ಏರುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಹಲವೆಡೆ ಬೆಂಕಿ ಅನಾಹುತ ನಡೆಯುತ್ತಿದೆ. ಬಂಡೀಪುರದ ಸಾವಿರಾರು ಎಕರೆ ಕಾಡು ಬೆಂಕಿಗೆ ಆಹುತಿಯಾಗಿದ್ದರೆ, ಭಾನುವಾರ ಬೆಂಗಳೂರಿನ ಜಾರಕಬಂಡೆ ಕಾವಲ್ ಅರಣ್ಯದಲ್ಲಿ ಅಗ್ನಿ ದುರಂತ ಸಂಭವಿಸಿದೆ. ಏರ್ ಶೋ ಅಗ್ನಿ ದುರಂತದ ಬೆನ್ನಲ್ಲೇ ಚೆನ್ನೈನಲ್ಲಿ 200ಕ್ಕೂ ಹೆಚ್ಚು ಕಾರುಗಳು ಅಗ್ನಿಗೆ ತುತ್ತಾಗಿವೆ.
ಗುಂಡ್ಲುಪೇಟೆ: ಬಂಡೀಪುರ ಅರಣ್ಯ ವಲಯದ ಕೆಲ ಪ್ರದೇಶದಲ್ಲಿ ಬೆಂಕಿ ಹತೋಟಿಗೆ ಬಂದಿದೆಯಾದರೂ, ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ಸುತ್ತ ಮುತ್ತ ಅಗ್ನಿನರ್ತನ ಹೆಚ್ಚಾಗಿದೆ. ಶನಿವಾರ ರಾತ್ರಿ ಬೀಸಿದ ಗಾಳಿಯ ರಭಸಕ್ಕೆ ಜಿ.ಎಸ್.ಬೆಟ್ಟ ಅರಣ್ಯ ವ್ಯಾಪ್ತಿಯಲ್ಲಿನ ಹಿರಿಕೆರೆಯಿಂದ ಗೋಪಾಲಸ್ವಾಮಿ ಬೆಟ್ಟದ ಸಮೀಪದವರೆಗೂ ಬೆಂಕಿ ಕೆನ್ನಾಲಿಗೆ ಚಾಚುತ್ತಿದೆ.
ಮೂಡಿಗೆರೆ: ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ತಾಲೂಕಿನ ಕಿರುಗುಂದ ಗ್ರಾಪಂ ವ್ಯಾಪ್ತಿಯ ಉದುಸೆ ಗ್ರಾಮದಲ್ಲಿನ ಸುಮಾರು 10 ಎಕರೆ ಹುಲ್ಲುಗಾವಲು ಮತ್ತು ಕುರುಚಲು ಅರಣ್ಯ ಭಸ್ಮವಾಗಿದೆ. ಬೆಂಕಿ ಸುತ್ತಮುತ್ತ ಹರಡಿ ಗದ್ದೆಯಲ್ಲಿ ಶೇಖರಿಸಿ ಇಟ್ಟಿದ್ದ ಭತ್ತದ ಹುಲ್ಲಿನ ಬಣವೆಗೂ ತಗುಲಿದೆ. ಅಗ್ನಿಶಾಮಕ ಸಿಬ್ಬಂ ದಿ ಬೆಂಕಿ ಬೇರೆಡೆ ಹರಡದಂತೆ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು: ಯಲಹಂಕ ವಾಯುನೆಲೆ ಬಳಿಯ ಜಾರಕಬಂಡೆ ಕಾವಲ್ ಅರಣ್ಯ ಪ್ರದೇಶದಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡು ಮೂವತ್ತು ಎಕರೆ ಅರಣ್ಯ ಪ್ರದೇಶ ಆಹುತಿಯಾಗಿದೆ. ಏರ್‌ಶೋ ನಡೆಯುತ್ತಿದ್ದ ವಾಯುನೆಲೆ ಹಿಂಭಾಗದ ಜಾರಕಬಂಡೆ ಕಾವಲ್ ನಲ್ಲಿ ಭಾನುವಾರ ಹೊತ್ತಿಕೊಂಡಿದ್ದ ಭಾರೀ ಬೆಂಕಿ ಜನರನ್ನು ಬೆಚ್ಚಿಬೀಳಿಸಿತ್ತು.
ಚೆನ್ನೈ: ತಮಿಳುನಾಡಿನ ಪೊರೂರ್‌ನ ರಾಮ ಚಂದ್ರ ವೈದ್ಯಕೀಯ ಕಾಲೇಜು ಮುಂಭಾಗದ ಮೈದಾನದಲ್ಲಿ ಭಾನುವಾರ ಸಂಭವಿಸಿದ ಬೆಂಕಿ ಅನಾಹುತದಿಂದ 200 ಕಾರುಗಳು ಭಸ್ಮವಾಗಿವೆ.ಖಾಸಗಿ ಕ್ಯಾಬ್ ಸೇವಾ ಸಂಸ್ಥೆಯ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ದುರಂತದ ಕಾರಣ ಗೊತ್ತಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ 3 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ಮೈಸೂರಿನ ಹೆಬ್ಟಾಳು ಕೈಗಾರಿಕಾ ಪ್ರದೇಶದ ಬಿದಿರು ಮೆಳೆ ಇರುವ 2.5 ಎಕರೆ ಭಸ್ಮ
ಶ್ರೀರಂಗಪಟ್ಟಣದ ಕರಿಘಟ್ಟ ಮೀಸಲು ಅರಣ್ಯ ಪ್ರದೇಶದ ನೂರಾರು ಎಕರೆ ಬೆಂಕಿಗೆ ಆಹುತಿ