Advertisement

ನಾಲ್ಕು ವಾರ್ಡ್‌ಗಳಲ್ಲಿ ದಟ್ಟ ಹೊಗೆ ದುಷ್ಪರಿಣಾಮದ ಭೀತಿ

04:48 AM Jan 25, 2019 | |

ಮಹಾನಗರ : ನಗರದ ಪಚ್ಚನಾಡಿ ಯಲ್ಲಿರುವ ಪ್ರಮುಖ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಬೆಂಕಿಬಿದ್ದು ಹೊತ್ತಿ ಉರಿದ ಪರಿಣಾಮ, ಅದರ ಸಮೀಪದ ನಾಲ್ಕು ವಾರ್ಡ್‌ ವ್ಯಾಪ್ತಿಗಳಲ್ಲಿ ವಾಸನೆಯಿಂದ ಕೂಡಿದ ದಟ್ಟ ಹೊಗೆ ಆವರಿಸಿ, ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುವ ತೀವ್ರ ಆತಂಕ ಸೃಷ್ಟಿಯಾಗಿದೆ.

Advertisement

ತ್ಯಾಜ್ಯಕ್ಕೆ ಬಿದ್ದಿರುವ ಬೆಂಕಿ ನಂದಿಸಲು ಪಾಲಿಕೆ ಕ್ರಮ ಕೈಗೊಳ್ಳುತ್ತಿದ್ದರೂ ಗಾಳಿಯಲ್ಲಿ ಸೇರುತ್ತಿರುವ ತ್ಯಾಜ್ಯಪೂರಿತ ಹೊಗೆ ಜನರಿಗೆ ಆತಂಕವನ್ನುಂಟು ಮಾಡಿದೆ. ಸದ್ಯ ಬೆಂಕಿ ನಂದಿದ್ದರೂ ಹೊಗೆ ನಿಲ್ಲಲು ಇನ್ನೂ ಒಂದು ದಿನ ಬೇಕಾಗಬಹುದು ಎನ್ನಲಾಗಿದೆ. ಗಾಳಿ ಜೋರಾಗಿ ಬೀಸುವ ಕಡೆ ಹೊಗೆಯೂ ವ್ಯಾಪಿಸುತ್ತಿರುವ ಪರಿಣಾಮ ಪಚ್ಚನಾಡಿ, ಕುಡುಪು, ತಿರುವೈಲು, ಕುಲಶೇಖರ ವಾರ್ಡ್‌ನ ಕೆಲವು ಪ್ರದೇಶಗಳಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದೆ.

ಬುಧವಾರ ಮಧ್ಯಾಹ್ನ 2ರ ಸುಮಾರಿಗೆ ಡಂಪಿಂಗ್‌ ಯಾರ್ಡ್‌ನ ಎಡಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಯಾವ ಕಾರಣದಿಂದ ಕಾಣಿಸಿಕೊಂಡಿದೆ ಎಂಬ ಬಗ್ಗೆ ಯಾರಲ್ಲಿಯೂ ಮಾಹಿತಿಯಿಲ್ಲ. ಆದರೆ ಮಧ್ಯಾಹ್ನದ ಸಮಯಕ್ಕೆ ಗಾಳಿ ಇದ್ದ ಕಾರಣದಿಂದ ಯಾರ್ಡ್‌ನ ಒಂದು ಭಾಗದಲ್ಲಿದ್ದ ಬೆಂಕಿ ಇಡೀ ಕಸದ ರಾಶಿಗೆ ಹರಡಿಕೊಂಡಿದೆ. ಕಸದ ರಾಶಿಯಲ್ಲಿ ರಾಸಾಯನಿಕ ಸಂಯೋಜನೆ, ಮಿಥೇನ್‌ ಗ್ಯಾಸ್‌ ಉತ್ಪತ್ತಿ ಆಗುವ ಹಿನ್ನೆಲೆಯಲ್ಲಿ ಬೆಂಕಿ ಪಕ್ಕನೆ ವ್ಯಾಪಿಸಿದೆ. ಈ ವೇಳೆ ಅಗ್ನಿಶಾಮಕದಳದ ನೇತೃತ್ವದಲ್ಲಿ ನಂದಿಸಲು ಯತ್ನಿಸಿದರೂ ಬೆಂಕಿ ನಂದಿರಲಿಲ್ಲ. ಹೀಗಾಗಿ ದಟ್ಟ ಹೊಗೆ ನಗರ ವ್ಯಾಪ್ತಿಯಲ್ಲಿ ಹರಡುವಂತಾಗಿತ್ತು.

