ಮುಂಬಯಿ : ಮಧ್ಯ ಮುಂಬೈನ 61 ಅಂತಸ್ತಿನ ಕಟ್ಟಡದಲ್ಲಿ ಗುರುವಾರ ಅಗ್ನಿ ಅನಾಹುತ ಸಂಭವಿಸಿದ್ದು, ಬೆಂಕಿಯನ್ನು ನಂದಿಸುವಾಗ ಇಬ್ಬರು ಅಗ್ನಿಶಾಮಕ ದಳದ ಸಿಬಂದಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 10.45ರ ಸುಮಾರಿಗೆ ಕರ್ರಿ ರೋಡ್ ಪ್ರದೇಶದ `ಒನ್ ಅವಿಘ್ನ ಪಾರ್ಕ್’ ಕಟ್ಟಡದ 22ನೇ ಮಹಡಿಯಲ್ಲಿರುವ ಫ್ಲಾಟ್‌ನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಮೂರು ಗಂಟೆಗಳ ನಂತರ ಮಧ್ಯಾಹ್ನ 1.50 ರ ಹೊತ್ತಿಗೆ ನಂದಿಸಲಾಯಿತು.
ಇದಕ್ಕೂ ಮುನ್ನ 14ನೇ ಮಹಡಿಯಲ್ಲಿ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಬೆಂಕಿ ಹೊತ್ತಿಕೊಂಡ ಫ್ಲಾಟ್ ಒಳಗೆ ಯಾರೂ ಇರಲಿಲ್ಲ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಸಂಜಯ್ ಮಂಜ್ರೇಕರ್ ಪಿಟಿಐಗೆ ತಿಳಿಸಿದ್ದಾರೆ. ಬೆಂಕಿಗೆ ಕಾರಣವನ್ನು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಅಗ್ನಿಶಾಮಕ ಸಿಬಂದಿಗಳಾದ ರಾಮದಾಸ್ ಶಿವರಾಮ್ ಸನಾಸ್ (37) ಮತ್ತು ಮಹೇಶ್ ರವೀಂದ್ರ ಪಾಟೀಲ್ (26) ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕಿತ್ಸೆ ಬಳಿಕ ಇಬ್ಬರನ್ನೂ ಡಿಸ್ಚಾರ್ಜ್ ಮಾಡಲಾಗಿದೆ. ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿದ್ದವು.
ಅಕ್ಟೋಬರ್ 2021 ರಲ್ಲಿ, ಅದೇ ವಸತಿ ಸಂಕೀರ್ಣದ 19 ನೇ ಮಹಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು, ಇದರಲ್ಲಿ 30 ವರ್ಷದ ಭದ್ರತಾ ಸಿಬಂದಿ ಇತರರನ್ನು ಉಳಿಸುವಾಗ ಸಾವನ್ನಪ್ಪಿದರು.