Advertisement

ಬೆಂಕಿ ಪತ್ತೆ ಹಚ್ಚುವ ಸ್ಫಾರ್‌ ಡ್ರೋನ್‌

03:58 PM Feb 15, 2023 | Team Udayavani |

ಬೆಂಗಳೂರು: ಹಡಗುಗಳು, ಬೃಹತ್‌ ಕಟ್ಟಡ, ಕಾರ್ಖಾನೆಗಳು, ಸಾರ್ವಜನಿಕ ಕಾರ್ಯಕ್ರಮ ಸೇರಿದಂತೆ ಯಾವುದೇ ಪ್ರದೇಶಗಳಲ್ಲಿ ಬೆಂಕಿ ಅವಘಡ ಸಂಭವಿಸಿದರೆ ಇನ್ನು ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ಬೆಂಕಿ ಅವಘಡ ಪತ್ತೆಹಚ್ಚಲೆಂದೇ “ಸ್ಫಾರ್‌’ ಡ್ರೋನ್‌ ಬರಲಿದೆ.

Advertisement

ಹೌದು, ತ್ಸಲ್ಲಾ ಏರೋಸ್ಪೇಸ್‌ ಸಂಸ್ಥೆಯು “ಐಡೆಕ್ಸ್‌’ ಸಹಯೋಗದೊಂದಿಗೆ “ಆತ್ಮನಿರ್ಭರ ಭಾರತ’ ಧ್ಯೇಯವಾಕ್ಯದಡಿ ಸ್ವದೇಶಿ ಉತ್ಪನ್ನಗಳಿಂದ ‘ಸ್ಫಾರ್‌’ ಡ್ರೋನ್‌ ಅಭಿವೃದ್ಧಿಪಡಿಸುತ್ತಿದೆ. ಈ ಡ್ರೋನ್‌ ಆನ್‌ ಮಾಡಿ ಹಡಗು, ಕಟ್ಟಡ ಸೇರಿದಂತೆ ಯಾವುದೇ ಪ್ರದೇಶಗಳಲ್ಲಿ ಇಟ್ಟರೆ ಸಾಕು ಆ ಪ್ರದೇಶಗಳಲ್ಲಿ ಬೆಂಕಿ ಅವಘಡಗಳು ಸಂಭವಿಸಿದ ತಕ್ಷಣ ಸ್ವಯಂಚಾಲಿತವಾಗಿ ಚಲಿಸಿ ಕ್ಷಣ ಮಾತ್ರದಲ್ಲಿ ಮಾಹಿತಿ ನೀಡಲಿದೆ.

ಸ್ಫಾರ್’ ಡ್ರೋನ್‌ ವಿಶೇಷತೆಗಳೇನು?: 2 ಕೆ.ಜಿ. ತೂಕದ, 40 ಡಯೋಮೀಟರ್‌ ಗಾತ್ರದ ಪುಟ್ಟ ‘ಸ್ಫಾರ್‌’ ಡ್ರೋನ್‌ ಸಾಮಾನ್ಯ ಡ್ರೋನ್‌ಗಳಿಗಿತಂ ಭಿನ್ನವಾಗಿದೆ. ಈ ಡ್ರೋನ್‌ನಲ್ಲಿ ಅಳವಡಿಸಿರುವ ಥರ್ಮಲ್‌ ಕ್ಯಾಮೆರಾ ಸ್ಪಷ್ಟ ಚಿತ್ರಣ ನೀಡಲು ಸಹಕಾರಿಯಾಗಿದೆ. ಡ್ರೋನ್‌ನ ಹೊರ ಭಾಗದಲ್ಲಿರುವ 360 ಡಿಗ್ರಿ ಸೆನ್ಸಾರ್‌ಗಳು ಬೆಂಕಿ ಅವಘಡ ಉಂಟಾದ ಸ್ಥಳಗಳನ್ನು ಪತ್ತೆ ಹಚ್ಚಲಿದೆ. ಸಣ್ಣದಾದ ಜಾಗದಲ್ಲಿ ನುಗ್ಗಿಸಿಕೊಂಡು ಹೋಗಲು ಇದರಲ್ಲಿ ಅಳವಡಿಸಿರುವ ಆಧುನಿಕ ಸುಧಾರಿತ ಸೆನ್ಸರ್‌ ಸಹಕರಿಸಲಿದೆ.