ಗುರುವಾರ ಮುಂಜಾನೆಯಾಗುತ್ತಲೇ ಪಚ್ಚನಾಡಿ ವ್ಯಾಪ್ತಿಯ ಸುತ್ತಮುತ್ತಲ ಸುಮಾರು 4-5 ವಾರ್ಡ್‌ನ ಕೆಲವು ಪ್ರದೇಶಗಳವರೆಗೆ ದಟ್ಟ ಹೊಗೆ ಮುಂಜಾನೆಯ ಮಂಜಿನೊಂದಿಗೆ ಮಿಳಿತವಾಗಿತ್ತು. ಹೀಗಾಗಿ ಕುಡುಪು, ಮಂಗಳನಗರ, ಬೋಂದೆಲ್‌, ಪದವಿನಂಗಡಿ, ಕಾವೂರು, ಬೈತುರ್ಲಿ, ನೀರುಮಾರ್ಗ, ಪಿಲಿಕುಳ, ಕೆಲರೈ ಸಹಿತ ವಿವಿಧ ಭಾಗಗಳಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿತು. ತ್ಯಾಜ್ಯದಿಂದ ಉತ್ಪತ್ತಿಯಾದ ಹೊಗೆಯಾದ್ದರಿಂದ ಗಾಳಿಯಲ್ಲಿ ವಾಸನೆ ಕೂಡ ಹರಡಿತ್ತು. ಸಮೀಪದ ಕೆಲವು ಪ್ಲ್ಯಾಟ್‌ಗಳಲ್ಲಿಗೂ ವಾಸವಾಗಿರುವ ಮೇಲ್ಭಾಗದ ನಿವಾಸಿಗಳ ಮನೆಗಳಿಗೂ ಈ ಹೊಗೆ ವ್ಯಾಪಿಸಿತ್ತು.

ಬುಧವಾರ ನಾಲ್ಕು ಅಗ್ನಿಶಾಮಕದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಅಗ್ನಿಶಾಮಕದಳ, ಎಂಆರ್‌ಪಿಎಲ್‌, ಎಂಸಿಎಫ್‌, ಕೆಐಒಸಿಎಲ್‌ನ ಅಗ್ನಿಶಾಮಕದಳದ ವಾಹನಗಳು ಕೈಜೋಡಿಸಿವೆ. ಮಂಗಳವಾರ ಮಧ್ಯಾಹ್ನದಿಂದಲೇ ಈ ಕಾರ್ಯಾಚರಣೆ ಆರಂಭವಾಗಿತ್ತು. ಮೇಯರ್‌ ಭಾಸ್ಕರ್‌ ಕೆ., ಮುಖ್ಯಸಚೇತಕ ಎಂ. ಶಶಿಧರ ಹೆಗ್ಡೆ, ಆಯುಕ್ತ ಮೊಹಮ್ಮದ್‌ ನಝೀರ್‌ ಮೊದಲಾದವರು ಡಂಪಿಂಗ್‌ ಯಾರ್ಡ್‌ಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

