ನವದೆಹಲಿ: ಕೋವಿಶೀಲ್ಡ್ ತಯಾರಿಕಾ ಸಂಸ್ಥೆಯ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಘಟಕದ ಆವರಣದಲ್ಲಿ ಭಾರೀ ಅಗ್ನಿಅವಘಡ ಸಂಭವಿಸಿರುವ ಘಟನೆ ಗುರುವಾರ(ಜನವರಿ 21, 2021) ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಎನ್ ಡಿಆರ್ ಎಫ್ ತಂಡ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿರುವುದಾಗಿ ವರದಿ ತಿಳಿಸಿದೆ.
ಸೀರಂ ಇನ್ಸ್ ಟ್ಯೂಟ್ ಘಟಕದಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ ಎಂದು ಮೂಲಗಳು ಹೇಳಿವೆ. ಸೀರಂ ಇನ್ಸ್ ಟಿಟ್ಯೂಟ್ ಆವರಣದಲ್ಲಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿರುವುದಾಗಿ ವರದಿ ವಿವರಿಸಿದೆ.
ಸೀರಮ್ ಇನ್ಸ್ ಟಿಟ್ಯೂಟ್ ನ ಟರ್ಮಿನಲ್ ಮೊದಲ ಗೇಟ್ ನಲ್ಲಿ ಈ ಬೆಂಕಿ ಅನಾಹುತ ಸಂಭವಿಸಿದ್ದು, ಸ್ಥಳಕ್ಕೆ ಹತ್ತು ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ ಎಂದು ವರದಿ ತಿಳಿಸಿದೆ.
ಮೂಲಗಳ ಪ್ರಕಾರ, ಘಟನೆಯಲ್ಲಿ ನಾಲ್ವರು ಸಿಲುಕಿಕೊಂಡಿದ್ದು, ಅವರಲ್ಲಿ ಮೂವರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. ಆಕ್ಸ್ ಫರ್ಡ್ ಯೂನಿರ್ವಸಿಟಿ ಮತ್ತು ಆಸ್ಟ್ರಾಜೆನೀಕಾ ಅಭಿವೃದ್ದಿಪಡಿಸಿದ ಕೋವಿಶೀಲ್ಡ್ ಲಸಿಕೆಯನ್ನು ಸೀರಂ ಇನ್ಸ್ ಟಿಟ್ಯೂಟ್ ಉತ್ಪಾದಿಸುತ್ತಿದೆ.
ಕೋವಿಶೀಲ್ಡ್ ಉತ್ಪಾದನಾ ಘಟಕಕ್ಕೆ ತೊಂದರೆಯಾಗಿದೆಯೇ?
ಎಎನ್ ಐ ವರದಿ ಪ್ರಕಾರ, ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಆವರಣದಲ್ಲಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಲಸಿಕೆ ಮತ್ತು ಲಸಿಕೆ ಉತ್ಪಾದನಾ ಘಟಕ ಸುರಕ್ಷಿತವಾಗಿರುವುದಾಗಿ ವರದಿ ವಿವರಿಸಿದೆ.