ಇನ್ನು ಡ್ರೋನ್‌ ಆನ್‌ ಮಾಡಿದ ಕೂಡಲೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಹಾಯದಿಂದ ಸ್ವಯಂ ಚಾಲಿತವಾಗಿ ಬೆಂಕಿ ಅವಘಡ ಸಂಭವಿಸಿದ ಸ್ಥಳಕ್ಕೆ ಹಾರುವುದು ಇದರ ವಿಶೇಷತೆಯಾಗಿದೆ. ಕತ್ತಲಲ್ಲಿ ಹಾರಾಟ ನಡೆಸಿ ಸ್ಪಷ್ಟವಾಗಿ ಸಲ್ಲಿರುವ ಚಿತ್ರಣ ತೋರಿಸಲು ಎಲ್‌ಇಡಿ ಲೈಟ್‌ಗಳಿವೆ.

ಜತೆಗೆ ಆಟೋನೋಮಸ್‌ ನ್ಯಾವಿಗೇಷನ್‌, ಎಲೆಕ್ಟ್ರಿಕ್‌ ಮೋಟಾರ್ಸ್‌, ಎಲೆಕ್ಟ್ರಿಕ್‌ ಬ್ಯಾಟರಿ ಅಳವಡಿಸಲಾಗಿದೆ. ಡ್ರೋನ್‌ನ ಕೆಳಗಿನ ಭಾಗದಲ್ಲಿ ಏರೋಸಾನ್‌ ಗ್ರೆನೆಡ್‌ ಅಳವಡಿಸಲಾಗಿದೆ.

Advertisement

ಈ ಗ್ರೆನೇಡ್‌ಗಳು ಬೆಂಕಿ ಅವಘಡ ಉಂಟಾದ ಸ್ಥಳದಲ್ಲಿ ರಾಸಾಯನಿಕಗಳನ್ನು ಸಿಂಪಡಿಸಿ ಬೆಂಕಿ ನಂದಿಸುವ ಕೆಲಸವನ್ನೂ ಮಾಡುತ್ತದೆ. ಡ್ರೋನ್‌ ವೇಗವಾಗಿ ಹಾರಾಡುವ ವೇಳೆ ಗೋಡೆ, ಕಿಟಕಿ, ಕಬ್ಬಿಣದ ರಾಡ್‌ಗಳಿಗೆ ತಗುಲಿ ಪ್ರೊಫೈಲರ್‌ ತುಂಡಾಗಿ ನೆಲಕ್ಕುರಳುವುದನ್ನೂ ತಪ್ಪಿಸಲು ಅದರ ಸುತ್ತಲೂ ಫ್ರೇಮ್ ಅಳವಡಿಸಲಾಗಿದೆ.

ಬೆಂಕಿ ಉರಿದ ಕೂಡಲೇ ಕ್ಷಣಮಾತ್ರದಲ್ಲಿ ಎಲ್ಲ ಮಹಡಿಗಳನ್ನು ಸ್ಕ್ಯಾನ್‌ ಮಾಡಿಕೊಂಡು ಟ್ಯಾಬ್ಲೆಟ್‌ಗೆ ಮಾಹಿತಿ ಒದಗಿಸುತ್ತದೆ. ಡ್ರೋನ್‌ನಲ್ಲಿ ಸೆಟ್‌ ಮಾಡಿದ ನಿರ್ದಿಷ್ಟ ಪ್ರದೇಶಗಳಲ್ಲಷ್ಟೇ ಇದು ಕಾರ್ಯಾ ನಿರ್ವಹಿಸಲಿದೆ. ‘ಸ್ಫಾರ್‌’ ಡ್ರೋನ್‌ನ ಅಭಿವೃದ್ಧಿ ನಡೆಯುತ್ತಿದ್ದು, ಆಗಸ್‌ನಲ್ಲಿ ಕಾರ್ಯ ರೂಪಕ್ಕೆ ಬಂದು ನೌಕಾಪಡೆ ಸೇರುವ ಸಾಧ್ಯತೆಗಳಿವೆ.