ಮಣ್ಣು ಹಾಕಬೇಕೆನ್ನುವಾಗಲೇ ಬೆಂಕಿ!
ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಲ್ಲಿ ಸುಮಾರು 77.93 ಎಕ್ರೆ ಜಾಗವಿದೆ. ಇದರಲ್ಲಿ 10 ಎಕ್ರೆ ವ್ಯಾಪ್ತಿಯಲ್ಲಿ ಕಸ ತುಂಬಿಸಿ ಅದನ್ನು ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ಅದರ ಬಳಿಯಲ್ಲಿಯೇ ಇದೀಗ ಸುಮಾರು 12 ಎಕ್ರೆ ಜಾಗದಲ್ಲಿ 8-10 ವರ್ಷಗಳಿಂದ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಸ್ವಲ್ಪ ಭಾಗಕ್ಕೆ ಮಣ್ಣು ಹಾಕಲಾಗಿದ್ದು, ಉಳಿದ ಭಾಗಕ್ಕೆ ಇನ್ನಷ್ಟೇ ಮಣ್ಣು ಹಾಕಬೇಕಾಗಿದೆ. ಮಣ್ಣು ಹಾಕಲು ಸಿದ್ಧತೆ ನಡೆಸುತ್ತಿರುವ ವೇಳೆಯಲ್ಲಿಯೇ ಬೆಂಕಿ ಬಿದ್ದಿದೆ ಎನ್ನುತ್ತಾರೆ ಮನಪಾ ಮುಖ್ಯಸಚೇತಕ ಎಂ. ಶಶಿಧರ ಹೆಗ್ಡೆ.

4-5 ವರ್ಷದ ಹಿಂದೆ ಬಿದ್ದಿತ್ತು ಬೆಂಕಿ!
ಪಚ್ಚನಾಡಿಯ ಹಳೆಯ ಡಂಪಿಂಗ್‌ ಯಾರ್ಡ್‌ ಇದ್ದಾಗ ಆಗೊಮ್ಮೆ-ಈಗೊಮ್ಮೆ ಅದಕ್ಕೆ ಬೆಂಕಿ ಬೀಳುವ ಪರಿಸ್ಥಿತಿ ಇತ್ತು. ಹೊಸ ಯಾರ್ಡ್‌ ಆದ ಬಳಿಕ ಸುತ್ತಲಿನ ಹುಲ್ಲಿಗೆ ಒಂದೆರಡು ಬಾರಿ ಬೆಂಕಿ ಬಿದ್ದಿತ್ತು. ಕಳೆದ ವರ್ಷ ಕೂಡ ಹುಲ್ಲಿಗೆ ಬೆಂಕಿ ಬಿದ್ದು, ಬಳಿಕ ನಂದಿಸಲಾಗಿತ್ತು. ನಾಲ್ಕೈದು ವರ್ಷದ ಹಿಂದೆ ತ್ಯಾಜ್ಯಕ್ಕೆ ಬೆಂಕಿ ಬಿದ್ದಿತ್ತು. ಆದರೆ, ಈ ಬಾರಿಯಷ್ಟು ಪ್ರಮಾಣದಲ್ಲಿ ಈ ಹಿಂದೆ ಬೆಂಕಿ ಬಿದ್ದಿರಲಿಲ್ಲ ಎನ್ನುತ್ತಾರೆ ಮನಪಾ ಪರಿಸರ ಅಭಿಯಂತರ ಮಧು.

