ ಎನ್ನುತ್ತಾರೆ ಪಟಾಕಿ ಮಾರಾಟಗಾರ ದೀಪಕ್‌.

ತಂಡ ರಚನೆ: ನಿಷೇಧಿತ ಪಟಾಕಿಗಳ ಮಾರಾಟ ತಡೆಗಟ್ಟಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಪೊಲೀಸ್‌ ಮತ್ತು ಪಾಲಿಕೆ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಿ, ಪಟಾಕಿ ಮಾರಾಟ ಮಾಡುವ ಕಡೆಗಳಲ್ಲಿ ದಾಳಿ ನಡೆಸಿ, ನಿಷೇಧಿತ ಪಟಾಕಿಗಳ ವ್ಯಾಪಾರ ಕಂಡುಬಂದರೆ ಅಂಥವನ್ನು ಮುಟ್ಟುಗೋಲು ಹಾಕಿಕೊಂಡು, ವ್ಯಾಪಾರಸ್ಥರಿಗೆ ದಂಡ ವಿಧಿಸಲು ಮುಂದಾಗಿದೆ. ಶಬ್ದ ಮತ್ತು ವಾಯು ಮಾಲಿನ್ಯ ನಿಯಂತ್ರಿಸುವ ಸಂಬಂಧ 125 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಉಂಟುಮಾಡುವ ಪಟಾಕಿಗಳ ತಯಾರಿಕೆ ಮತ್ತು ಮಾರಾಟ ನಿಷೇಧಿಸಿದ್ದು,

ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ರಾತ್ರಿ 10ರಿಂದ ಬೆಳಗೆಗ 6ಗಂಟೆವರೆಗೆ ಪಟಾಕಿ ಸುಡುವಂತಿಲ್ಲ. ಜೊತೆಗೆ ಕಸವನ್ನು ನಿಯಂತ್ರಿಸುವ ಸಲುವಾಗಿ ಭಾರೀ ಸರ ಪಟಾಕಿಗಳನ್ನು ನಿಷೇಧಿಸಲಾಗಿದೆ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿ ಮೈಸೂರು ಪ್ರಾದೇಶಿಕ ಕಚೇರಿ ಪರಿಸರ ಅಧಿಕಾರಿ ಬಿ.ಎಂ.ಪ್ರಕಾಶ್‌. ಹೆಬ್ಬಾಳ್‌ ಕೈಗಾರಿಕೆ ಪ್ರದೇಶದಲ್ಲಿನ ಮಳಿಗೆಗಳಲ್ಲಿ ವರ್ಷಪೂರ್ತಿ ಪಟಾಕಿ ಮಾರಾಟ ನಡೆದರೆ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ತೆರೆಯುವ ಮಳಿಗೆಗಳಲ್ಲಿ 2 ರಿಂದ 3 ದಿನಗಳ ವ್ಯಾಪಾರದಲ್ಲಿ ಲಕ್ಷಾಂತರ ರೂಪಾಯಿ ವಹಿವಾಟು ನಡೆಯಲಿದೆ.

ಆಸ್ಪತ್ರೆಗಳು ಸಜ್ಜು: ದೀಪಾವಳಿ ಹಿನ್ನೆಲೆಯಲ್ಲಿ ಕೃಷ್ಣರಾಜೇಂದ್ರ ಕಣ್ಣಾಸ್ಪತ್ರೆ ಜೊತೆಗೆ ನಗರದ ಎಲ್ಲಾ ಖಾಸಗಿ ನೇತ್ರ ಚಿಕಿತ್ಸಾಲಯಗಳಲ್ಲಿ ದಿನದ 24ಗಂಟೆ ಕರ್ತವ್ಯ ನಿರ್ವಹಿಸಲು ವೈದ್ಯರನ್ನು ಪಾಳಿಯಲ್ಲಿ ನಿಯೋಜಿಸಲಾಗಿದೆ. ಕಳೆದ ವರ್ಷ ಒಂದೆರಡು ಮಕ್ಕಳ ಕಣ್ಣಿಗೆ ಹಾನಿಯಾದ ಪ್ರಕರಣ ಹೊರತುಪಡಿಸಿದರೆ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಈ ವರ್ಷ ಕೂಡ ಸುರಕ್ಷಿತವಾಗಿ ಪಟಾಕಿ ಸಿಡಿಸಿ, ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಿ ಎನ್ನುತ್ತಾರೆ ಡಾ.ರವಿಕುಮಾರ್‌.

