Advertisement

ಸಿಟಿ ಸೆಂಟರ್‌ನಲ್ಲಿ ಬೆಂಕಿ ಆಕಸ್ಮಿಕ; ಆತಂಕಕ್ಕೊಳಗಾದ ನಗರ ಜನತೆ

04:47 AM Feb 22, 2019 | Team Udayavani |

ಮಹಾನಗರ : ಬೆಳಗ್ಗೆ ಸುಮಾರು 11 ಗಂಟೆಯ ಸಮಯ. ಒಂದೆಡೆ, ಗ್ರಾಹಕರು ಶಾಪಿಂಗ್‌, ಸುತ್ತಾಟ ಅಂತ ಎಂದಿನಂತೆ ಮಾಲ್‌ನೊಳಗೆ ಓಡಾಡುತ್ತಿದ್ದರು. ಇನ್ನೊಂದೆಡೆ, ವ್ಯಾಪಾರಸ್ಥರು ಕೂಡ ಮಾಮೂಲಿನಂತೆ ತಮ್ಮ ಮಳಿಗೆಗಳನ್ನು ಆಗಷ್ಟೇ ತೆರೆದುಕೊಂಡು ಗ್ರಾಹಕರನ್ನು ಎದುರು ನೋಡುತ್ತಿದ್ದರು. ಇದ್ದಕ್ಕಿದ್ದಂತೆ ಬೆಂಕಿ ಬಿತ್ತು, ಬೆಂಕಿ ಎನ್ನುತ್ತ ಮಾಲ್‌ನೊಳಗೆ ಆತಂಕದ ವಾತಾವರಣ. ಅತ್ತ ಜನರು ಕೂಡ ಏನೋ ಅನಾಹುತ ಆಗಿರಬಹುದು ಎಂದು ಏಕಾಏಕಿ ಹೊರಗಡೆಗೆ ಓಡುತ್ತ ಬಂದರು!

Advertisement

ನಗರದ ಕೆ.ಎಸ್‌. ರಾವ್‌ ರಸ್ತೆಯಲ್ಲಿರುವ ಸಿಟಿ ಸೆಂಟರ್‌ ಮಾಲ್‌ನೊಳಗೆ ಬೆಂಕಿ ಆಕಸ್ಮಿಕ ಕಾಣಿಸಿಕೊಂಡಾಗ ಅಲ್ಲಿ ಕಂಡುಬಂದ ಆತಂಕದ ಸನ್ನಿವೇಶವಿದು. ಮಾಲ್‌ನ ಫುಡ್‌ ಕೋರ್ಟ್‌ನಲ್ಲಿ ಗುರುವಾರ ಬೆಂಕಿ ಆಕಸ್ಮಿಕದಿಂದ ದಟ್ಟ ಹೊಗೆ ಆವರಿಸಿಕೊಂಡಿತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳದ ತಂಡ ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ಯಂತ್ರಿಸಿದ್ದು, ಹೆಚ್ಚಿನ ಅನಾಹುತ ಸಾಧ್ಯತೆಗಳು ತಪ್ಪಿಹೋಗಿವೆ.