ಪಚ್ಚನಾಡಿ ಯಾರ್ಡ್‌ ಸ್ಥಳಾಂತರಿಸಿ
ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಿಂದ ಎದುರಾಗಿರುವ ಸಮಸ್ಯೆಗಳ ಬಗ್ಗೆ ‘ಸುದಿನ’ದ ಜತೆಗೆ ಮಾಹಿತಿ ಹಂಚಿಕೊಂಡ ಮಂದಾರಮನೆ ನಿವಾಸಿ ರವೀಂದ್ರ ಭಟ್, ಸುಮಾರು 50 ವರ್ಷದ ಹಿಂದೆ ಸ್ಟೇಟ್ಬ್ಯಾಂಕ್‌, ಜ್ಯೋತಿ, ಫಳ್ನೀರ್‌, ಕೊಡಿಯಾಲಬೈಲ್‌ ಭಾಗದಿಂದ ಮಾತ್ರ ಕಸದ ಲಾರಿ ಬರುತ್ತಿದ್ದ ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ ಕಾಲ ಕಳೆದಂತೆ ಲಾರಿಗಳ ಸಂಖ್ಯೆ ಏರಿಕೆಯಾಗುತ್ತಾ ಬಂತು. ನಗರದಲ್ಲಿ ಜನಸಂಖ್ಯೆ ಏರಿ, ಕಸದ ಪ್ರಮಾಣ ಅಧಿಕವಾಗಿ ಈಗ ನೂರಾರು ಲಾರಿಗಳು ಬರುವಂತಾಗಿವೆ. ಅಭಿವೃದ್ಧಿ ಹೊಂದಿದ ಪಚ್ಚನಾಡಿ ಸುತ್ತಮುತ್ತ ವ್ಯಾಪ್ತಿ ಇದೀಗ ತ್ಯಾಜ್ಯದ ವಾಸನೆಯಿಂದ ಮೂಗುಮುಚ್ಚುವ ಪರಿಸ್ಥಿತಿ ಎದುರಾಗಿದೆ. ಪರಿಣಾಮವಾಗಿ ವಾಮಂಜೂರು, ಕುಡುಪು, ಪದವಿನಂಗಡಿ, ಶಕ್ತಿನಗರ, ಬೋಂದೆಲ್‌ ಭಾಗದ ಜನರಿಗೆ ಕಂಟಕವಾಗುತ್ತಿದೆ. ತಗ್ಗು ಪ್ರದೇಶದಲ್ಲಿರುವ ಮಂದಾರ ಎಂಬ ಊರಿನ ಮನೆ, ತೋಟ, ಕುಡಿಯುವ ನೀರು ಎಲ್ಲ ವ್ಯಾಪ್ತಿಯಲ್ಲಿಯೂ ವಿಷಯುಕ್ತ ಕಪ್ಪುನೀರು-ದುರ್ನಾತ ಬೀರುತ್ತಿದೆ. ಯಾವ ಜನಪ್ರತಿಪ್ರತಿನಿಧಿಗಳು ಕೂಡ ಈ ಸಮಸ್ಯೆ ನಿವಾರಣೆಗೆ ಮುಂದಾಗಿಲ್ಲ. ತಾತ್ಕಾಲಿಕವಾಗಿ ಸಮಸ್ಯೆ ಇತ್ಯರ್ಥದ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಇನ್ನಾದರೂ ಜನರ ಜೀವ ಹಿಂಡುವ ಈ ಡಂಪಿಂಗ್‌ ಯಾರ್ಡ್‌ ಅನ್ನು ಬೇರೆ ಕಡೆಗೆ ಸ್ಥಳಾಂತರಿಸಲಿ ಎಂದು ಒತ್ತಾಯಿಸಿದ್ದಾರೆ.

ಪ್ರತೀದಿನ 100 ಟನ್‌ ಕಸದಂತೆ 10 ವರ್ಷ!
ಕಾರ್ಯಾಚರಣೆಯ ಉಸ್ತುವಾರಿ ನೋಡಿ ಕೊಳ್ಳುತ್ತಿರುವ ಮನಪಾ ಪರಿಸರ ಅಭಿಯಂತರ ಮಧು ಅವರು ‘ಸುದಿನ’ ಜತೆಗೆ ಮಾತನಾಡಿ, ‘ಮಂಗಳೂರು ವ್ಯಾಪ್ತಿಯಿಂದ ಪ್ರತಿನಿತ್ಯ ಸುಮಾರು 250ರಿಂದ 300 ಟನ್‌ನಷ್ಟು ಕಸವನ್ನು ಸಂಗ್ರಹಿಸಲಾಗುತ್ತದೆ. ಇದನ್ನು ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ತಂದು ಸಂಸ್ಕರಿಸಿ, ಅದರಲ್ಲಿ ಬಾಕಿಯಾಗುವ ಸುಮಾರು 50 ಟನ್‌ನಷ್ಟು ತ್ಯಾಜ್ಯವನ್ನು ಡಂಪಿಂಗ್‌ ಯಾರ್ಡ್‌ ನಲ್ಲಿ ಹಾಕಲಾಗುತ್ತದೆ.

