ಬಂಗಾರಪೇಟೆ: ತಾಲೂಕಿನಲ್ಲಿ ಬಾರಿಯೂ ಧಾರಾಕಾರವಾಗಿ ಮಳೆ ಬೀಳದೇ ಇದ್ದರೂ ರೈತರು ದೀಪಾವಳಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಹಿಂದೆ ಬಿದ್ದಿಲ್ಲ. ದೀಪಾವಳಿ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆ ಶನಿವಾರ ಜನರಿಂದ ಕೂಡಿತ್ತು. ಹಬ್ಬಕ್ಕೆ ಬೇಕಾದ ದಿನಸಿ ಪದಾರ್ಥ, ಪೂಜೆಗೆ ಹೂವು ಹಣ್ಣು ಮತ್ತು ಪಟಾಕಿ ಮಾರಾಟ ಭರ್ಜರಿಯಾಗಿ ನಡೆಯಿತು.
ಬಜಾರ್ ರಸ್ತೆಯಲ್ಲಿರುವ ಅಂಗಡಿಗಳು ಹಬ್ಬಕ್ಕಾಗಿಯೇ ಸಾಕಷ್ಟು ಸಾಮಗ್ರಿಗಳನ್ನು ಶೇಖರಿಸಿಟ್ಟು, ಕೊಡುಗೆ ಇರುವ ವಸ್ತುಗಳ ಬ್ಯಾನರ್ ಮಾಡಿಸಿ ಅಂಗಡಿ ಮುಂದೆ ಕಟ್ಟಿ, ಗ್ರಾಹಕರನ್ನು ಆಕರ್ಷಣೆ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಹೂವಿನ ಬೆಲೆ ಗಗನಕ್ಕೇರಿದ್ದರೂ ದೀಪಾವಳಿ ಹಬ್ಬ ಆಚರಣೆ ಮಾಡಲೇ ಬೇಕಾಗಿರುವ ಕಾರಣ ಚೌಕಾಸಿ ಮಾಡಿಯಾದ್ರೂ ಮಹಿಳೆಯರು ಖರೀದಿ ಮಾಡಿದರು.
20 ಪಟಾಕಿ ಮಾರಾಟ ಅಂಗಡಿ ಆರಂಭ: ದಸರಾ ದಲ್ಲಿ ಅಂಗಡಿಗೆ ಪೂಜೆ ಮಾಡದವರು ದೀಪಾವಳಿಗೆ ಮಾಡುತ್ತಾರೆ. ಹೀಗಾಗಿ ಬಜಾರ್ ರಸ್ತೆಯಲ್ಲಿ ಎಲ್ಲಿ ನೋಡಿದರೂ ಅಂಗಡಿಗಳಿಗೆ ಹೂವು, ದೀಪಾಲಂಕಾರ ಮಾಡುವುದು ಕಂಡು ಬಂತು. ಈ ಹಿಂದೆ ಪುರಸಭೆ ರಂಗಮಂದಿರ ಇದ್ದ ಜಾಗದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಲಾಗಿತ್ತು. ಈಗ ರಂಗಮಂದಿರ ಹೊಡೆದು ಹಾಕಿ ಹೊಸದಾಗಿ ನಿರ್ಮಾಣ ಮಾಡುತ್ತಿರುವುದರಿಂದ ಕೋಲಾರ ಮುಖ್ಯ ರಸ್ತೆಯ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ಖಾಸಗಿ ಜಾಗದಲ್ಲಿ ಪಟಾಕಿ ಮಾರಾಟ ಮಾಡ ಲಾಗುತ್ತಿದೆ. ತಾತ್ಕಾಲಿಕ ಶೆಡ್ ಹಾಕಿಕೊಂಡು 20 ಅಂಗಡಿಗಳಲ್ಲಿ ಪಟಾಕಿ ಮಾರಾಟ ಮಾಡಲಾಗುತ್ತಿದೆ.
ಕರಪತ್ರ ಹಂಚಿ ಪ್ರಚಾರ: ಪಟಾಕಿ ಸುಡುವುದರಿಂದ ಪರಿಸರಕ್ಕೆ ಹಾನಿಯೇ ಹೆಚ್ಚು. ಈ ಬಗ್ಗೆ ಪುರಸಭೆ ಆರೋಗ್ಯ ಇಲಾಖೆಯವರು ಪಟ್ಟಣದಲ್ಲಿ ಕರಪತ್ರ ಹಂಚಿ ಪ್ರಚಾರ ಮಾಡಿದರು. ಆದರೆ, ಹಿಂದಿನಂತೆ ತಾಲೂಕು ಆಡಳಿತ ಹಾಗೂ ಸಂಘ ಸಂಸ್ಥೆಗಳು ಅರಿವುಮೂಡಿಸುವ ಕೆಲಸ ಮಾಡಲಿಲ್ಲ.
ಬಂಗಾರಪೇಟೆ ತಾಲೂಕಿನಲ್ಲಿ ಕಳೆದ ವರ್ಷ ಯಾವುದೇ ಪಟಾಕಿ ಸಿಡಿತದಿಂದ ಅಹಿತಕರ ಘಟನೆಗಳು ಸಂಭವಿಸಿರಲಿಲ್ಲ. ಮಕ್ಕಳು ಪಟಾಕಿ ಹಚ್ಚುವಾಗ ಎಚ್ಚರಿಕೆ ವಹಿಸಬೇಕು. ಆಕಸ್ಮಿಕವಾಗಿ ಪಟಾಕಿ ಕಿಡಿ ಸಿಡಿದಲ್ಲಿ ಆಸ್ಪತ್ರೆಗೆ ಕರೆ ತರುವಂತೆ ವೈದ್ಯರು ಸೂಚನೆ ನೀಡಿದರು. ಬೆಂಕಿ ಬಿದ್ದ ದೇಹಕ್ಕೆ ಮನೆಯಲ್ಲಿ ಪ್ರಾಥಮಿಕವಾಗಿ ಕ್ರಮಕೈ ಗೊಳ್ಳುವ ಬಗ್ಗೆ ಅರಿವು ಮೂಡಿಸಿದರು.
-ಎಂ.ಸಿ.ಮಂಜುನಾಥ್