ಹಸಿರು ಪಟಾಕಿ ಖರೀದಿಸಲು ಹಿಂದೇಟು: ಕಳೆದ ವರ್ಷ ನಗರದಲ್ಲಿ ಹಸಿರು ಪಟಾಕಿಗಳ ಮಳಿಗೆಗಳು ಇರಲಿಲ್ಲ. ಈ ವರ್ಷ ಹಸಿರು ಪಟಾಕಿ ಮಳಿಗೆಗಳು ಇದ್ದರೂ, ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹಸಿರು ಪಟಾಕಿಗಳಿದ್ದರೂ ಗ್ರಾಹಕರು, ಸಾಂಪ್ರದಾಯಿಕ ಪಟಾಕಿಗಳನ್ನೇ ಕೇಳುತ್ತಿದ್ದಾರೆ. ಹೀಗಾಗಿ ನಗರದಲ್ಲಿ ಹಸಿರು ಪಟಾಕಿಗಳಿಗೆ ಮಹತ್ವ ಹೆಚ್ಚಿದಂತೆ ಕಾಣುತ್ತಿಲ್ಲ.

ಶಬ್ದ ಮತ್ತು ವಾಯು ಮಾಲಿನ್ಯ ಮುಕ್ತ ಎಂದು ಕಲರ್‌ಫ‌ುಲ್‌ ಸೌಂಡ್‌ಲೆಸ್‌ ಹಸಿರು ಪಟಾಕಿಗಳನ್ನು ಪರಿಚಯಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳಷ್ಟೆ ಹಸಿರು ಪಟಾಕಿಗಳನ್ನು ಇಷ್ಟಪಡುತ್ತಾರೆ. ಉಳಿದವರು ಸಾಂಪ್ರದಾಯಿಕ ಪಟಾಕಿಗಳನ್ನೇ ಕೇಳುತ್ತಾರೆ. ಪಟಾಕಿ ಮಾರಾಟ ದರದಲ್ಲಿ ಏರಿಕೆಯಾಗಿಲ್ಲ. ಮಳೆಯಿಂದಾಗಿ ವ್ಯಾಪಾರಕ್ಕೆ ಸ್ವಲ್ಪ ತೊಂದರೆಯಾಗಿದೆ.
-ಶರತ್‌, ಪಟಾಕಿ ವ್ಯಾಪಾರಸ್ಥರು

ಪಟಾಕಿಯ ಹೊಗೆಯಿಂದ ಆಸ್ತಮಾ ರೋಗಿಗಳು, ವಯೋವೃದ್ಧರಿಗೆ ತೊಂದರೆಯಾಗಲಿದ್ದು ಮಾಸ್ಕ್ ಧರಿಸಬೇಕು. ಚರ್ಮ ಕಾಯಿಲೆ ಇರುವವರಿಗೂ ಅಲರ್ಜಿ ಆಗುವ ಸಂಭವ ಹೆಚ್ಚು. ಪಟಾಕಿ ಸುಡುವ ಸಂಭ್ರಮದಲ್ಲಿ ಕಣ್ಣಿಗೆ ಹಾನಿ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ದೂರದಿಂದ ಪಟಾಕಿ ಹಚ್ಚಬೇಕು. ಜೊತೆಗೆ ಕನ್ನಡಕ ಧರಿಸಿ ಹಚ್ಚುವುದು ಒಳಿತು. ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ನೇತ್ರತಜ್ಞರು ರಜೆ ಹಾಕದೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.
-ಡಾ.ವೆಂಕಟೇಶ್‌, ಜಿಲ್ಲಾ ಆರೋಗ್ಯಾಧಿಕಾರಿ

* ಗಿರೀಶ್‌ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next