ಹರಿಹರ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿತ್ಯ ಕಸದ ರಾಶಿಗೆ ಬೆಂಕಿ ಹಾಕಿ ಸುಡಲಾಗುತ್ತಿದ್ದು ಇದರಿಂದ ತೀವ್ರ ಕಿರಿಕಿರಿಯಾಗುವುದಲ್ಲದೆ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ ಎಂದು ಸುತ್ತಮುತ್ತಲಿನ ಅಂಗಡಿಕಾರರು, ಪ್ರಯಾಣಿಕರು ಆರೋಪಿಸಿದ್ದಾರೆ.
ದಿನಕ್ಕೆ 1500ಕ್ಕೂ ಅಧಿಕ ಬಸ್‌ಗಳು ಬಂದು ಹೋಗುವ ನಿಲ್ದಾಣದಲ್ಲಿ ಸಹಜವಾಗಿಯೇ ಸಾಕಷ್ಟು ಕಸ ಸೃಷ್ಟಿಯಾಗುತ್ತದೆ. ಹೀಗೆ ಸಂಗ್ರಹವಾದ ಕಸವನ್ನು ಪಶ್ಚಿಮ ದಿಕ್ಕಿನಲ್ಲಿರುವ ಕಸದ ತೊಟ್ಟಿಗೆ ಹಾಕಿ ಕತ್ತಲಾಗುತ್ತಿದ್ದಂತೆ ಬೆಂಕಿ ಹಚ್ಚಿ ಸುಡಲಾಗುತ್ತದೆ. ನಿಲ್ದಾಣ ಸೇರಿದಂತೆ ಸುತ್ತಮುತ್ತಲ ವಾತಾವರಣದಲ್ಲಿ ದಟ್ಟ ಹೊಗೆ ಕವಿದು ಪ್ರಯಾಣಿಕರು ಹಾಗೂ ಸುತ್ತಲಿನ ನಿವಾಸಿಗಳಿಗೆ ಉಪದ್ರವವಾಗುತ್ತಿದ್ದರೂ ತಡೆಯುವವರಿಲ್ಲದಾಗಿದೆ.
ಕಸದಲ್ಲಿನ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳು, ಗುಟ್ಕಾ ಪಾಕೆಟ್, ನೀರು, ಜ್ಯೂಸ್‌ನ ಖಾಲಿ ಬಾಟಲಿಗಳು ಗಂಟೆಗಟ್ಟಲೆ ಸುಡುತ್ತಾ ಹೊಗೆ ಬರುವುದರಿಂದ ಪ್ರಯಾಣಿಕರು, ಅಂಗಡಿ ಮುಂಗಟ್ಟುಗಳ ವ್ಯಾಪಾರಿಗಳು ಅನಿವಾರ್ಯವಾಗಿ ಕಲುಪಿತ, ರಾಸಾಯನಿಕಯುಕ್ತ ಗಾಳಿಯನ್ನು ಸೇವಿಸಬೇಕಿದೆ. ಮಕ್ಕಳು, ವಯಸ್ಸಾದವರು ಕೆಮ್ಮುತ್ತಾ ಬಸ್‌ಗೆ ಕಾಯುವಂತಾಗಿದೆ.
ನಿಲ್ದಾಣದ ಸ್ವಚ್ಛತೆ ಕಾಪಾಡಲು ನೇಮಕಗೊಂಡಿರುವ ಗುತ್ತಿಗೆದಾರರು ಕಸ ಸಂಗ್ರಹಿಸಿ ನಿಗದಿತ ಸ್ಥಳಕ್ಕೆ ಸಾಗಿಸಬೇಕು. ಸಾಗಣೆ ಕೆಲಸ, ಖರ್ಚು-ವೆಚ್ಚದಿಂದ ತಪ್ಪಿಸಿಕೊಳ್ಳಲು ಅವರು ಕಸಕ್ಕೆ ಬೆಂಕಿ ಹಾಕಿ ಕೈತೊಳೆದುಕೊಳ್ಳುತ್ತಿದ್ದಾರೆ. ಆದರೆ 24 ಗಂಟೆ ನಿಲ್ದಾಣದಲ್ಲೇ ಇರುವ ಸಂಸ್ಥೆಯ ಅಧಿಕಾರಿಗಳು ಇದನ್ನು ಕಂಡೂ ಕಾಣದಂತಿರುವುದು ಆಶ್ಚರ್ಯ ಮೂಡಿಸಿದೆ. ಪ್ರಯಾಣಿಕರೇನಾದರೂ ಈ ಬಗ್ಗೆ ದೂರಿದರೆ ಬೆಂಕಿ ಹಾಕುವವರಿಗೆ ಹೇಳಿ, ನಮಗೇನು ಕೇಳುತ್ತೀರಿ ಎಂದು ಉತ್ತರಿಸುತ್ತಾರೆ.
ಅವ್ಯವಸ್ಥೆಯ ಆಗರ: ಇದಲ್ಲದೇ ರಾತ್ರಿ ಸಮಯದಲ್ಲಿ ನಿಲ್ದಾಣದಲ್ಲಿ ಬಹುತೇಕ ಲೈಟ್‌ಗಳು ಬೆಳಗುವುದಿಲ್ಲ. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿಲ್ಲ, ಮಹಿಳೆಯರ ವಿಶ್ರಾಂತಿ ಕೊಠಡಿಯಿಲ್ಲ. ಪ್ರಯಾಣಿಕರು ಏನಾದರೂ ಸಮಸ್ಯೆ ಹೇಳಿದರೆ ಸದ್ಯದಲ್ಲೇ ಹೈಟೆಕ್ ಬಸ್ ನಿಲ್ದಾಣವಾಗಲಿದೆ ಎಂದು ಕಳೆದ 5-6 ವರ್ಷಗಳಿಂದ ಹೇಳುತ್ತಲೇ ಬರುತ್ತಿದ್ದಾರೆ.
ಬೆಳಗ್ಗೆ ಬೆಂಕಿ ಹಚ್ಚಲು ಹೇಳಿದ್ದೆ!
ನಿಲ್ದಾಣದಲ್ಲಿ ಕಸಕ್ಕೆ ಬೆಂಕಿ ಹಚ್ಚಿ ಪರಿಸರ ಮಾಲಿನ್ಯ ಮಾಡುತ್ತಿರುವ ಬಗ್ಗೆ ಡಿಪೋ ಮ್ಯಾನೇಜರ್ ಮರುಳಸಿದ್ದಪ್ಪರಿಗೆ ಕೇಳಿದಾಗ ಅವರು ಕಸಕ್ಕೆ ಬೆಳಗ್ಗೆ ಹೊತ್ತಲ್ಲಿ ಬೆಂಕಿ ಹಾಕಿ ಎಂದರೆ ಕೆಲಸಗಾರರು ಸಂಜೆ ಹಾಕುತ್ತಿದ್ದಾರೆ ಎಂದು ಹೇಳಿದರು. ಕಸಕ್ಕೆ ಬೆಂಕಿ ಹಾಕುವುದು ತಪ್ಪು, ಸೂಕ್ತ ರೀತಿಯಲ್ಲೆ ವಿಲೆ ಮಾಡಬೇಕಲ್ಲವೆ ಎಂದು ಪ್ರಶ್ನಿಸಿದಾಗ ಅವರು, ಕಸವನ್ನು ಬೇರೆಡೆಗೆ ಸಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.