Advertisement

ಮೂಲ್ಕಿ: ಬೆಂಕಿ ಆಕಸ್ಮಿಕ: ನಗದು, 5 ಲ. ರೂ. ಬೆಲೆಬಾಳುವ ವಸ್ತು ನಾಶ

08:30 AM Aug 16, 2017 | Karthik A |

ಮೂಲ್ಕಿ: ವಿಜಯ ಕಾಲೇಜು ರಸ್ತೆಯ ಉಮಾಮಹೇಶ್ವರ ದೇವಸ್ಥಾನ ಸಮೀಪದ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸುಮಾರು 5 ಲಕ್ಷ ರೂ.ಗಳಿಗೂ ಮಿಕ್ಕಿದ ಬೆಳೆ ಬಾಳುವ ವಸ್ತು ಹಾಗೂ ನಗದು ನಷ್ಟ ಉಂಟಾಗಿರುವುದಾಗಿ ಮೂಲ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರದೀಪ್‌ ಕಾರ್ನಾಡ್‌ ಅವರ ಮಾಲಕತ್ವದ ಬಾಡಿಗೆ ಮನೆಯಲ್ಲಿ ವಾಸವಿರುವ ಮೂಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಚಂದ್ರಶೇಖರ್‌ ಅವರು ಬೆಳಗ್ಗೆ 8 ಗಂಟೆ ಸುಮಾರಿಗೆ ಕಾಲೇಜಿನಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ತೆರಳಿದ್ದರು. ಸುಮಾರು 9 ಗಂಟೆ ಸುಮಾರಿಗೆ ಮನೆಯ ಒಂದು ಬದಿಯಲ್ಲಿ ಭಾರೀ ಪ್ರಮಾಣದ ಬೆಂಕಿ ಹತ್ತಿಕೊಂಡು ಉರಿಯಲಾರಂಭಿಸಿದಾಗ ಗಾಬರಿಗೊಂಡ ಪಕ್ಕದ ಮನೆಯವರು ಬೊಬ್ಬೆ ಹಾಕಿ ಜನ ಸೇರಿಸಿ ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟರು.

Advertisement

ಆದರೆ ಬೆಂಕಿಯ ಕೆನ್ನಾಲಿಗೆ ಹರಡುತ್ತಿದ್ದಂತೆ ಭಯಭೀತರಾದ ಸ್ಥಳೀಯರು ಪೊಲೀಸರ ಮೂಲಕ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದರು. ಮಂಗಳೂರಿನ ಅಗ್ನಿಶಾಮಕ ದಳದ ಸಿಬಂದಿ ಆಗಮಿಸುತ್ತಿದ್ದಂತೆ ಸ್ಥಳೀಯರು ಸೇರಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಮನೆಯ ಒಳಗೆ ಮೂರು ಗ್ಯಾಸ್‌ ಸಿಲಿಂಡರ್‌ ಹಾಗೂ ಪಕ್ಕದ ಮನೆಯ ಮಧುಸೂದನ್‌ ಅವರಿಗೆ ಸೇರಿದ ಟಿ.ವಿ.ಎಸ್‌. ವೆಗೋ ಸ್ಕೂಟರ್‌ಗೂ ಬೆಂಕಿ ತಗಲಿ ಅದರಲ್ಲಿ ಪೆಟ್ರೋಲ್‌ ಟ್ಯಾಂಕ್‌ಗೆ ಬೆಂಕಿ ಹತ್ತಿಕೊಂಡು ಬೆಂಕಿಯ ಜ್ವಾಲೆ ವಿಸ್ತರಿಸಿತು. ಒಳಗಿದ್ದ ಗ್ಯಾಸ್‌ ಸಿಲಿಂಡರ್‌ಗಳಲ್ಲಿ ಎರಡು ಸಿಲಿಂಡರ್‌ಗಳು ಬೆಂಕಿಗೆ ಸಿಲುಕಿ ಕರಕಲಾಗಿ ಹೋಗಿದ್ದವು. ಚಂದ್ರಶೇಖರ್‌ ಅವರಿಗೆ ಸೇರಿದ ವಿವಿಧ ದಾಖಲೆ ಪತ್ರಗಳು, ಕಂಪ್ಯೂಟರ್‌ ಲಾಬಟಾಪ್‌, ಪಾತ್ರೆಗಳು, ಕಪಾಟುಗಳು, ಕೆಮರಾ, ಮೊಬೈಲ್‌ ಮತ್ತು ಸುಮಾರು ಮೂವತ್ತು ಸಾವಿರ ನಗದು ಕೂಡ ಸುಟ್ಟು ಹೋಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತೀರಾ ಹಳೆಯ ಕಟ್ಟಡವಾಗಿದ್ದು ವಿದ್ಯುತ್‌ ಸಂಪರ್ಕದ ವಯರ್‌ ಮತ್ತು ಇತರ ಸಾಧನಗಳು ಹಳೆಯದಾಗಿದ್ದು ಶಾರ್ಟ್‌ ಸರ್ಕ್ಯೂಟ್‌ ಉಂಟಾಗಿ ಬೆಂಕಿ ಅನಾಹುತ ಸಂಭವಿಸಿರಬೇಕು ಎಂದು ಅಂದಾಜಿಸಲಾಗಿದೆ. ಚಂದ್ರಶೇಖರ್‌ ಅವರು ಧರಿಸಿದ ಬಟ್ಟೆಯೊಂದು ಬಿಟ್ಟರೆ ಅವರ ಎಲ್ಲ ಸೊತ್ತುಗಳು ಸುಟ್ಟು ನಾಶವಾಗಿವೆ ಎಂದು ತಿಳಿದು ಬಂದಿದೆ. ಗ್ಯಾಸ್‌ ಸಿಲಿಂಡರ್‌ಗಳು ಒಳಗಿದ್ದ ಪರಿಣಾಮ ಬೆಂಕಿಯ ನಂದಿಲು ಸ್ಥಳೀಯರು ಆರಂಭದಲ್ಲಿ ಭಯಪಟ್ಟರು. ಬಳಿಕ ಅಗ್ನಿ ಶಾಮಕ ದಳದ ಸಿಬಂದಿ ಬೆಂಕಿ ಸಂಪೂರ್ಣ ಹತೋಟಿಗೆ ಬರುವ ತನಕ ಕಾರ್ಯಾ ಚರಣೆ ನಡೆಸಿ ತೆರಳಿದ್ದಾರೆ.

