ಬಂಡೀಪುರ : ಬೆಂಕಿಯ ಕೆನ್ನಾಲಿಗೆಗೆ ಗುರಿಯಾಗಿದ್ದಬಂಡೀಪುರ ಈಗ ನಿರಾಳವಾಗುತ್ತಿದೆ. ಒಟ್ಟು 13 ರೇಂಜ್‌ಗಳ ಪೈಕಿ, ಎರಡಕ್ಕೆ ಮಾತ್ರ ಬೆಂಕಿ ಬಿದ್ದಿತ್ತು. ಅದರಲ್ಲೂ ಎಸ್‌ಜಿ ಬೆಟ್ಟ ವಲಯ ಕಾಡಲ್ಲಿ ಬಿಳಿ ಬೂದಿಯನ್ನು ಹುಡುಕುವಂತಾಗಿದೆ. ಬಂಡೀಪುರ ವಲಯದಲ್ಲಿ ಈಗಾಗಲೇ ಮೂರು ಸಲ ಮಳೆಯಾಗಿದೆ. ಬೆಳಗಿನ ಹೊತ್ತು ತಣ್ಣನೆ ವಾತಾವರಣ. ಬೆಟ್ಟಗಳು ಬಿಳಿ ಪರದೆಯನ್ನುಹೊದ್ದು ಕೂರುತ್ತಿರುವುದು ನೆಮ್ಮದಿಯ ವಿಚಾರ. ದಿನದ ತಾಪಮಾನ ಕನಿಷ್ಠ 28 ಡಿಗ್ರಿಗೆ ಇಳಿದು, ಗರಿಷ್ಠ 34 ಡಿಗ್ರಿತನಕ ಏರುತ್ತಿದೆ. ಬಂಡೀಪುರ ಅರಣ್ಯ ಅಧಿಕಾರಿಗಳ ಕಚೇರಿಯ ಸುತ್ತಮುತ್ತ ಒಂದಷ್ಟು ಕರಕಲು ಮರಗಳು ಮಾತ್ರ ಬೆಂಕಿ ಬಿದ್ದ ಕಹಿ ಅನುಭವ ನೆನಪಿಸಲು ನಿಂತಂತೆ ಇವೆ. ಅಂಗಳ ಗ್ರಾಮದ ಬಳಿ ಇರುವ ಬಂಡೀಪುರದ ರಾಷ್ಟ್ರೀಯ ಉದ್ಯಾನವನ ಮುಖ್ಯದ್ವಾರದ ಎಡಬಲ ಭಾಗದ ಕಾಡುಗಳೆಲ್ಲ ನಾಮಾವಶೇಷವಾಗಿರುವುದರಿಂದ, ಗಾಳಿಜೋರಾಗಿ ಬೀಸಿದರೆ ಹಾರುವ ಬೂದಿ ರಸ್ತೆ ಬದಿಗೆಲ್ಲಾ ಬೀಳುತ್ತದೆ. ಕರಕಲು ಮೈಯ್ಯ ಹೊತ್ತ ಮರಗಳ ದಂಡು ಭೂತಾಕಾರವಾಗಿ ನಿಂತಿವೆ.
ಹೆಚ್ಚುಕಮ್ಮಿ 2 ಎರಡು ಕಿ.ಮೀ ಸರಹದ್ದಿನ ತನಕ ಸೀದು ಹೋದ ಕಮಟುವಾಸನೆ ಪ್ರವಾಸಿಗರು ಸಹಿಸಿಕೊಳ್ಳಬೇಕು. ಕುರುಚಲು ಕಾಡಿನಂತಿದ್ದ ಈ ಭಾಗದಲ್ಲಿ ಬೆಳಗ್ಗೆ, ಸಂಜೆ ಕರಡಿಗಳ ಹಿಂಡು ತಮ್ಮ ಹಳೆವಾಸ್ತವ್ಯ ಹುಡುಕುವ ಪ್ರಯತ್ನ ಮಾಮೂಲಿಯಾಗಿದೆ. ಸಫಾರಿ ಹಾದಿಗೆ ಯಾವುದೇ ಬೆಂಕಿಯ ದಾಳಿಯಾಗಿಲ್ಲ. ಹೀಗಾಗಿ, ಪ್ರವಾಸಿಗರು ನಿಧಾನಕ್ಕೆ ಜಮೆಯಾಗುತ್ತಿದ್ದಾರೆ. ಬೆಂಕಿಯಿಂದ ಟೂರಿಸಂ ಕಡಿಮೆಯಾಗಿದೆಯಾ ಅಂದರೆ, “ಇಲ್ಲ, ಇಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಇದೆಯಲ್ಲ ಅದಕ್ಕೆ’ ಅಂತಾರೆ ಇಲ್ಲಿನ ಅಧಿಕಾರಿಗಳು.