ಇದೇ ರೀತಿ ಉಳ್ಳಾಲ, ಬಂಟ್ವಾಳದಿಂದ ಪ್ರತೀದಿನ ಸುಮಾರು 50 ಟನ್‌ನಷ್ಟು ಕಸವನ್ನು ನೇರವಾಗಿ ಡಂಪಿಂಗ್‌ ಯಾರ್ಡ್‌ ನಲ್ಲಿ ಸುರಿಯಲಾಗುತ್ತಿದೆ. ಈ ಮೂಲಕ ಪ್ರತೀದಿನ ಸುಮಾರು 100ರಿಂದ 120 ಟನ್‌ನಷ್ಟು ಕಸವನ್ನು ಯಾರ್ಡ್‌ನಲ್ಲಿ ತುಂಬಿಸ ಲಾಗುತ್ತಿದೆ. 8-10 ವರ್ಷಗಳಿಂದ ಲಕ್ಷಗಟ್ಟಲೆ ಟನ್‌ ಕಸ ತುಂಬಿಕೊಂಡಿದೆ ಎನ್ನುತ್ತಾರೆ.

ಪಚ್ಚನಾಡಿ ಡಂಪಿಂಗ್‌ ವಾರ್ಡ್‌ ಸುತ್ತಮುತ್ತಲ ಪ್ರದೇಶ ಮೊದಲಿನಿಂದಲೇ ವಾಸನೆ, ಕಲುಷಿತ ನೀರಿನ ಕಾರಣದಿಂದ ವಿವಾದಕ್ಕೆ ಒಳಗಾಗಿದೆ. ಸ್ಥಳೀಯರು ಈ ಬಗ್ಗೆ ಬಗೆ ಬಗೆಯಲ್ಲಿ ಹೋರಾಟ – ಪ್ರತಿಭಟನೆ ನಡೆಸಿದರೂ ಆಡಳಿತ ವ್ಯವಸ್ಥೆಗೆ ಗಂಭೀರತೆ ಅರ್ಥವಾಗುತ್ತಿಲ್ಲ. ಇದೀಗ ತ್ಯಾಜ್ಯಕ್ಕೆ ಬೆಂಕಿ ಬಿದ್ದ ಪರಿಣಾಮ ಕೆಟ್ಟ ವಾಸನೆಯ ದಟ್ಟ ಹೊಗೆಯಿಂದ ಸ್ಥಳೀಯರು ಉಸಿರಾಡಲೂ ಕಷ್ಟಪಡುವಂತಾಗಿದೆ.

ಮಂಗಳನಗರದಲ್ಲಿರುವ ಅಸ್ತಮ ಪೀಡಿತ ಮಹಿಳೆಯೊಬ್ಬರನ್ನು ಅವರ ತಾಯಿಮನೆಗೆ ಕರೆದುಕೊಂಡು ಹೋಗಲಾಗಿದೆ. ಸ್ಥಳೀಯವಾಗಿ ಶಾಲೆಯೂ ಇದ್ದು ಅಲ್ಲಿನವರಿಗೆ ದಟ್ಟ ಹೊಗೆ ಸಮಸ್ಯೆ ಸೃಷ್ಟಿಸಿದೆ.

