ವಿಜಯಪುರ: ನಗರದ ಪ್ರಮುಖ ವಾಣಿಜ್ಯ ಕೇಂದ್ರ ಲಾಲ್ ಬಹಾದ್ದೂರ ಶಾಸ್ತ್ರಿ ಮಾರುಕಟ್ಟೆ ಸಂಕೀರ್ಣದಲ್ಲಿ ಸೋಮವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಹಲವು ಅಂಗಡಿಗಳು ಅಗ್ನಿ ಜ್ವಾಲೆಗೆ ಸಿಲುಕಿವೆ.
ಸೋಮವಾರ ರಾತ್ರಿ 10 ಗಂಟೆ ಸುಮಾರಿನಲ್ಲಿ ಶಾಸ್ತ್ರೀ ಮಾರುಕಟ್ಟೆ ಅಂಗಡಿಯೊಂದರಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ ನೋಡ ನೋಡುತ್ತಿದ್ದಂತೆ ಅಗ್ನಿ ಕೆನ್ನಾಲಿ ಹಲವು ಅಂಗಡಿಗಳಿಗೆ ವ್ಯಾಪಿಸಿ ಭಾರಿ ಹಾನಿ ಮಾಡಿದೆ.
ಕಿಶೋರ ನಾಯ್ಕ ಎಂಬುವರ ಬಟ್ಟೆ ಅಂಗಡಿಯಲ್ಲಿ ವಿದ್ಯುತ್ ಶಾಟ್ ಸರ್ಕ್ಯೂಟ್ ನಿಂದ ಕಾಣಿಸಿಕೊಂಡ ಬೆಂಕಿ ಶಾಸ್ತ್ರಿಮಾರುಕಟ್ಟೆಯನ್ನೆಲ್ಲ ಆವರಿಸಿದೆ.ಪರಿಣಾಮ ಶಾಸ್ತ್ರೀ ಮಾರುಕಟ್ಟೆ ಪ್ರಾಂಗಣದಿಂದ ದಟ್ಟ ಹೊಗೆ ಆವರಿಸಿದ್ದು, ಅಂಗಡಿ ಬಾಗಿಲು ಹಾಕುವ ಹಂತದಲ್ಲಿ ವ್ಯಾಪಾರಿಗಳು, ಗ್ರಾಹಕರು ಜೀವ ಭಯದಿಂದ ರಸ್ತೆಗೆ ಓಡಿ ಬಂದಿದ್ದಾರೆ.
ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ ಬೆಂಕಿ ನಂದಿಸುವ ಹೊತ್ತಿಗೆ ಅಕ್ಕಪಕ್ಕದ ಅಂಗಡಿಗಳಿಗೆ ಬೆಂಕಿ ಆವರಿಸಿತ್ತು. ಹಲವು ಮಳಿಗೆಗಳಿಗೆ ಬೆಂಕಿ ವ್ಯಾಪಿಸಿ ಲಕ್ಷಾಂತರ ರೂ.ಮೌಲ್ಯದ ಸಾಮಗ್ರಿ ಸುಟ್ಟು ಕರಕಲಾಗಿವೆ.
ಅಗ್ನಿ ಶಾಮಕದ ಎರಡು ವಾಹನ ಹಾಗೂ 15 ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ರಂಗನಾಥ, ಠಾಣಾಧಿಕಾರಿ ಪ್ರಕಾಶ ಪವಾರ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.