ಅಪಾಯ ತಡೆಗಟ್ಟಲು ಸಹಕಾರಿ : ಬೃಹತ್‌ ಬಾಯ್ಲರ್‌ಗಳಲ್ಲಿ ಜನ ಸಮಾನ್ಯರು ಟಾರ್ಚ್‌ ಲೈಟ್‌ ಉರಿಸಿಕೊಂಡು ಪರಿಶೀಲಿಸುವ ವೇಳೆ ಸಾಕಷ್ಟು ಅಪಾಯ ಎದುರಾಗುತ್ತವೆ. ನ್ಯೂಕ್ಲಿಯರ್‌ ಪವರ್‌ ಪ್ಲಾಂಟ್‌ಗಳು, ಸುರಂಗಗಳು, ಒಳಚರಂಡಿ ತಪಾಸಣೆ ನಡೆಸಲು ಹೋಗಿ ಉಸಿರುಗಟ್ಟಿ ಮೃತಪಟ್ಟಿರುವ ಹಲವಾರು ಪ್ರಕರಣಗಳು ವರದಿಯಾಗುತ್ತಿರುತ್ತವೆ. ಈ ಡ್ರೋನ್‌ ಇಂತಹ ಕಡೆ ಹಾರಾಡಿಸಿ ಪರಿಶೀಲಿಸಿ ಜನ ಸಾಮಾನ್ಯರು ಅಪಾಯವನ್ನು ತಪ್ಪಿಸಬಹುದು. ಕಟ್ಟಡ, ಹೋಟೆಲ್‌ಗ‌ಳಲ್ಲಿ ಈ ಡ್ರೋನ್‌ ಸಹಾಯದಿಂದ ಬಿರುಕು ಬಿಟ್ಟಿರುವ ಪ್ರದೇಶಗಳನ್ನೂ ಪರಿಶೀಲಿಸಬಹುದು. ಕಟ್ಟಡ, ಹಡಗುಗಳಲ್ಲಿ ಬೆಂಕಿ ಹೊತ್ತಿಕೊಂಡಾಗ ಅದರೊಳಗೆ ಸಿಲುಕಿರುವ ಜನರನ್ನು ಹುಡುಕಲು ‘ಸ್ಫಾರ್‌’ಸಹಕಾರಿಯಾಗಿದೆ. ಈ ಡ್ರೋನ್‌ ನೌಕಾಪಡೆ ಸೇರಿದರೆ ಇದನ್ನು ಅಭಿವೃದ್ಧಿಪಡಿಸಲು ತಗುಲಿದ ಶೇ.50 ಅನುದಾನ ಸರ್ಕಾರವೇ ಭರಿಸಲಿದೆ ಎನ್ನುತ್ತಾರೆ ತ್ಸಲ್ಲಾ ಏರೋಸ್ಪೇಸ್‌ ಸಂಸ್ಥೆಯ ಸ್ಟ್ರಕ್ಚರಲ್‌ ಇಂಜಿನಿಯರ್‌ ಶರತ್‌ ಚಂದ್ರ.

ಸದ್ಯ ಭಾರತೀಯ ನೌಕಾಪಡೆಯ ಹಡಗುಗಳಲ್ಲಿ ಅಳವಡಿಸುವ ಉದ್ದೇಶದಿಂದ ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಖಾಸಗಿಯಾಗಿ ಬಳಸಲು ಅನುವು ಮಾಡಿಕೊಡಲಾಗುವುದು. -ಶರತ್‌ ಚಂದ್ರ, ಸ್ಟ್ರಕ್ಚರಲ್‌ ಇಂಜಿನಿಯರ್‌, ತ್ಸಲ್ಲಾ ಏರೋಸ್ಪೇಸ್‌

ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next