ಮುಳಬಾಗಿಲು: ತಾಲೂಕಿನ ರಾಜೇಂದ್ರಹಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದಿನವೇ ಅಧ್ಯಕ್ಷೆ ನೂರ್‌ಜಾನ್ ಮನೆಗೆ ರಾಜಕೀಯ ವೈರಿಗಳು ಬೆಂಕಿ ಹಚ್ಚಿರುವ ಘಟನೆ ನಂಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಬೈರಕೂರು ಹೋಬಳಿ ರಾಜೇಂದ್ರಹಳ್ಳಿ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಿತು. ಅಧ್ಯಕ್ಷ ರಾಗಿ ನೂರ್‌ಜಾನ್ ಮತ್ತು ಉಪಾಧ್ಯಕ್ಷರಾಗಿ ಪ್ರಕಾಶ್‌ರೆಡ್ಡಿ ಆಯ್ಕೆಯಾಗಿದ್ದರು. ಇದರಿಂದ ಕುಪಿತಗೊಂಡ ರಾಜಕೀಯ ವೈರಿಗಳು ಚುನಾವಣೆ ನಡೆದ ದಿನವೇ ಅಧ್ಯಕ್ಷೆ ನೂರ್‌ಜಾನ್ ವಾಸದ ಮನೆಗೆ ರಾತ್ರಿ ವೇಳೆಯಲ್ಲಿ ಬೆಂಕಿ ಹಚ್ಚಿರುತ್ತಾರೆ.
ನೂರ್‌ಜಾನ್ ಕುಟುಂಬವು ಅದೇ ಗ್ರಾಮದವರಾಗಿದ್ದರೂ ಹಲವು ವರ್ಷಗಳಿಂದ ಆಂಧ್ರಪ್ರದೇಶದ ಪುಂಗನೂರಿನಲ್ಲಿ ವಾಸವಾಗಿದ್ದು, ಸ್ವಗ್ರಾಮದಲ್ಲಿದ್ದ ಸ್ವಂತ ಹಳೆಯ ಹೆಂಚಿನ ಮನೆ ಇತ್ತು. ಸದರಿ ಬೆಂಕಿ ಅವಘಡದಿಂದ ಮನೆಯಲ್ಲಿ ಯಾರೂ ವಾಸವಾಗಿಲ್ಲದೇ ಇದ್ದರೂ ಪ್ಲಾಸ್ಟಿಕ್ ಚೇರ್ ಮತ್ತು ಟೇಬಲ್ ಸೇರಿ ದಂತೆ ಕೆಲವೊಂದು ಪ್ಲಾಸ್ಟಿಕ್ ವಸ್ತುಗಳ ಸಮೇತ ಮನೆಯು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ನಂಗಲಿ ಠಾಣೆಗೆ ದೂರು: ತಾವು ಗ್ರಾಪಂ ಅಧ್ಯಕ್ಷರಾಗುವುದನ್ನು ಸಹಿಸದ ಗ್ರಾಮದ ಕೆ.ರಮೇಶ್, ಅಂಬರೀಶ್, ಮಂಜುನಾಥ್,ಗಣಪತಿ, ಜಯಪ್ಪ, ವೆಂಕಟೇಶಪ್ಪ, ಕೃಷ್ಣಾರೆಡ್ಡಿ ಇವರುಗಳು ಭತ್ತದ ಹುಲ್ಲಿಗೆ ಬೆಂಕಿ ಹಚ್ಚಿ ಮನೆಯ ಕಿಟಕಿಯಲ್ಲಿ ಹಾಕಿರುವು ದರಿಂದ ಮನೆಯ ಒಳಗಿರುವ ಪ್ಲಾಸ್ಟಿಕ್ ವಸ್ತುಗಳ ಸಮೇತ ಮನೆಯು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಂಗಲಿ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ :ಮಾ. 5ರಿಂದ ಶಿವರಾತ್ರಿ ಮಹೋತ್ಸವ
ಅದರಂತೆ ಡಿವೈಎಸ್‌ಪಿ ಗಿರಿ, ಸಿಪಿಐ ಗೋಪಾಲ್ ನಾಯಕ್,ಪಿಎಸ್‌ಐಗಳಾದ ವಿ.ವರಲಕ್ಷ್ಮಮ್ಮ ಮತ್ತು ಚೌಡಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಗ್ರಾಮದಲ್ಲಿ ಮತ್ತಷ್ಟು ಅವಘಡಗಳಿಗೆ ಅವಕಾಶ ನೀಡದಂತೆ ಸಾಕಷ್ಟು ಪೊಲೀಸ್ ಬಂದೋಬಸ್ತ್ ನೀಡಿರುತ್ತಾರೆ.