ಮಾಲ್‌ನ ನಾಲ್ಕನೇ ಅಂತಸ್ತಿನಲ್ಲಿ ಫುಡ್‌ ಕೋರ್ಟ್‌ ಮಳಿಗೆ ಇದೆ. ಗುರುವಾರ ಸುಮಾರು 11.30ರ ವೇಳೆಗೆ ಫುಡ್‌ಕೋರ್ಟ್‌ ನಲ್ಲಿ ಖಾದ್ಯಗಳನ್ನು ಸಿದ್ಧಪಡಿಸುವ ಕಾರ್ಯನಡೆಯುತ್ತಿತ್ತು. ಆ ವೇಳೆ ಕಿಚನ್‌ನೊಳಗೆ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ದಟ್ಟ ಹೊಗೆ ಬರಲಾರಂಭಿಸಿತು. ಕೆಲವೇ ನಿಮಿಷಗಳಲ್ಲಿ ಹೊಗೆ ನಾಲ್ಕನೇ ಅಂತಸ್ತು ಪೂರ್ತಿ ಆವರಿಸಿ ಬಳಿಕ ಇತರ ಅಂತಸ್ತುಗಳಿಗೂ ವ್ಯಾಪಿಸತೊಡಗಿತು. ಇದಲ್ಲದೆ ಕಟ್ಟಡದಿಂದ ಹೊರಗೂ ದಟ್ಟ ಹೊಗೆ ಬರತೊಡಗಿದ್ದು, ಸುತ್ತಮುತ್ತಲೂ ಆತಂಕ ಸ್ಥಿತಿ ನಿರ್ಮಿಸಿತು. ಕೂಡಲೇ ಜಾಗೃತರಾದ ಸಿಟಿಸೆಂಟರ್‌ನ ಭದ್ರತಾ ಸಿಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದು, ಕದ್ರಿ, ಪಾಂಡೇಶ್ವರದ ಅಗ್ನಿಶಾಮಕ, ತುರ್ತುಸೇವೆಗಳ ಠಾಣೆಯಿಂದ ಅಗ್ನಿಶಾಮಕ ವಾಹನಗಳು, ಸಿಬಂದಿ ಸ್ಥಳಗೆ ಧಾವಿಸಿ ಅಗ್ನಿಶಮನ ಮತ್ತು ಹೊಗೆ ನಿಯಂತ್ರಣ ಕಾರ್ಯಾಚರಣೆ ನಡೆಸಿದರು.

ಹೊರಗೆ ಧಾವಿಸಿದ ಜನರು
ಮಳಿಗೆಯಲ್ಲಿ ದಟ್ಟಹೊಗೆ ಕಾಣಿಸಿಕೊಳ್ಳುತ್ತಿರುವಂತೆಯೇ ಮಾಲ್‌ ನಲ್ಲಿದ್ದ ಜನರು ಗಾಬರಿಗೊಂಡು ಹೊರಗೆ ಧಾವಿಸಿತೊಡಗಿದರು. 

ಇದರಿಂದ ಸ್ಥಳದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಯಿತು. ಭದ್ರತಾ ಸಿಬಂದಿ, ಪೊಲೀಸರು ಅಲ್ಲಿ ಕೆಲಸ ಮಾಡುತ್ತಿದ್ದ ಸಿಬಂದಿ, ಖರೀದಿಗೆ ಬಂದಿದ್ದ ಜನರನ್ನು ತೆರವುಗೊಳಿಸಿದರು. ಕಟ್ಟಡದ ಎಲ್ಲ ದ್ವಾರಗಳನ್ನು ತೆರೆದು ಹೊಗೆ ಹೊರಗೆ ಹೋಗಲು ಅನುವು ಮಾಡಲಾಯಿತು. ಬಳಿಕ ಎಲ್ಲ ಮಳಿಗೆಗಳನ್ನು ಮುಚ್ಚಿಸಿ ಸೆಂಟರ್‌ನ ಎಲ್ಲ ಪ್ರವೇಶದ್ವಾರಗಳನ್ನು ಮುಚ್ಚ ಲಾಯಿತು. ಸಿಟಿಸೆಂಟರ್‌ನಲ್ಲಿ ಅಗ್ನಿ ಅನಾಹುತ ಸಂಭವಿಸಿದೆ ಎಂಬ ಸುದ್ದಿ ವಿವಿಧೆಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಿ ಸತೊಡಗಿದ್ದು, ಜನರು ಮಾಲ್‌ ಮುಂಭಾಗದಲ್ಲಿ ಜಮಾಯಿಸಿತೊಡಗಿದ ಕಾರಣ ಹೆಚ್ಚಿನ ಪೊಲೀಸ್‌ ಸಿಬಂದಿ ನಿಯೋಜಿಸಲಾಯಿತು. ಇದೇ ವೇಳೆ ಕೊಡಿ ಯಾಲಬೈಲ್‌ ಸರ್ಕಲ್‌ನಿಂದ ಹಂಪನಕಟ್ಟೆ ಕಡೆಗೆ ಬರುವ ಕೆ.ಎಸ್‌. ರಾವ್‌ ರಸ್ತೆಯಲ್ಲಿ ಹಾಗೂ ಬಾವುಟಗುಡ್ಡೆಯಿಂದ ಕೆ.ಎಸ್‌.ರಸ್ತೆಗೆ ಬರುವ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಯಿತು. ಘಟನೆ ವೇಳೆ ಫುಡ್‌ಕೋರ್ಟ್‌ ಪಕ್ಕದಲ್ಲೇ ಇರುವ ಸಿನಿಮಾಮಂದಿರದ 5 ಪರದೆಗಳಲ್ಲಿ ಚಲನಚಿತ್ರ ಪ್ರದರ್ಶನ ನಡೆಯುತ್ತಿದ್ದು, ಕೂಡಲೇ ಪ್ರದರ್ಶನ ನಿಲ್ಲಿಸಿ ವೀಕ್ಷಕರನ್ನು ತೆರವುಗೊಳಿಸಲಾಯಿತು. ಸುರಕ್ಷತಾ ದೃಷ್ಟಿಯಿಂದ ನಾಲ್ಕುತಾಸುವರೆಗೆ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲಾಯಿತು.

