ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚುವ ಮೂಲಕ ವಿವಾದದ ಬೆಂಕಿ ಹೊತ್ತಿಸಿದ್ದು. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಪ್ರತಿಕೃತಿ ದಹಿಸಿದ್ದಾರೆ.
ಮಹಾರಾಷ್ಟ್ರ ಏಕೀಕರಣ ಸಮಿತಿ ನಾಯಕರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿಕೆ ವಿರುದ್ಧ ಪ್ರತಿಭಟಿಸಿದ ಶಿವಸೇನೆ ಕಾರ್ಯಕರ್ತರು ಭೀಮಾಶಂಕರ ಪ್ರತಿಕೃತಿ ಮೇಲೆ ಕನ್ನಡ ಧ್ವಜ ಇಟ್ಟು ಬೆಂಕಿ ಹಚ್ಚಿರುವುದು ವಿವಾದಕ್ಕೆ ಕಾರಣವಾಗಿದೆ.
ಸಿಎಂ ಪ್ರತಿಕೃತಿ ದಹನ: ಸದಾ ಒಂದಿಲ್ಲೊಂದು ವಿವಾದಕ್ಕೆ ಕಾರಣವಾಗುವ ಶಿವಸೇನೆ ಕಾರ್ಯಕರ್ತರು ಈಗ ಕನ್ನಡಿಗರನ್ನು ಕೆರಳಿಸಿದ್ದಾರೆ. ಗಡಿ ವಿವಾದ ನ್ಯಾಯಾಲಯದಲ್ಲಿ ಇದ್ದರೂ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದಾರೆ. ಶಿವಸೇನೆ ಪುಂಡರು ಯಾವಾಗಲೂ ಕನ್ನಡಿಗರನ್ನು ಅವಮಾನ ಮಾಡುತ್ತಿದ್ದಾರೆ. ಆದರೆ ನಮ್ಮ ರಾಜ್ಯ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಬೆಂಕಿ ಹಚ್ಚುವ ಪ್ರವೃತ್ತಿಗೆ ನಾಂದಿ ಹಾಡಿರುವ ಎಂಇಎಸ್ ಹಾಗೂ ಶಿವಸೇನೆಗೆ ಬುದ್ಧಿ ಕಿಲಸಬೇಕಾಗಿದೆ. ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದು ಗಡಿಯಲ್ಲಿ ಅಶಾಂತಿಗೆ ಕಾರಣರಾದವರನ್ನು ಕನ್ನಡಿಗರು ಸುಮ್ಮನೆ ಬಿಡುವುದಿಲ್ಲ ಎಂದು ಕಿಡಿಕಾರಿದರು. ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಅಶೋಕ ವೃತ್ತದಲ್ಲಿ ಬಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಪ್ರತಿಕೃತಿ ದಹಿಸಿದ ಕಾರ್ಯಕರ್ತರು, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿಯನ್ನು ನಾವು ಬಿಟ್ಟು ಕೊಡುವುದಿಲ್ಲ. ಇಲ್ಲಿ ಯಾರಿಗೆ ಇರಲು ಇಷ್ಟ ಇಲ್ಲವೋ ಮಹಾರಾಷ್ಟ್ರಕ್ಕೆ ಹೋಗಿ ನೆಲೆಸಬಹುದು ಎಂದು ಎಂಇಎಸ್ ವಿರುದ್ಧ ವಾಗ್ಧಾಳಿ ನಡೆಸಿದರು.
ಕರವೇ ಯುವ ಘಟಕ ಅಧ್ಯಕ್ಷ ದೀಪಕ ಗುಡಗನಟ್ಟಿ, ಸುರೇಶ ಗವಣ್ಣವರ, ರಮೇಶ ಬದೂರ, ಅಮೃತ ಇಜಾರೆ, ಗಣೇಶ ರೋಕಡೆ, ರಾಮಾ ವಣ್ಣೂರ, ಪ್ರಕಾಶ ಪನ್ಯಾಗೋಳ, ಯಶೋಶಾ ಬಿರಡೆ, ಹೊಳೆಪ್ಪ ಸುಲಧಾಳ ಸೇರಿದಂತೆ ಇತರರು ಇದ್ದರು.