ಬೆಂಗಳೂರು: ಮಣಿಪಾಲ್ ಸೆಂಟರ್ ಓನರ್ ಅಸೋಸಿಯೇಷನ್‌ನಿಂದ ಗುರುವಾರ ಡಿಕೆನ್ಸನ್ ರಸ್ತೆಯ ಮಣಿಪಾಲ್ ಸೆಂಟರ್‌ನಲ್ಲಿ ಅಗ್ನಿ ಅನಾಹುತಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಅಣಕು ಪ್ರದರ್ಶನ ನಡೆಯಿತು.
ಬೃಹತ್ ಕಟ್ಟಡದಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದರೆ, ಯಾವ ರೀತಿ ಸುರಕ್ಷಿತ ಕ್ರಮ ಕೈಗೊಳ್ಳಬೇಕು? ಬೆಂಕಿ ನಂದಿಸುವ ವಿಧಾನ, ಬೆಂಕಿಗೀಡಾದ ವಸ್ತುಗಳನ್ನು ಬೇರ್ಪಡಿಸುವುದು, ಆತಂಕಕ್ಕೀಡಾಗದಂತೆ ಮೆಟ್ಟಿಲುಗಳ ಮೂಲಕವೇ ಹೊರಗೆ ಬರುವುದು ಸೇರಿದಂತೆ ಹಲವು ಅಂಶಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಸಾಮಾನ್ಯವಾಗಿ ಬೆಂಕಿ ಹೊತ್ತಿಕೊಳ್ಳುವುದು ಶಾರ್ಟ್ ಸರ್ಕಿಟ್‌ನಿಂದ. ಇದು ಎಲೆಕ್ಟ್ರಾನಿಕ್ ಉಪಕರಣಗಳಿಂದ ಸಂಭವಿಸುತ್ತದೆ. ಕಟ್ಟಡದಲ್ಲಿ ಶಾರ್ಟ್ ಸರ್ಕಿಟ್ ಎನ್ನುವುದು ಅತಿದೊಡ್ಡ ಶತ್ರು. ಎಲೆಕ್ಟ್ರಾನಿಕ್ ಉಪಕರಣಗಳನ್ನು ಆಗಾಗ್ಗೆ ನಿರ್ವಹಣೆಗೊಳಪಡಿಸಬೇಕು ಎಂದು ಅಸೋಸಿಯೇಷನ್ ಸಿಬ್ಬಂದಿ ನೆರೆದವರಿಗೆ ವಿವರಿಸಿದರು.
ಮಣಿಪಾಲ್ ಸೆಂಟರ್‌ನಲ್ಲಿ 12 ಶಾಶ್ವತ ಸಿಬ್ಬಂದಿ ಸೇರಿದಂತೆ 35 ಜನ ಭದ್ರತಾ ಸಿಬ್ಬಂದಿ, 15 ಮಂದಿ ಲಿಫ್ಟ್ ಆಪರೇಟರ್‌ಗಳು ಮತ್ತು 15 ಹೌಸ್‌ಕೀಪಿಂಗ್ ಸಿಬ್ಬಂದಿ ಇದ್ದಾರೆ. ಇವರಿಗಾಗಿ ಈ ಅಣಕು ಪ್ರದರ್ಶನ ನಡೆಸಲಾಯಿತು. ಅಸೋಸಿಯೇಷನ್ ವ್ಯವಸ್ಥಾಪಕ ಆನಂದ್ ಜ್ಯೋತಿ,
ಸಹಾಯಕ ಮೇಲ್ವಿಚಾರಕ ಅಸ್ಲಂ ಪಾಷ, ಎಲೆಕ್ಟ್ರಿಷಿಯನ್‌ಗಳಾದ ಎಚ್.ಎಸ್. ಕುಮಾರ್, ಸ್. ಜಯರಾಂ, ಹ್ಯಾರಿ ಅಲ್ಫಾನ್ಸ್, ಜಾನ್ ಗ್ರೀನ್, ಡಿಜಿ ಆಪರೇಟರ್ ಶಾಂತರಾಜ್, ಹಿರಿಯ ಎಲೆಕ್ಟ್ರಿಷಿಯನ್ ವರಲಕ್ಷ್ಮಣ, ಸಹಾಯಕ ಪ್ಲಂಬರ್ ಎ. ಫ್ರೆಡ್ಡಿ, ಪ್ಲಂಬರ್ ರಾಮಮೂರ್ತಿ, ಫರ್ನಾಂಡೀಸ್ ಮತ್ತಿತರರು ಉಪಸ್ಥಿತರಿದ್ದರು.