Advertisement

ಮೂರು ತಾಸು ಕಾರ್ಯಾಚರಣೆ
ಪಾಂಡೇಶ್ವರ, ಕದ್ರಿ ಅಗ್ನಿಶಾಮಕ, ತುರ್ತು ಸೇವೆಗಳ ಠಾಣೆಯ ಎರಡು ವಾಹನಗಳು, ತುರ್ತು ಸೇವೆ ಮೋಟಾರ್‌ಬೈಕ್‌ಗಳು ತುರ್ತು ಕಾರ್ಯಾಚರಣೆ ನಡೆಸಿತು. 11.40ಕ್ಕೆ ಆರಂಭ ಗೊಂಡ ಕಾರ್ಯಾಚರಣೆ ಮೂರು ತಾಸು ಗಳವರೆಗೆ ಮುಂದುವರಿಯಿತು. ಇದೇ ವೇಳೆ ಕಟ್ಟಡದ ಎಲ್ಲ ವಿದ್ಯುತ್‌ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಯಿತು. ಮಂಗಳೂರು ಅಗ್ನಿ ಶಾಮಕ ದಳದ ಮುಖ್ಯ ಅಧಿಕಾರಿ ಟಿ.ಎನ್‌. ಶಿವಶಂಕರ್‌ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು. ಮೇಯರ್‌ ಭಾಸ್ಕರ್‌ ಕೆ., ಉಪ ಮೇಯರ್‌ ಮಹಮ್ಮದ್‌, ಮುಖ್ಯ ಸಚೇತಕ ಶಶಿಧರ ಹೆಗ್ಡೆ , ಸ್ಥಾಯೀ ಸಮಿತಿ ಅಧ್ಯಕ್ಷ ನವೀನ್‌ ಡಿ’ಸೋಜಾ ಅವರು ಸ್ಥಳಕೆ ಭೇಟಿ ಪರಿಶೀಲನೆ ನಡೆಸಿದರು.

ಒಮ್ಮೆಲೆ ದಟ್ಟ ಹೊಗೆ
ಸುಮಾರು ಹನ್ನೊಂದುವರೆಗೆ ಗಂಟೆಯಾಗಿರಬಹುದು. ನಾವು ಸಿಟಿಸೆಂಟರ್‌ ಮಾಲ್‌ನ ನಾಲ್ಕನೇ ಮಹಡಿಯಲ್ಲಿ ಸ್ವಚ್ಛತಾ ಕೆಲಸದಲ್ಲಿ ನಿರತರಾಗಿದ್ದೆವು. ಅಲ್ಲೆ ಇದ್ದ ಫುಡ್‌ಕೋರ್ಟ್‌ನೊಳಗೆ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಇಡಿ ಮಹಡಿಯನ್ನು ಆವರಿಸತೊಡಗಿತು. ನಾವು ಗಾಬರಿಗೊಂಡು ಅಲ್ಲಿಂದ ಕೆಳಗೆ ಓಡಿಬಂದೇವು. ಅದೇ ವೇಳೆ ಎಲ್ಲರೂ ಮಾಲ್‌ ನಿಂದ ಹೊರಗೆ ಹೋಗುವಂತೆ ಹೇಳುತ್ತಿರುವದು ಕೇಳಿಸಿತು ಎಂದು ಘಟನೆಯ ವೇಳೆ ಅಲ್ಲಿದ್ದ ಸ್ವಚ್ಛತಾ ಸಿಬಂದಿಯೋರ್ವರು ತಿಳಿಸಿದ್ದಾರೆ.

