ಪಣಂಬೂರು: ಪಣಂಬೂರು ಬಂದರಿನಿಂದ 40 ನಾಟಿಕಲ್ ಮೈಲು ದೂರದಲ್ಲಿ ಸಮುದ್ರ ಸಂಶೋಧನೆಯಲ್ಲಿ ತೊಡಗಿದ್ದ “ಸಾಗರ ಸಂಪದ’ ಹಡಗಿನಲ್ಲಿ ಶುಕ್ರವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ತಟರಕ್ಷಕ ಪಡೆ ತುರ್ತು ರಕ್ಷಣಾ ಕಾರ್ಯ ನಡೆಸಿ 16 ವಿಜ್ಞಾನಿಗಳು, 30 ಸಿಬಂದಿಯನ್ನು ರಕ್ಷಿಸಿದೆ. ಜತೆಗೆ ಹಡಗನ್ನೂ ಸುರಕ್ಷಿತವಾಗಿ ನವಮಂಗಳೂರು ಬಂದರಿಗೆ ಕರೆ ತಂದಿದೆ.
ಭೂವಿಜ್ಞಾನ ಖಾತೆಯ ಅಧೀನದಲ್ಲಿರುವ “ಸಾಗರ ಸಂಪದ’ ಸಾಗರ ಸಂಶೋಧನ ಹಡಗಿ (ಒಆರ್‌ವಿ)ನ ಸಿಬಂದಿ ವಾಸ್ತವ್ಯ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ 10 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಹಡಗಿನ ಸಿಬಂದಿಗೆ ಅದನ್ನು ಶಮನಿಸಲು ಸಾಧ್ಯವಾಗದೆ ಮುಂಬಯಿಯ ಮರೈನ್ ರೆಸ್ಕೂಕೊ ಆರ್ಡಿನೇಶನ್ ಸೆಂಟರ್‌ಗೆ ಮಾಹಿತಿ ನೀಡಲಾಗಿತ್ತು.
ಅಲ್ಲಿಂದ ಕೋಸ್ಟ್‌ಗಾರ್ಡ್‌ನ ಪಣಂಬೂರು ಕಚೇರಿಗೆ ತುರ್ತು ರಕ್ಷಣಾ ಸಂದೇಶ ರವಾನೆಯಾಗಿದ್ದು, ತತ್‌ಕ್ಷಣ ಐಸಿಜಿಎಸ್ ವಿಕ್ರಮ್ ಮತ್ತು ಐಸಿಜಿಎಸ್ ಸುಜಯ್ ನೌಕೆಗಳನ್ನು ಕಳುಹಿಸಿಕೊಡಲಾಯಿತು. ಇವೆರಡೂ ಅವಘಡ ಸ್ಥಳಕ್ಕೆ ತಡರಾತ್ರಿ 12.20ರ ವೇಳೆಗೆ ತಲುಪಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು. ಕೋಸ್ಟ್ ಗಾರ್ಡ್ ಕಮಾಂಡರ್ ಡಿಐಜಿ ಎಸ್.ಎಸ್. ದಸೀಲಾ ಅವರು ವೈದ್ಯರೊಂದಿಗೆ ಧಾವಿಸಿ ಪ್ರಥಮ ಚಿಕಿತ್ಸೆ ಸಹಿತ ಭದ್ರತಾ ಕ್ರಮಗಳನ್ನು ಕೈಗೊಂಡರು.
ಬಳಿಕ ಮಾಧ್ಯಮದೊಂದಿಗೆ ಡಿಐಜಿ ದಸೀಲಾ ಮಾತನಾಡಿ, ಹಡಗಿನಲ್ಲಿ ಅಪಾಯಕಾರಿ ರಾಸಾಯನಿಕ ಮತ್ತಿತರ ವಸ್ತುಗಳಿದ್ದವು. ಮೂವರು ಮಹಿಳೆಯರ ಸಹಿತ 16 ವಿಜ್ಞಾನಿಗಳು, ಸಿಬಂದಿಯನ್ನು ರಕ್ಷಿಸಲು ಕ್ರಮ ಕೈಗೊಂಡೆವು. ನೌಕೆಗಳು ಸನ್ನದ್ಧವಾಗಿದ್ದ ಕಾರಣ ಸ್ಥಳಕ್ಕೆ ಕ್ಲಪ್ತ ಸಮಯದಲ್ಲಿ ತಲುಪಿದೆವು ಎಂದರು.
