Advertisement
ಇತ್ತೀಚೆಗಿನ ಕಾಡ್ಗಿಚ್ಚು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆಯು ಇದಕ್ಕೆ ಮೂಲ ಕಾರಣ ಏನು ಎಂಬುದರ ಬಗ್ಗೆ ನಿಖರ ಕಾರಣ ಪತ್ತೆ ಹಚ್ಚಲು ಸಿಐಡಿ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
Related Articles
Advertisement
ಬೆಂಕಿ ಭೀತಿಬಂಡೀಪುರ-ನಾಗರಹೊಳೆಯಿಂದ ಹಿಡಿದು ದಾಂಡೇಲಿವರೆಗೆ ರಾಜ್ಯದ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಈಗ ಕಾಡ್ಗಿಚ್ಚಿನದ್ದೇ ಭೀತಿ.ಹೀಗಿರುವಾಗ, ಧಗಧಗ ಉರಿಯುತ್ತಿರುವ ಬಿಸಿಲಿಗೆ ಬೆಂಕಿಯ ಸಣ್ಣ ಕಿಡಿ ಹಾಕಿದರೂ ಸಾಕು; ಇಡೀ ಕಾಡಿಗೆ ಕಾಡೇ ಹೊತ್ತಿ ಉರಿಯುತ್ತದೆ. ಇದರ ಪರಿಣಾಮ, ಕಾಡಿನಲ್ಲಿ ಯಾವಾಗ, ಎಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ ಎಂಬುದನ್ನು ಅರಣ್ಯ ಸಿಬ್ಬಂದಿಗೆ ಊಹಿಸಲು ಕೂಡ ಸಾಧ್ಯವಾಗುತ್ತಿಲ್ಲ. ಅದರಲ್ಲಿಯೂ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಜನವಸತಿಯಿರುವ ಕಾಡು ಪ್ರದೇಶಗಳಲ್ಲಿ ಕಾಡ್ಗಿಚ್ಚು ನಿಯಂತ್ರಿಸುವುದು ಅರಣ್ಯ ಇಲಾಖೆಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದರೆ, ರಾಜ್ಯದಲ್ಲಿ ಈಗ ಬಹುತೇಕ ಕಡೆ ಉಂಟಾಗುತ್ತಿರುವ ಕಾಡ್ಗಿಚ್ಚಿಗೆ ಕಿಡಿಗೇಡಿಗಳ ಅತಿಕ್ರಮಣ ಪ್ರವೇಶವೇ ಕಾರಣ ಎಂಬ ದಟ್ಟ ಅನುಮಾನ ಮೂಡಿದೆ. ಏಕೆಂದರೆ, ಅರಣ್ಯ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಚಾರಣಿಗರ ಸಂಖೆ ಜಾಸ್ತಿಯಾಗಿದೆ. ಇನ್ನೊಂದೆಡೆ ದಟ್ಟ ಕಾಡಿನ ನಡುವೆಯೇ ಬಹಳಷ್ಟು ಹೋಮ್‌ಸ್ಟೇಗಳು ಕೂಡ ತಲೆಯೆತ್ತಿವೆ. ಈ ರೀತಿ ಕಾಡಿಗೆ ಅತಿಕ್ರಮಣ ಪ್ರವೇಶ ಮಾಡುವ ಕಿಡಿಗೇಡಿಗಳು ಕಾಡಿನಲ್ಲೇ ಮೋಜು-ಮಸ್ತಿ ಮುಗಿಸಿ ನಂತರ ಬೆಂಕಿ ಹಚ್ಚಿ ಹೋಗುತ್ತಿರುವುದು ಅರಣ್ಯ ಇಲಾಖೆ ಗಮನಕ್ಕೆ ಬಂದಿದೆ. ಇನ್ನು ದಟ್ಟ ಅರಣ್ಯ ಪ್ರದೇಶದಿಂದ ಹಾದು ಹೋಗಿರುವ ರಸ್ತೆಗಳಲ್ಲಿಯೂ ಕಿಡಿಗೇಡಿಗಳು ಕಾಡಿಗೆ ಕೊಳ್ಳಿಯಿಡುತ್ತಿದ್ದಾರೆ. ಇತ್ತೀಚೆಗೆ ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಅರಣ್ಯ ಪ್ರದೇಶದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಳ್ಳುವ ದುರುದ್ದೇಶದಿಂದ ಸ್ಥಳೀಯ ಜನರೇ ಕಾಡಿಗೆ ಬೆಂಕಿ ಹಾಕಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ. ಮತ್ತೂಂದೆಡೆ ಕಾಡ್ಗಿಚ್ಚು ನಂದಿಸುವುದು ಅರಣ್ಯ ಇಲಾಖೆ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಕೆಲವು ಕಡೆ ಬೆಂಕಿ ನಂದಿಸುವುದಕ್ಕೆ ತಮ್ಮಿಂದ ಸಾಧ್ಯವಾಗದೆ ಸ್ಥಳೀಯ ಜನರನ್ನು ಕರೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಸ್ಥಳೀಯರಿಗೆ ಅವರು ಕೇಳಿದಷ್ಟು ಸಂಬಳ, ಊಟದ ವ್ಯವಸ್ಥೆಯನ್ನು ಅರಣ್ಯ ಸಿಬ್ಬಂದಿ ತನ್ನ ಜೇಬಿನಿಂದಲೇ ಕೊಡಬೇಕಾಗಿದೆ. ಹೀಗಾಗಿ, ಕಾಡ್ಗಿಚ್ಚು ಎಂದರೆ ನಾವೇ ಬೆಚ್ಚಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಹೇಳುತ್ತಾರೆ. – ಸುರೇಶ್ ಪುದುವೆಟ್ಟು