ಮುಂಬೈ: ಮಾಲ್ ಒಂದರ ಮೂರನೇ ಮಹಡಿಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಮುಂಬೈನ ಭಾಂಡುಪ್ ನಲ್ಲಿ ಈ ಘಟನೆ ನಡೆದಿದ್ದು, ಆಸ್ಪತ್ರೆ ಒಳಗಡೆ ಇನ್ನೂ ಆರು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ಭಾಂಡುಪ್ ನ ಡ್ರೀಮ್ ಮಾಲ್ ಮೂರನೇ ಮಹಡಿಯಲ್ಲಿ ಕೋವಿಡ್ ಕೇರ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಅಗ್ನಿ ಶಾಮಕ ದಳ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ, ಆರು ಮಂದಿ ಇನ್ನೂ ಒಳಗಡೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ವಿಟ್ಲ ಎಸ್.ಐ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಯತ್ನ: ಆರೋಪಿ ಬಂಧನ
ಈ ಕುರಿತು ಮಾತನಾಡಿರುವ ಮುಂಬೈ ಮೇಯರ್, ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಆದರೆ ಮಾಲ್ ನ ಒಳಗಡೆ ಆಸ್ಪತ್ರೆ ನಿರ್ಮಿಸಿರುವುದು ನಾನು ಇದೇ ಮೊದಲು ಕೇಳಿರುವುದು. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಈ ಘಟಕದಲ್ಲಿ 76 ಮಂದಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಲ್ಲಿ 73 ಮಂದಿ ಕೋವಿಡ್ ಸೋಂಕಿತರಾಗಿದ್ದರು. ಎಲ್ಲರನ್ನೂ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.