ಮಂಗಳೂರಿನಿಂದ ಬರುವ ಅಗ್ನಿಶಾಮಕ ದಳ
ಮೂಲ್ಕಿಗೆ ಸಮೀಪದಲ್ಲಿ ಅಗ್ನಿ ಶಾಮಕ ದಳ ಇಲ್ಲ. ಆ ಕಾರಣ ಹೆಚ್ಚಿನ ಎಲ್ಲ ಬೆಂಕಿ ಆಕಸ್ಮಿಕಗಳಲ್ಲಿ ಅಗ್ನಿ ಶಾಮಕ ದಳದ ಸಿಬಂದಿ ಮಂಗಳೂರಿನಿಂದ ಬರುವ ವೇಳೆಗಾಗಲೇ  ಹೆಚ್ಚಿನ ಹಾನಿಯಾಗಿರುತ್ತದೆ. ಅಗ್ನಿಶಾಮಕ ದಳವೊಂದು ಮೂಲ್ಕಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಗೊಳ್ಳುವ ಹೆಚ್ಚಿನ ಸಾಧ್ಯತೆ ಇರುವುದಾಗಿ ಕೆಲವು ಮೂಲಗಳಿಂದ ತಿಳಿದುಬಂದೆ. ಇದು ಆದಷ್ಟು ಬೇಗ ಆರಂಭಗೊಂಡರೆ ಅನಾಹುತಗಳು ಸಂಭವಿಸಿದಾಗ ಆಗುವ ನಷ್ಟದ ಪ್ರಮಾಣಗಳನ್ನು ಕಡಿಮೆಗೊಳಿಸುವಲ್ಲಿ ಪರಿಣಾಮಕಾರಿ ಕ್ರಮವಾಗಬಹುದು. ಮೂಲ್ಕಿ ಪೊಲೀಸ್‌ ಮತ್ತು ಕಂದಾಯ ಅಧಿಕಾರಿಗಳು ಬೇಟಿ ನೀಡಿ ಮಹಜರು ನಡೆಸಿದ್ದಾರೆ. ಶಾಸಕ ಕೆ. ಅಭಯಚಂದ್ರ ಜೈನ್‌ ಅವಘಡ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next