ದೊಡ್ಡಬಳ್ಳಾಪುರ: ಬೇಸಿಗೆಯ ಆರಂಭದಲ್ಲೆ ಬೆಟ್ಟಗಳು, ಕೆರೆ ಅಂಗಳದಲ್ಲಿನ ಸಸಿಗಳಿಗೆ ಹಾಗೂ ಕಿರು ಅರಣ್ಯಗಳಿಗೆ ಬೆಂಕಿ ಬಿದ್ದು ಅಪಾರ ಸಸ್ಯ ರಾಶಿ, ಪ್ರಾಣಿ ಸಂಕುಲ ಬೆಂಕಿಗೆ ಆಹುತಿ ಆಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ತಾಲೂಕಿನ ಮಾಕಳಿ ಬೆಟ್ಟದ ತುದಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಚಾಚುತ್ತಲೇ ಸಾಗುತ್ತಿದೆ. ಬೇಸಿಗೆಯಲ್ಲಿ ಒಣಗಿರುವ ಎಲೆ ಅಥವಾ ಕೆಲವು ಕಿಡಿಗೇಡಿಗಳು ಇಟ್ಟಿರುವ ಬೆಂಕಿಯಿಂದ ಬೆಟ್ಟಕ್ಕೆ ಬೆಂಕಿ ವ್ಯಾಪಿಸಿರಬಹುದೆಂದು ಶಂಕಿಸಲಾಗಿದೆ.
ಚಿರತೆಯ ಭಯ: ಈ ನಡುವೆ ಮಾಕಳಿ ಬೆಟ್ಟದಲ್ಲಿರುವ ಚಿರತೆ ಬೆಂಕಿಗೆ ಹೆದರಿ ಮಾಕಳಿ ಗ್ರಾಮದ ಕಡೆ ಬಂದಿದ್ದು, ರಾತ್ರಿ ಗ್ರಾಮದಲ್ಲಿ 3 ಕೋಳಿಗಳನ್ನು ಬಲಿ ಪಡೆದಿದೆ ಎನ್ನುವ ಗ್ರಾಮಸ್ಥರು, ಒಂದೆಡೆ ಬೆಂಕಿ ಹಾಗೂ ಇನ್ನೊಂದೆಡೆ ಚಿರತೆಯಿಂದ ಭಯಭೀತರಾಗಿದ್ದಾರೆ. ರಾತ್ರಿಯಿಡೀ ತಮಟೆ ಹೊಡೆದು, ಪಟಾಕಿ ಹಚ್ಚಿ ಚಿರತೆ ಗ್ರಾಮಕ್ಕೆ ಬಾರದಂತೆ ಕಾವಲು ಕಾದಿದ್ದಾರೆ. ಈ ಕೂಡಲೇ ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅರಳುಮಲ್ಲಿಗೆ ಕೆರೆ ಏರಿಯಲ್ಲಿ ಬೆಂಕಿ: ಅರಳುಮಲ್ಲಿಗೆ ಕೆರೆ ಏರಿ ರಸ್ತೆ ಬದಿಯಲ್ಲಿನ ಹುಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಬೆಂಕಿಯ ಕಿಚ್ಚು ಕೆರೆ ಅಂಗಳದಲ್ಲಿ ಬೆಳೆದು ನಿಂತಿರುವ ಬಿದಿರಿನ ಮೆಳೆಗೆ ತಾಗಿದರೆ ಅಪಾರ ಸಸ್ಯ ಸಂಪತ್ತು ಸುಟ್ಟು ಹೋಗುವ ಅಪಾಯ ಎದುರಾಗಿದೆ. ಇದಲ್ಲದೆ ಕೆರೆ ಅಂಗಳದಲ್ಲಿನ ಬಿದಿರು ಮೆಳೆಯಲ್ಲಿ ನೂರಾರು ನವಿಲು, ಕೊಕ್ಕರೆ ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ವಾಸವಾಗಿವೆ.
ತಾಲೂಕಿನ ವಿವಿಧ ಅರಣ್ಯಗಳಿಗೆ ಬೆಂಕಿ ತಾಗದಂತೆ ಅರಣ್ಯ ಇಲಾಖೆ ಸಿಬ್ಬಂದಿ ಬೇಸಿಗೆಯಲ್ಲಿ ಬೆಂಕಿ ರೇಖೆ ಹಾಕುವುದು, ಒಣಗಿದ ಮರ ಗುರುತಿಸಿ, ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪರಿಸರಪ್ರೇಮಿಗಳು ಒತ್ತಾಯಿಸಿದ್ದಾರೆ.