Advertisement

ಚಿಕಿತ್ಸೆ ಫ‌ಲಿಸದೆ ಸಂಜನಾ ಸಾವು

06:15 AM Oct 20, 2017 | Team Udayavani |

ಬೆಂಗಳೂರು: ಈಜಿಪುರದ ಗುಂಡಪ್ಪ ಗಾರ್ಡ್‌ನ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಸಿಲಿಂಡರ್‌ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೂರು ವರ್ಷದ ಸಂಜನಾ ಗುರುವಾರ ಸಂಜೆ ಚಿಕಿತ್ಸೆ ಫ‌ಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಮೂಲಕ ಇಡೀ ದುರುತಂದಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ 8 ಮಂದಿ ಅಸುನೀಗಿದಂತಾಗಿದೆ.

Advertisement

ಅ.16ರಂದು ಬೆಳಗ್ಗೆ 6.45ರ ಸುಮಾರಿಗೆ ಸಂಭವಿಸಿದ ಸ್ಫೋಟದಲ್ಲಿ ಕಟ್ಟಡ ಕುಸಿದು ಏಳು ಮಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದರು. ಈ ಪೈಕಿ ಸಂಜನಾ ಪೋಷಕರು ಕೂಡ ದಾರುಣವಾಗಿ ಸಾವನ್ನಪ್ಪಿದ್ದರು. ಆದರೆ, ಅವಶೇಷಗಳಡಿ ಸಿಲುಕಿದ್ದ ಸಂಜನಾಳನ್ನು ರಕ್ಷಣಾ ಪಡೆಗಳು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಶೇ.70ರಷ್ಟು ಸುಟ್ಟಗಾಯಗಳಿಂದ ನರಳುತ್ತಿದ್ದ ಈಕೆಯನ್ನು ವೈದ್ಯರು ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದರು. ಮೊದಲೆರಡು ದಿನಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಸಂಜನಾಳ ಆರೋಗ್ಯದಲ್ಲಿ ಗುರುವಾರ ಸಂಜೆ ಏಕಾಏಕಿ ಏರುಪೇರು ಕಂಡು ಬಂದಿದೆ. ಕೂಡಲೇ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಅಣಿ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಸಂಜನಾಳ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಬಾಲಕಿಯ ದೇಹ ಶೇ.70 ರಷ್ಟು ಸುಟ್ಟು ಹೋಗಿತ್ತು. ಮೊದಲ ಎರಡು ದಿನಗಳ ಅವಧಿಯಲ್ಲಿ ಸಂಜನಾ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿತ್ತು. ಆದರೆ, ಗುರುವಾರ ಬೆಳಗ್ಗೆಯಿಂದ ಆಕೆ ಸ್ಥಿತಿ ಗಂಭೀರವಾಗಿತ್ತು. ಸಂಜೆ ವೇಳೆಗೆ ಚಿಕಿತ್ಸೆ ಫ‌ಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಇದಕ್ಕೂ ಮೊದಲು ಬೆಳಗ್ಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದ್ದರು. ಪ್ರಕರಣದ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂಜಳಾಳ ಅಜ್ಜಿ ಶಾಂತಮ್ಮ, “”ಮಗ, ಸೊಸೆಯನ್ನು ಕಳೆದುಕೊಂಡ ನನಗೆ ಮೊಮ್ಮಗಳು ಬದುಕುಳಿಯುತ್ತಾಳೆ ಎಂಬ ನಂಬಿಕೆ ಇತ್ತು. ಇದು ಈಗ ಹುಸಿಯಾಗಿದೆ. ಇದೀಗ ನನಗೆ ಯಾರು ಇಲ್ಲ. ಒಬ್ಬಂಟಿಯಾಗಿದ್ದೇನೆ. ಬುಧವಾರ ರಾತ್ರಿ ನನ್ನೊಂದಿಗೆ ಮಾತನಾಡಿ ಅಪ್ಪ, ಅಮ್ಮನ ಬಗ್ಗೆ ವಿಚಾರಿಸಿದ್ದಳು. ಬೆಳಗ್ಗೆ ನಾನೇ ಹಾಲು ಕುಡಿಸಿದ್ದೆ. ವೈದ್ಯರು ಕೂಡ ಉತ್ತಮವಾಗಿಯೇ ಚಿಕಿತ್ಸೆ ನೀಡಿದ್ದಾರೆ. ಆದರೆ, ಸಂಜೆ ವೇಳೆಗೆ ಸಾವನ್ನಪ್ಪಿದ್ದಾಳೆ. ಶುಕ್ರವಾರ ಮಧ್ಯಾಹ್ನ ಅಂತ್ಯಸಂಸ್ಕಾರ ಮಾಡಲಾಗುವುದು” ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next