ವಾಡಿ: ಕೆಂಡದ ಉಂಡೆಗಳನ್ನು ಹೊತ್ತು ಬೃಹತ್ ಸೈಲೋಗಳತ್ತ ಸಾಗುವ ಎಸಿಸಿ ಸಿಮೆಂಟ್ ಕಂಪನಿಯ ಕ್ಲಿಂಕರ್ ಬೆಲ್ಟ್ನಲ್ಲಿ ಸೋಮವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಪರಿಣಾಮ ಎಸಿಸಿ ಕಂಪನಿಯ ಹಳೆಯ ಘಟಕದ ಸಿಮೆಂಟ್ ಮಿಲ್ ಸಂಪೂರ್ಣ ಧಗಧಗಿಸಿ ಉರಿದಿದೆ.
ಕೆಲಸದಲ್ಲಿ ತೊಡಗಿದ್ದ ನೂರಾರು ಜನ ಕಾರ್ಮಿಕರು ಜೀವದ ಹಂಗು ತೊರೆದು ಓಡಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಂಪನಿಯಿಂದ ಸದ್ದಿಲ್ಲದೆ ಹೊರಟ ಕಾರ್ಮೋಡದಂತಹ ದಟ್ಟವಾದ ಕಪ್ಪು ಹೊಗೆ ಏಕಾಏಕಿ ಆಗಸವನ್ನು ಆವರಿಸುತ್ತಿದ್ದಂತೆ ಸಾರ್ವಜನಿಕರು, ಎಸಿಸಿಯ ಪರಿಸರ ಮಾಲಿನ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆಯ ಕ್ಲಿಂಕರ್ ಘಟಕದ ಸುಮಾರು 300 ಮೀಟರ್ ಉದ್ದದ ಕ್ಲಿಂಕರ್ ಬೆಲ್ಟ್ ಹೊತ್ತಿ ಉರಿಯುತ್ತಿದೆ ಎಂಬ ಸುದ್ದಿ ತಿಳಿದು ದಂಗಾದರು. ಸಿಮೆಂಟ್ ತಯಾರಿಕೆಗೂ ಮುನ್ನ ಅಡಕೆ ಗಾತ್ರದ ಬೆಂಕಿಯುಂಡೆಗಳಾಗಿ ಸೈಲೋಗಳಲ್ಲಿ ಸಂಗ್ರಹಗೊಳ್ಳುವ ಕ್ಲಿಂಕರ್, ಉಷ್ಣಾಂಶ ಹೆಚ್ಚಾಗಿ ಬೆಲ್ಟ್ಗೆ ಬೆಂಕಿ ಹತ್ತಿಕೊಂಡಿದೆ. ಸ್ಥಳದಲ್ಲಿದ್ದ ಕಾರ್ಮಿಕರು ಅಶ್ರುವಾಯು ಸಿಡಿಸಲು ಪ್ರಯತ್ನಿಸಿ ವಿಫಲರಾದರು.
ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಹಲೆವೆಡೆ ವ್ಯಾಪಿಸಿಕೊಂಡು ಘಟಕವನ್ನು ಭಸ್ಮಗೊಳಿಸಿತು. ಎಸಿಸಿ, ಚಿತ್ತಾಪುರ ಮತ್ತು ಸೇಡಂ ನಗರಗಳಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಕಂಪನಿಯ ವ್ಯವಸ್ಥಾಪಕರು, ಇಂಜಿನಿಯರ್‌ಗಳು, ಭದ್ರತಾ ಸಿಬ್ಬಂದಿ ಹಾಗೂ ನೂರಾರು ಜನ ಕಾರ್ಮಿಕರು ಸ್ಥಳದಲ್ಲಿದ್ದರು. ಬೆಂಕಿ ಕಾರುವಂತಹ ಕ್ಲಿಂಕರ್ ಉಂಡೆಗಳನ್ನು ಸೈಲೋಗಳಿಗೆ ಸಾಗಿಸುವ ಬೆಲ್ಟ್ ಆರು ವರ್ಷಗಳಿಗೊಮ್ಮೆ ಬದಲಿಸಬೇಕು ಎಂಬ ನಿಯಮವಿದೆ. ಆದರೆ, ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ್ದ ಪರಿಣಾಮ ಅಗ್ನಿ ದುರಂತ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಅಕ್ಷರಶಃ ಬೆಂಕಿ ಉಂಡೆಗಳಂತಹ ಕ್ಲಿಂಕರ್ ಸಾಗಿಸುವ ಬೆಲ್ಟ್ ಅತ್ಯಂತ ಸುರಕ್ಷಿತವಾಗಿರುವಂತೆ ಕಂಪನಿ ನೋಡಿಕೊಂಡು ಬರುತ್ತಿದೆ. ಬೆಂಕಿಯ ಉಷ್ಣಾಂಶ ತಗ್ಗಿಸಲು ನೀರು ಮತ್ತು ಬೂದಿ ಸಿಂಪರಣೆಗಾಗಿ ಹಲವು ರೀತಿಯ ತಂತ್ರಜ್ಞಾನ ಅಳವಡಿಸಲಾಗಿದೆ. ಇಂತಹ ಅಗ್ನಿ ದುರಂತ ಸಂಭವಿಸುವುದು ತೀರಾ ಅಪರೂಪ. ಅಲ್ಲದೆ ಕ್ಲಿಂಕರ್ ಬೆಲ್ಟ್ ಹೋಗುವ ಜಾಗ ಭೂಮಿಯಿಂದ ಬಹಳ ಎತ್ತರದಲ್ಲಿರುತ್ತದೆ. ಇಲ್ಲಿ ಕಾರ್ಮಿಕರೂ ಕೂಡ ಹೋಗುವುದಿಲ್ಲ. ಹೀಗಾಗಿ ಪ್ರಾಣಾಪಾಯ ಸಂಭವಿಸಿಲ್ಲ. ಇದು ಕಂಪನಿಯೊಳಗಿನ ಘಟನೆಯಾಗಿದ್ದರಿಂದ ಆಂತರಿಕ ತನಿಖೆ ನಡೆಯುತ್ತಿದೆ.
-ಯತೀಶ ರಾಜಶೇಖರ, ಮ್ಯಾನೇಜರ್ ಎಚ್‌ಆರ್, ಎಸಿಸಿ ಕಾರ್ಖಾನೆ