ಬೆಂಗಳೂರು: ಮೂರು ದಿನಗಳ ದೀಪಾವಳಿ ಆಚರಣೆಯಿಂದಾಗಿ ನಗರದಲ್ಲಿ ಭಾರೀ ಪ್ರಮಾಣದ ಪಟಾಕಿ ತ್ಯಾಜ್ಯ ಸೃಷ್ಟಿಯಾಗಿದ್ದು, ಸಾರ್ವಜನಿಕರು ಎಲ್ಲೆಂದರಲ್ಲಿ ಅದಕ್ಕೆ ಬೆಂಕಿ ಹಚ್ಚುತ್ತಿರುವುದು ಆತಂಕ ಮೂಡಿಸಿದೆ.
ನಗರದ ವಿವಿಧ ಬಡಾವಣೆಗಳಲ್ಲಿ ಮೂರು ದಿನಗಳಿಂದ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಸಿಡಿಸಿದ್ದು ಇದರಿಂದಾಗಿ ಭಾರಿ ಪ್ರಮಾಣದ ಒಣ ತ್ಯಾಜ್ಯ ಸೃಷ್ಟಿಯಾಗಿದೆ, ಪಾಲಿಕೆಯಿಂದ ರಸ್ತೆಗಳ ಸ್ವತ್ಛತಾ ಕಾರ್ಯ ಆರಂಭವಾಗದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳೇ ಪಟಾಕಿ ತ್ಯಾಜ್ಯ ಗುಡ್ಡೆ ಹಾಕಿ ಬೆಂಕಿ ಹಾಕುತ್ತಿರುವುದು ಕಂಡುಬಂದಿದೆ. ಪಟಾಕಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿರುವುದರಿಂದ ವಾಯುಮಾಲಿನ್ಯ ಉಂಟಾಗಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆಯಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಾರೆ.
ಈ ಮಧ್ಯೆ, ದಸರಾ ಹಬ್ಬದಂದು ವಾಹನಗಳಿಗೆ ಪೂಜೆ ಸಲ್ಲಿಸದವರು ದೀಪಾವಳಿ ಹಬ್ಬದ ದಿನ ಪೂಜೆ ಸಲ್ಲಿಸಿದ್ದಾರೆ. ಆ ಹಿನ್ನೆಲೆಯಲ್ಲಿ ರೈತರು ಮಾರಾಟಕ್ಕಾಗಿ ತೆಗೆದುಕೊಂಡು ಬರಲಾಗಿದ್ದ ಬಾಳೆಕಂದು, ಮಾವಿನ ಎಲೆ ಹಾಗೂ ಬೂದು ಕುಂಬಳ ಕಾಯಿಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗಿದ್ದಾರೆ. ಪರಿಣಾಮ ನಿಗದಿಗಿಂತಲೂ ಹೆಚ್ಚಿನ ಪ್ರಮಾಣ ತ್ಯಾಜ್ಯ ಸೃಷ್ಟಿಯಾಗಿದ್ದು, ವಿಲೇವಾರಿ ಪಾಲಿಕೆಗೆ ತಲೆನೋವಾಗಿ ಪರಿಣಮಿಸಲಿದೆ.
ಸಾಮಾನ್ಯ ದಿನಗಳಲ್ಲಿ ನಗರದಲ್ಲಿ ನಾಲ್ಕೂವರೆ ಸಾವಿರ ಟನ್ ತ್ಯಾಜ್ಯ ಸೃಷ್ಟಿಯಾಗುತ್ತದೆ. ಆದರೆ, ನಗರದಲ್ಲಿ ಕಳೆದೆರಡು ದಿನಗಳಿಂದ ಪೂರ್ಣ ಪ್ರಮಾಣದ ತ್ಯಾಜ್ಯ ವಿಲೇವಾರಿ ಕಾರ್ಯ ನಡೆದಿಲ್ಲ. ಇದರೊಂದಿಗೆ ಪಟಾಕಿ ತ್ಯಾಜ್ಯ ಶೀಘ್ರ ವಿಲೇವಾರಿ ಮಾಡದಿದ್ದರೆ ಗಾಳಿಗೆ ಬೇರೆಡೆಗೆ ಹಾರುವ ಸಾಧ್ಯತೆಯಿದೆ. ಆದರೆ, ಪಾಲಿಕೆಯ ಅಧಿಕಾರಿಗಳು ಮಾತ್ರ ಪಟಾಕಿ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳಲು ಮುಂದಾಗಿಲ್ಲ.
ನಿರ್ವಹಣೆಗೆ ಸೂಚನೆ: ಪಟಾಕಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವಂತೆ ಈಗಾಗಲೇ ಸಿಬ್ಬಂದಿಗೆ ಸೂಚಿಸಲಾಗಿದೆ. ಜತೆಗೆ ಪಟಾಕಿ ತ್ಯಾಜ್ಯಕ್ಕೆ ಯಾವುದೇ ಕಾರಣಕ್ಕೂ ಬೆಂಕಿ ಹಾಕದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ರಂದೀಪ್ ತಿಳಿಸಿದರು.