ಕಾರ್ಮಿಕರಿಂದ ಆತಂಕದಲ್ಲೇ ಕಾರ್ಯಾಚರಣೆ!
ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದವರ ಜತೆಗೆ ಯಾರ್ಡ್‌ನ ಕಾರ್ಮಿಕರು ಕೂಡ ಆತಂಕ ದಲ್ಲಿಯೇ ಕಾರ್ಯಾಚರಣೆ ನಡೆಸುತ್ತಿದ್ದಾರೆ. 4 ಹಿಟಾಚಿ ಯಂತ್ರಗಳು ಬೆಂಕಿ ಕಾಣಿಸಿಕೊಂಡ ಕಸದ ಮಧ್ಯಭಾಗದಲ್ಲಿಯೇ ತೆರಳಿ ಕಾರ್ಯಾಚರಣೆ ನಡೆಸುತ್ತಿರುವ ದೃಶ್ಯಕಂಡುಬಂತು. 8 ಕಾರ್ಮಿಕರು ಕಸದ ರಾಶಿಯ ಮಧ್ಯೆ ಕೆಲಸ ನಡೆಸುತ್ತಿದ್ದಾರೆ. ದಟ್ಟ ಹೊಗೆ ಏಳುತ್ತಿರುವ ಮಧ್ಯೆಯೇ ಮೂಗಿಗೆ ಸಣ್ಣ ಮಾಸ್ಕ್ ಹಾಕಿಕೊಂಡು ಇತರ ಯಾವುದೇ ಮುನ್ನೆಚ್ಚರಿಕೆ ವಹಿಸದೆ ಕೆಲಸ ನಡೆಸುತ್ತಿರುವಂತೆ ಕಂಡುಬಂತು. ಗಾಳಿ ಜೋರಾಗಿ ಬೀಸುವಾಗ ದಟ್ಟ ಹೊಗೆಯಲ್ಲಿ ಹಿಟಾಚಿ ಯಂತ್ರ ಎಲ್ಲಿದೆ ಎಂದು ಕೂಡ ಹುಡುಕಲು ಸಾಧ್ಯವಾಗುತ್ತಿರಲಿಲ್ಲ.

ಹೊಗೆ ನಿಯಂತ್ರಣಕ್ಕೆ ಕ್ರಮ
ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಈಗಾಗಲೇ ನಂದಿಸಲಾಗಿದೆ. ಆದರೆ ಹೊಗೆ ವ್ಯಾಪಿಸಿದೆ. ಇದರ ನಿಯಂತ್ರಣಕ್ಕೂ ಪ್ರಯತ್ನಿಸಲಾಗುತ್ತಿದೆ. ಮುಂದೆಯೂ ಹೊಗೆ ವ್ಯಾಪಿಸಿದರೆ, ಪರಿಸರ ಇಲಾಖೆ, ಆರೋಗ್ಯ ಇಲಾಖೆಯ ಜತೆಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು.
– ಶಶಿಕಾಂತ್‌ ಸೆಂಥಿಲ್‌,
 ಜಿಲ್ಲಾಧಿಕಾರಿ