ದಟ್ಟ ಹೊಗೆಗೆ ಇಬ್ಬರು ಅಸ್ವಸ್ಥ
ಸಿಟಿಸೆಂಟರ್‌ನಲ್ಲಿ ನಾಲ್ಕನೇ, 3ನೇ ಅಂತಸ್ತಿನಲ್ಲಿ ದಟ್ಟ ಹೊಗೆ ತೀವ್ರವಾಗಿ ಆವರಿಸಿದ್ದು, ಉಸಿರಾಡಲು ತ್ರಾಸದಾಯಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ವೇಳೆ ದಟ್ಟ ಹೊಗೆಯಿಂದ ಮಳಿಗೆಯ ಇಬ್ಬರು ಸಿಬಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. 

ತಪ್ಪಿದ ಭಾರೀ ಅನಾಹುತ 
ಮಾಲ್‌ನಲ್ಲಿ ಸಾವಿರಾರು ಸಿಬಂದಿ ದುಡಿಯುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ದಿನಂಪ್ರತಿ ವಿವಿಧ ಮಳಿಗೆಗಳಿಗೆ ಭೇಟಿ ನೀಡುತ್ತಾರೆ. ಇದಲ್ಲದೆ ಫುಡ್‌ ಕೋರ್ಟ್‌ ನ ಪಕ್ಕದಲ್ಲೇ 5 ಪರದೆಗಳಲ್ಲಿ ಚಲನಚಿತ್ರಗಳು ಪ್ರದರ್ಶಿಸಲ್ಪಡುತ್ತವೆ ಒಂದೊಮ್ಮೆ ಬೆಂಕಿ ನಿಯಂತ್ರಣಕ್ಕೆ ಬಾರದಿದ್ದರೆ ಭಾರಿ ಅನಾಹುತ ನಡೆಯುವ ಸಾಧ್ಯತೆಗಳಿದ್ದವು.

ಫುಡ್‌ಕೋರ್ಟ್‌ನ ಚಿಮಿಣಿಯಲ್ಲಿ ಬೆಂಕಿ
ಹೊಟೇಲ್‌ಗ‌ಳಲ್ಲಿರುವ ಚಿಮಿಣಿಗಳಲ್ಲಿ ತೈಲದ ಅಂಶ ಶೇಖರಣೆಯಾಗಿ ಅದಕ್ಕೆ ಬೆಂಕಿಯ ಕಿಡಿಗಳು ಹತ್ತಿಕೊಂಡಾಗ ಅದು ಉರಿಯಲಾರಂಭಿಸುತ್ತದೆ. ಆಗ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಕಾಣಿಸಿಕೊಳ್ಳುತ್ತದೆ. ಫುಡ್‌ಕೋರ್ಟ್ ನ ಇದೇ ರೀತಿ ಚಿಮಿಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ದಟ್ಟ ಹೊಗೆ ಅವರಿಸಿದೆ. ಚಿಮಿಣಿಗಳನ್ನು ಕನಿಷ್ಠ ಒಂದು ವರ್ಷಕೊಮ್ಮೆಯಾದರೂ
ಸ್ವಚ್ಛಗೊಳಿಸುವುದು ಅವಶ್ಯ. ಅಗ್ನಿಶಾಮಕ ದಳದ ಸಿಬಂದಿ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತಂದಿದ್ದಾರೆ. ಸಿಟಿಸೆಂಟರ್‌ನ ಭದ್ರತಾ ಸಿಬಂದಿ, ನಿರ್ವಹಣೆ ಸಿಬಂದಿ ಸಹಕಾರ ನೀಡಿದ್ದಾರೆ ಎಂದು ಜಿಲ್ಲಾ ಅಗ್ನಿ ಶಾಮಕ ದಳದ ಮುಖ್ಯ ಅಧಿಕಾರಿ ಟಿ.ಎನ್‌. ಶಿವಶಂಕರ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next