Advertisement

ಅನಾವಶ್ಯಕ ಹೊರ ಬಂದರೇ ಎಫ್‌ಐಆರ್‌ ದಾಖಲು

03:22 PM Apr 20, 2020 | Suhan S |

ಬಾಗಲಕೋಟೆ: ಹಳೆ ಬಾಗಲಕೋಟೆಯ ವಾರ್ಡ್‌ ನಂ.5ರಿಂದ 14 ವರೆಗೆ ಈಗಾಗಲೇ ನಿರ್ಬಂಧಿತ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಅನಾವಶ್ಯಕವಾಗಿ ಹೊರಗೆ ಬಂದಲ್ಲಿ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಕೋವಿಡ್‌ ವಿಶೇಷ ಅಪರ ಜಿಲ್ಲಾಧಿಕಾರಿ ಬಸವರಾಜ ಸೋಮಣ್ಣವರ ಎಚ್ಚರಿಕೆ ನೀಡಿದ್ದಾರೆ.

Advertisement

ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ನಿರ್ಬಂಧಿತ ಪ್ರದೇಶದ ವ್ಯಾಪ್ತಿಯಲ್ಲಿ ಅನಾವಶ್ಯಕವಾಗಿ ಹೊರಗಡೆ ತಿರುಗಾಡುತ್ತಿದ್ದು, ಇನ್ನು ಮುಂದೆ ಯಾರು ಸಹ ಸಂಚರಿಸುವಂತಿಲ್ಲ. ಕೋವಿಡ್ 19 ಸೋಂಕು ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದ್ದಾರೆ.

ಮನೆಯಿಂದ ಹೊರಗೆ ಬರದೇ ಸಾಮಾಜಿಕ ಅಂತರ ಕಾಯ್ದುಕೊಂಡಾಗ ಮಾತ್ರ ಸೋಂಕು ಹರಡುವದನ್ನುತಪ್ಪಿಸಲು ಅಸಾಧ್ಯ. ಆದ್ದರಿಂದ ನಿರ್ಬಂಧಿತ ಪ್ರದೇಶದಲ್ಲಿ ಯಾರು ಹೊರಗಡೆ ಸಂಚರಿಸದಂತೆ ಕಟ್ಟು ನಿಟ್ಟಿನ ಕ್ರಮಕ್ಕೆ ಕೈಗೊಳ್ಳಲಾಗಿದೆ. ಇದಕ್ಕೆ ಜನರು ಸಹಕಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಔಷಧಿ, ದಿನಸಿ ಹಾಗೂ ತರಕಾರಿಗಳಿಗಾಗಿ ಈಗಾಗಲೇ ಮೊಬೈಲ್‌ ನಂಬರ್‌ಗಳನ್ನು ಎಲ್ಲೆಡೆ ಹಾಗೂ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದೆ. ವಾಟ್ಸ್‌ಆ್ಯಪ್‌ ಗ್ರೂಪ್‌ ಮತ್ತು ಆನ್‌ಲೈನ್‌ ಮೂಲಕ ಸರಬರಾಜಿಗೆ ಕ್ರಮಕೈಗೊಳ್ಳಲಾಗಿದೆ. ಅಲ್ಲದೇ ತರಕಾರಿ ಮತ್ತು ಪಡಿತರ ಕಿಟ್‌ ಸಿದ್ಧಪಡಿಸಿ ಪೂರೈಸಲಾಗುತ್ತಿದೆ. ಅಲ್ಲದೇ ಹಣಕ್ಕಾಗಿ ಬ್ಯಾಂಕ್‌ಗಳಿಗೂ ಅಲೆದಾಡುವಂತಿಲ್ಲ.ಪೋಸ್ಟ್‌ ಆಫೀಸ್‌ ಮತ್ತು ಪೋಸ್ಟ್‌ಮನ್‌ಗೆ ಕರೆ ಮಾಡಿದರೆ ಸಾಕು ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ ಆಗಿದ್ದರೂ ಹಣವನ್ನು ಮನೆಯಲ್ಲಿಯೇ ಇದ್ದು ಪಡೆದುಕೊಳ್ಳಬಹುದಾಗಿದೆ ಎಂದರು.

ಔಷಧ ವಿತರಣೆಗೆ ಬಸವೇಶ್ವರ ವೃತ್ತದಲ್ಲಿ ಆರೋಗ್ಯ ಸಿಬ್ಬಂದಿಗಳ ಟೆಂಟ್‌ ಹಾಕಲಾಗಿದೆ. ತಾಲೂಕು ಆರೋಗ್ಯ ಅಧಿಕಾರಿ ಡಾ|ಬಿ.ಜಿ. ಹುಬ್ಬಳ್ಳಿ (9449843186, 6361367737) ಅವರಿಗೆ ತಿಳಿಸಿದಲ್ಲಿ ಆರೋಗ್ಯ ಸಿಬ್ಬಂದಿಗಳು ಮನೆ ಬಾಗಿಲಿಗೆ ಬಂದು ಔಷಧಿ ನೀಡುವರು. ದಿನನಿತ್ಯದ ಅಗತ್ಯ ವಸ್ತುಗಳಿಗಾಗಿ ಆಹಾರಧಾನ್ಯ ಪೂರೈಕೆದಾರರಾದ ಕಾಸಟ್‌(9945502371) ಮುಳಗುಂದ (9845101024) ಅವರಿಗೆ ಕರೆ ಮಾಡಿದಲ್ಲಿ ಬೇಕಾದ ವಸ್ತುಗಳನ್ನು ಮನೆಯ ಬಾಗಿಲಿಗೆ ತಂದು ತಲುಪಿಸಲಿದ್ದಾರೆ ಎಂದು ತಿಳಿಸಿದರು.

Advertisement

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಉಪಯೋಗವಾಗದೇ ಇರುವ ಹಲವಾರು ಕ್ವಿಂಟಲ್‌ ಅಗತ್ಯ ದಿನಸಿಗಳನ್ನೂ ಸಹ ಕಿಟ್‌ ಮಾಡಿ ವಿತರಣೆಗೆ ಕ್ರಮಕೈಗೊಳ್ಳಬೇಕು. ಬೇರೆ ಜಿಲ್ಲೆಯವರು ಬಾಗಲಕೋಟೆ ವೈದ್ಯಕೀಯ ಚಿಕಿತ್ಸೆಗೆ ಬರಕೂಡದು. ಆಯಾ ಜಿಲ್ಲೆಗಳಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ, ತಹಶೀಲ್ದಾರ್‌ ಗುರುಸಿದ್ದಯ್ಯ ಹಿರೇಮಠ, ನಗರಸಭೆ ಆಯುಕ್ತ ಮುನಿಶಾಮಪ್ಪ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next