ಎರಡು ಮೂರು ದಿನಗಳ ಅಂತರದಲ್ಲಿ ಹುಲಿ ದರ್ಶನ ಕೂಡ ಆಗಿದೆ. ಚಿರತೆಯನ್ನೂ ಕಂಡ ಕನವರಿಕೆ ಕೇಳುತ್ತಿದೆ. ಜಿಂಕೆಗಳು ಹಾದಿ, ಬದಿಯಲ್ಲಿ ಕಾಣಿಸಿಕೊಳ್ಳತೊಡಗಿದೆ. ಚೆಕ್‌ಪೋಸ್ಟ್ ಎದುರು, ಹಿಂಬದಿಯಲ್ಲಿ ಜಿಂಕೆಗಳ ಓಡಾಟ ಶುರುವಾಗಿದೆ. ಊಟಿ ರಸ್ತೆ ಕೊನೆಗೆ ಆನೆ, ತನ್ನ ಮರಿಗಳೊಂದಿಗೆ ವಿರಮಿಸುತ್ತಿದೆ ಅಂದರೆ ಬಂಡೀಪುರ ಸಹಜವಾಗುತ್ತಿದೆ ಅಂತಲೇ ಅರ್ಥ. ಹಿಮವದ್ ಗೋಪಾಲಸ್ವಾಮಿ ಬೆಟ್ಟ ವಲಯ (ಜಿ.ಎಸ್.ಬೆಟ್ಟ)ಕ್ಕೆ ಅತಿ ಹೆಚ್ಚು ಬೆಂಕಿ ಬಿದ್ದ ಪ್ರದೇಶ. ಇದರ 83 ಚ. ಕಿ. ಮೀ.ಯಲ್ಲಿ ಶೇ. 90ರಷ್ಟು ಸುಟ್ಟು ಕರಕಲಾಗಿದೆ. ಈ ವಲಯದಲ್ಲಿ ಸುಮಾರು 40 ಕ್ಕೂ ಹೆಚ್ಚು ಕುರುಚಲು ಬೆಟ್ಟಗಳಿದ್ದು, ಅಲ್ಲಿನ ಮರಗಳು ಖತಂ ಆಗಿವೆ. ಇದರಲ್ಲಿ ಶೇ. 40ರಷ್ಟು ನೆಲಮಟ್ಟದ ಹುಲ್ಲು, ಶೇ.20ರಷ್ಟು ಶೋಲಾ ಕಾಡು ಸುಟ್ಟು ಹೋಗಿದೆ.
ಗೋಪಾಲಸ್ವಾಮಿ ಬೆಟ್ಟದ ಬುಡ, ಬೆನ್ನ ಭಾಗಗಳೆಲ್ಲವೂ ಬೆಂಕಿ ತರಚಿ ಹಾಕ್ಕಿದ್ದರಿಂದ ಕಡುಗಪ್ಪಾಗಿದೆ. ಹಿಂಡಲು, ಕರಿಮತ್ತಿ, ಸಾಗುವಾನಿ, ಪಚ್ಚಂಗಿ ಮರಗಳ ಎಲೆಗಳು ಮಾತ್ರ ಸುಟ್ಟು ಹೋಗಿರುವುದರಿಂದ ಬೋಳು ಬೋಳಾಗಿದೆ. ಕುಳ್ಳನಬೆಟ್ಟ, ಕರಡಿಕಲ್ ಬೆಟ್ಟ ಕಪ್ಪು ಬಣ್ಣಕ್ಕೆ ತಿರುಗಿದೆ.”ಇಲ್ಲಿ, ಬರೀ ಲಾಂಟಾನ, ಕಗ್ಗಲಿ, ಜಾ ಲಿ ಕುರುಚಲು ಗಿಡಗಳು ಜಾಸ್ತಿ ಇದ್ದವು. ಗಾಳಿಯ ವೇಗ ಹೆಚ್ಚಿದ್ದರಿಂದ ಹೆಚ್ಚು ಹಾನಿಯಾಗಿದೆ’ ಎನ್ನುತ್ತಾರೆ ಆರ್‌ಫ್ಓ ಪುಟ್ಸಾಮಿ. ಗೋಪಾಲಸ್ವಾಮಿ ಬೆಟ್ಟದ ಬುಡದಲ್ಲಿರುವ ಹಿರಿಕೆರೆಯಲ್ಲಿ ಸಮೃದ್ಧ ನೀರಿದೆ. ಆನೆ, ಹುಲಿ, ಜಿಂಕೆಗಳ ಸ್ವತ್ಛಂದವಾಗಿ ತಿರುಗಾಡಿದ ಕುರುಹುಗಳು ದೊರೆತಿವೆ. ಬಂಡೀಪುರ ಸೇಫ್: ಬೆಂಕಿಗೆ ಬಲಿಯಾಗಿರುವುದು ಜಿ.ಎಚ್. ಬೆಟ್ಟದ ರೇಂಜ್ ಮಾತ್ರ.