ನಾವು ಘಟನ ಸ್ಥಳಕ್ಕೆ ತಲುಪುವ ವೇಳೆಗೆ ಹಡಗಿ ನಿಂದ ಭಾರೀ ಪ್ರಮಾಣದಲ್ಲಿ ಬೆಂಕಿಯೊಂದಿಗೆ ಹೊಗೆ ಕಾಣಿಸುತ್ತಿತ್ತು. 3ನೇ ಡೆಕ್‌ನಲ್ಲಿದ್ದ 8 ಕಂಪಾರ್ಟ್ ಮೆಂಟ್‌ಗಳಲ್ಲಿ ಬೆಂಕಿ ಆವರಿಸಿತ್ತು. ತತ್‌ಕ್ಷಣ ಹಡಗಿ ನೊಳಗೆ ಧಾವಿಸಲು ತೊಂದರೆಯಾದರೂ ಸುತ್ತಮುತ್ತಲಿನ ಪ್ರದೇಶವನ್ನು ತಣಿಸಲಾಯಿತು. ಬಳಿಕ ಹಡಗಿನೊಳಗೆ ಪ್ರವೇಶಿಸಿ ಬೆಂಕಿ ನಂದಿಸಲು ಆರಂಭಿಸಿದೆವು. ಶನಿವಾರ ಬೆಳಗ್ಗೆ 7 ಗಂಟೆ ವರೆಗೂ 30ಕ್ಕೂ ಅ ಧಿಕ ಸಿಬಂದಿಯಿಂದ ಕಾರ್ಯಾಚರಣೆ ನಡೆಸಲಾಯಿತು ಎಂದು ಐಸಿಜಿಎಸ್ ವಿಕ್ರಮ್ ನೌಕೆಯ ಕ್ಯಾಪ್ಟನ್ ರಾಜ್ ಕಮಲ್ ಸಿನ್ಹಾ ಮಾಹಿತಿ ನೀಡಿದ್ದಾರೆ.
ಅಪಾಯವಾಗಿಲ್ಲ, ಮುಂಜಾಗ್ರತೆಯ ಕ್ರಮ
ಘಟನೆಯಿಂದ ಪ್ರಾಣಾಪಾಯ, ಗಾಯ ಸಂಭವಿಸಿಲ್ಲ. ಬೆಂಕಿ ಅವಘಡಗಳ ಸಂದರ್ಭ ಹೊಗೆಯ ಕಣಗಳು ಗಂಟಲಲ್ಲಿ ಸಿಲುಕಿದ್ದರೆ ಒಂದೆರಡು ದಿನಗಳ ಬಳಿಕವೂ ಸಮಸ್ಯೆ ತಲೆ ದೋರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕೋಸ್ಟ್ ಗಾರ್ಡ್ ಸಹಾಯಕ ವೈದ್ಯರಿಗೆ ತಪಾಸಣೆ ನಡೆಸಿ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ ಎಂದು ಕೋಸ್ಟ್ ಗಾರ್ಡ್ ವೈದ್ಯ ಸಿಬಂದಿ ಡಾ| ಕೆ.ವಿ. ಹರೀಶ್ ತಿಳಿಸಿದ್ದಾರೆ.
ಇದು ಪುನರ್ಜನ್ಮ
“ಸಾಗರ ಸಂಪದ’ ಹಡಗಿನಲ್ಲಿ ನಾವು 16 ಮಂದಿ ವಿಜ್ಞಾನಿಗಳು ಫೆ. 26ರಿಂದ ಸಂಶೋಧನ ನಿರತರಾಗಿದ್ದೆವು. ಶುಕ್ರವಾರ ಸಂಭವಿಸಿದ ಅವಘಡ ಆಘಾತ ಉಂಟುಮಾಡಿದೆ. ಹಡಗಿನ ಸಿಬಂದಿ ಮತ್ತು ಕೋಸ್ಟ್‌ಗಾರ್ಡ್ ಸಿಬಂದಿಯ ಮೂಲಕ ನಮಗೆ ಪುನರ್‌ಜನ್ಮ ದೊರಕಿದಂತೆ ಆಗಿದೆ.
ಡಾ| ಶೆರಿನ್, ವಿಜ್ಞಾನಿಗಳ ತಂಡದ ಮುಖ್ಯಸ್ಥೆ, ಸಿಎಫ್ಎಂಎಲ್‌ಆರ್‌ಇಯ ಮುಖ್ಯ ವಿಜ್ಞಾನಿ