50 ಟ್ಯಾಂಕರ್‌ ನೀರು 
ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಅಗ್ನಿಶಾಮಕದಳದ ತಂಡ ಮಂಗಳವಾರ ಮಧ್ಯಾಹ್ನದಿಂದಲೇ ಕಾರ್ಯಾಚರಣೆ ಆರಂಭಿಸಿದೆ. ಅಗ್ನಿಶಾಮಕದಳದ ವಾಹನಗಳು ಪಚ್ಚನಾಡಿ ಯಾರ್ಡ್‌ನ ನಾಲ್ಕೂ ಮೂಲೆಯಲ್ಲಿ ನಿಂತು ಬೆಂಕಿ ನಂದಿಸುವ ಕಾರ್ಯನಡೆಸುತ್ತಿದ್ದರೆ, ಏಳು ಟ್ಯಾಂಕರ್‌ಗಳು ಅದಕ್ಕೆ ನೀರನ್ನು ತುಂಬಿಸುವಲ್ಲಿ ಸಹಕರಿಸುತ್ತಿದೆ. 12,000 ಲೀ. ಸಾಮರ್ಥ್ಯದ 2 ಟ್ಯಾಂಕರ್‌, 6,000 ಲೀ.ಸಾಮರ್ಥ್ಯದ 3 ಮತ್ತು 3,000 ಲೀ.ಸಾಮರ್ಥ್ಯದ 2 ಟ್ಯಾಂಕರ್‌ಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ನಡುಮನೆಯ ಬೋರ್‌ವೆಲ್‌, ಕುಡುಪು ದೇವಸ್ಥಾನ ಸಮೀಪದ ಬೋರ್‌ವೆಲ್‌, ಬೆಂದೂರ್‌ವೆಲ್‌ನ ನೀರು ಸಂಗ್ರಹ ಸ್ಥಾವರ, ಬೋಂದೆಲ್‌ನ ಬೋರ್‌ವೆಲ್‌ನಿಂದ ನೀರನ್ನು ತರಿಸಲಾಗಿದೆ. ಮಂಗಳವಾರ ಮಧ್ಯಾಹ್ನದಿಂದ ಬುಧವಾರ ಮಧ್ಯಾಹ್ನದವರೆಗೆ ಸುಮಾರು 50 ಟ್ಯಾಂಕರ್‌ನಷ್ಟು ನೀರನ್ನು ಬಳಸಲಾಗಿದೆ.

ಅಗತ್ಯವಿದ್ದರೆ ಆರೋಗ್ಯ ಶಿಬಿರ
ಡಂಪಿಂಗ್‌ ಯಾರ್ಡ್‌ಗೆ ಬಿದ್ದ ಬೆಂಕಿ ನಂದಿಸಿದರೂ ಹೊಗೆ ನಗರದ ಕೆಲವು ಭಾಗದಲ್ಲಿ ಹರಡಿದೆ. ಕೆಲವು ವರ್ಷದ ಹಿಂದೆ ಕೂಡ ಹೀಗೆಯೇ ಆಗಿತ್ತು. ಹೊಗೆ ಹತೋಟಿಗೆ ಬರುವ ನೆಲೆಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಮುಂದೆ ಸಮಸ್ಯೆ ಉಂಟಾದರೆ ಆರೋಗ್ಯ ಇಲಾಖೆಯಿಂದ ಸ್ಥಳೀಯ ವ್ಯಾಪ್ತಿಯಲ್ಲಿ ಶಿಬಿರ ನಡೆಸಲು ಪಾಲಿಕೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು.
– ಡಾ| ಮಂಜಯ್ಯ ಶೆಟ್ಟಿ,
ಮನಪಾ ಆರೋಗ್ಯಾಧಿಕಾರಿ

ಮುಂದೆ ಎಚ್ಚರಿಕೆಗೆ ಸೂಚನೆ
ಡಂಪಿಂಗ್‌ ಯಾರ್ಡ್‌ನ ಸಂಸ್ಕರಣ ಘಟಕ, ನಿರ್ವಹಣೆಯಲ್ಲಿ ಖಾಸಗಿ ಸಂಸ್ಥೆಯವರು ನೋಡಿಕೊಳ್ಳುತ್ತಿದ್ದಾರೆ. ಯಾವ ಕಾರಣದಿಂದ ಬೆಂಕಿ ಬಿದ್ದಿದೆ ಎಂಬುದರ ಬಗ್ಗೆ ಅವರಿಂದ ಮಾಹಿತಿ ತರಿಸಲಾಗುವುದು. ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವ ಬಗ್ಗೆ ಸಂಬಂಧಪಟ್ಟವರಿಗೆ ಪಾಲಿಕೆಯಿಂದ ಎಚ್ಚರಿಕೆ ನೀಡಲಾಗುವುದು.
 – ಭಾಸ್ಕರ್‌ ಕೆ.,
ಮೇಯರ್‌ ಮಹಾನಗರ ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next