ಬೆಂಗಳೂರು: ಇತ್ತೀಚೆಗೆ ಕೇರಳ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರು ತಡೆದು ಕಪ್ಪು ಬಾವುಟ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಕೆಲ ಕಿಡಿಗೇಡಿಗಳು ವೈಯಾಲಿಕಾವಲ್‌ನಲ್ಲಿರುವ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ಕಚೇರಿ ಮುಂಭಾಗ ನಿಂತಿದ್ದ ಆರು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ವೈಯಾಲಿಕಾವಲ್‌ನಲ್ಲಿರುವ ಕಚೇರಿಗೆ ಮಂಗಳವಾರ ತಡರಾತ್ರಿ ಒಂದು ಗಂಟೆ ಸುಮಾರಿಗೆ ಎರಡು ದ್ವಿಚಕ್ರ ವಾಹನದಲ್ಲಿ ಬಂದಿರುವ ನಾಲ್ವರು ದುಷ್ಕರ್ಮಿಗಳು, ಕಚೇರಿಯ ಕಬ್ಬಿಣದ ಬಾಗಿಲಿಗೆ ಪೆಟ್ರೋಲ್ ಸುರಿದು, ಬಳಿಕ ಕಚೇರಿ ಮುಂಭಾಗ ನಿಂತಿದ್ದ ಆರು ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ. ಪರಿಣಾಮ ಎರಡು ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ನಾಲ್ಕು ವಾಹನಗಳಿಗೆ ಸಣ್ಣ-ಪುಟ್ಟ ಹಾನಿಯಾಗಿವೆ. ಕಬ್ಬಿಣದ ಬಾಗಿಲು ಸಹ ಅಲ್ಪ ಪ್ರಮಾಣದಲ್ಲಿ ಸುಟ್ಟಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಕಿ ನಂದಿಸಿದ ಭದ್ರತಾ ಸಿಬ್ಬಂದಿ: ಕಚೇರಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದು, ಆತನ ಕುಟುಂಬ ಸಹ ಅಲ್ಲೇ ವಾಸವಾಗಿದೆ. ಬೆಂಕಿ ಕಿನ್ನಾಲಿಗೆ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಕುಟುಂಬ, ನೀರು ಸುರಿದು ಬೆಂಕಿ ನಂದಿಸಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಡರಾತ್ರಿಯೇ ಸ್ಥಳಕ್ಕೆ ದೌಡಾಯಿಸಿದ ವೈಯಾಲಿಕಾವಲ್ ಪೊಲೀಸರು, ಒಂದು ಅಗ್ನಿಶಾಮಕ ವಾಹನದ ಜತೆ ಬಂದು ಸಂಪೂರ್ಣವಾಗಿ ಬೆಂಕಿ ನಂದಿಸಿದ್ದಾರೆ. ಪಕ್ಷದ ಜಿಲ್ಲಾ ಸಹ ಕಾರ್ಯದರ್ಶಿ ಸತ್ಯಾನಂದ ನೀಡಿದ ದೂರಿನ ಮೇರೆಗೆ ತನಿಖೆ ಮುಂದುವರಿಸಲಾಗಿದ್ದು, ದುಷ್ಕರ್ಮಿಗಳು ಪೆಟ್ರೋಲ್ ತಂದಿದ್ದ ಬಾಟಲಿಗಳು ಸ್ಥಳದಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಬಿಡುಗಡೆ: ಸಿಪಿಐ ಕಚೇರಿಯಲ್ಲಿ ಯಾವುದೇ ಸಿಸಿಟಿವಿ ಕ್ಯಾಮರಾ ಇಲ್ಲ. ಆದರೆ, ಅದರ ಮುಂಭಾಗದಲ್ಲಿರುವ ಕಟ್ಟಡಗಳಲ್ಲಿ ಕ್ಯಾಮರಾಗಳಿದ್ದು, ಅದರಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ. ಈ ವೇಳೆ, ಎರಡು ಬುಲೆಟ್‌ನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳ ಪೈಕಿ ಇಬ್ಬರು ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಓಡುತ್ತಿರುವ ದೃಶ್ಯ ಸೆರೆಯಾಗಿದೆ. ಅದನ್ನು ಆಧರಿಸಿ ತನಿಖೆ ಮುಂದುವರಿಸಲಾಗಿದೆ. ಆರೋಪಿಗಳನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಪಿ ಭೇಟಿ: ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ, ಮಾತನಾಡಿದ ಅವರು, ಪ್ರಾಥಮಿಕ ಮಾಹಿತಿ ಪ್ರಕಾರ ತಡರಾತ್ರಿ ಒಂದು ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಬಂದಿರುವ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ ಎಂಬುದು ಗೊತ್ತಾಗಿದೆ. ಯಾವ ಕಾರಣಕ್ಕೆ ಬೆಂಕಿ ಹಚ್ಚಿದ್ದಾರೆ ಎಂಬುದು ಗೊತ್ತಿಲ್ಲ. ಆರೋಪಿಗಳ ಬಂಧನದ ಬಳಿಕವಷ್ಟೇ ಸ್ಪಷ್ಟತೆ ಸಿಗಲಿದೆ. ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಿಪಿಐ ಕಾರ್ಯಕರ್ತರ ಪ್ರತಿಭಟನೆ: ಘಟನೆ ಬೆನ್ನಲ್ಲೇ ಸಿಪಿಐ ಕಾರ್ಯಕರ್ತರು ಮಲ್ಲೇಶ್ವರಂ ವೃತ್ತದ ಬಳಿ ಪ್ರತಿಭಟನೆ ನಡೆಸಿ, ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ವಿರೋಧಿಸಿ ತಮ್ಮ ಪಕ್ಷದ ಕಾರ್ಯಕರ್ತರು ಮಂಗಳೂರು ಸೇರಿ ರಾಜ್ಯಾದ್ಯಂತ ನಡೆಸುತ್ತಿರುವ ಪ್ರತಿಭಟನೆ ಹಾಗೂ ಕೇರಳದಲ್ಲಿ ಪಕ್ಷದ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಹಿನ್ನೆಲೆ¿ಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ. ಈ ಕೃತ್ಯದ ಹಿಂದೆ ಬಿಜೆಪಿ, ಸಂಘ ಪರಿವಾರದ ಕೈವಾಡವಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.