ಬಂಡೀಪುರ ರೇಂಜ್‌ನ ಶೇ. 10ರಷ್ಟು ಕಾಡು ಹಾನಿಗೆ ಒಳಗಾಗಿದೆ. ಮೊದಲು ಬೆಂಕಿ ಶುರುವಾದ ಕುಂದಕೆರೆ ರೇಂಜ್‌ನ ಚೌಡಹಳ್ಳಿಯಲ್ಲಿ. ಅಲ್ಲಿ ಬೆಟ್ಟದ ಬುಡ ಹಾಗೂ ಖಾಸಗಿ ಜಮೀನಿಗೂ ಬೆಂಕಿ ಹೊತ್ತಿಕೊಂಡಿರುವುದರ ಕುರುಹು ಕಾಣಸಿಗುತ್ತದೆ. ಆರ್‌ಎಫ್ಓ ಮಂಜನಾಥ್- “ನಮಗೆ ಬೆಂಕಿ ಬಿದ್ದಿದೆ ಅಂಥ ಗೊತ್ತಾದದ್ದು ಮಧ್ಯಾಹ್ನ 12.30ಕ್ಕೆ. 100 ಜನರ ತಂಡ ಹೋಗಿ ಸಂಜೆ ಹೊತ್ತಿಗೆ ಆರಿಸಿದೆವು. ಆದರೆ, ಮಾರನೆ ದಿನ 9 ಗಂಟೆಗೆ ಗೋಪಾಲಸ್ವಾಮಿ ಬೆಟ್ಟದ ಬಳಿ ಬೆಂಕಿ ಕಾಣಿಸಿಕೊಂಡಿತು. ಈ ದೊಡ್ಡ ಅಂತರದ ನಂತರ ಯಾರು ಬೆಂಕಿ ಇಟ್ಟರು? ಇದು ಮನುಷ್ಯರ ಕೆಲಸ ಅಲ್ಲವೇ?’ ಎನ್ನುತ್ತಾರೆ. ಈ ರೇಂಜ್‌ನ ಲೊಕ್ಕೆರೆ ವ್ಯಾಪ್ತಿಯ ಹಿರನ್‌ಕಟ್ಟೆಯ ಬೆಟ್ಟ ಹೊತ್ತಿ ಉರಿದಿದೆ.ಈ ರೇಂಜ್‌ನಲ್ಲಿ ಬರುವ ಮೇಲುಕಮ್ಮ ನಹಳ್ಳಿ, ಮಂಗಳ, ಹಿತ್ತನಪುರದ ತನಕ ಬೆಂಕಿಯ ದಾಳಿಯಾಗಿಲ್ಲ. ಬಾಚಳ್ಳಿ, ಎಲ್‌ಚಟ್ಟಹಳ್ಳಿ ಕುಂದಕೆರೆ ಆರ್‌ಎಫ್ಓ ಆಫೀಸಿನ ಬಲಬದಿಗೆ ಸ್ವಲ್ಪ ನೆಲ ಮಟ್ಟದಲ್ಲಿ ಹುಲ್ಲು ಸುಟ್ಟು ಬಡಕಲಾಗಿದೆ. ಬೆಂಕಿ ಇಟ್ಟ 3 ಜನ ಬಂಧನ ಮೂಲಕ ಇದು ಹೊಟ್ಟೆಯ ಲ್ಲಿದ್ದ ಬೆಂಕಿಯೇ ಕಾಡನ್ನು ಸುಟ್ಟು ಹಾಕಿದ್ದು ಎನ್ನುವ ಸತ್ಯ ಹೊರಗೆ ಬಿದ್ದಿದೆಯಾದರೂ, ರಾಜಕೀಯ ಸತ್ಯಗಳು ಒಳಗೊಳಗೇ ಬೇಯುತ್ತಿವೆ.
ಕಟ್ಟೆ ಗುರುರಾಜ್