ಬೆಳಗಾವಿ: ಪ್ರಚೋದನಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ನಾಲ್ಕು ಪ್ರಕರಣಗಳನ್ನು ದಾಖಲಿಸಿದ್ದಾರೆ.
ಫೇಸ್ ಬುಕ್, ವಾಟ್ಸ್ ಆಪ್ ಅಡ್ಮಿನ್‍ಗಳನ್ನೇ ಹೊಣೆಗಾರರನ್ನಾಗಿ ಮಾಡಿ ನಾಲ್ಕು ಠಾಣೆ ವ್ಯಾಪ್ತಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.
ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಗಡಿ ವಿವಾದ ನೆಪ ಮಾಡಿಕೊಂಡು ವಾತಾವರಣವನ್ನು ಕೆಡಿಸುವ ನಿರಂತರ ಪ್ರಯತ್ನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಅಭಿಪ್ರಾಯದ ಪೋಸ್ಟಗಳ ಮೇಲೆ ಬೆಳಗಾವಿ ಪೊಲೀಸರು ನಿಗಾ ವಹಿಸಿದ್ದು, ಮಾರ್ಕೇಟ್ ಠಾಣೆ, ಟಿಳಕವಾಡಿ, ಗ್ರಾಮೀಣ ಹಾಗೂ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫೇಸ್ ಬುಕ್ ಹಾಗೂ ವಾಟ್ಸ್ ಅಪ್ ಅಡ್ಮಿನ್‍ಗಳನ್ನೇ ಹೊಣೆಗಾರರನ್ನಾಗಿ ಮಾಡಿ ನಾಲ್ಕು ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಎಷ್ಟೋ ಜನ ಮಹಾನ್ ನಾಯಕರಿಲ್ವ, ಡಿಕೆಶಿ ಯಾಕೆ ಅವರ ಹೆಸರೇ ಹೇಳುತ್ತಾರೆ: ಎಚ್ ಡಿಕೆ
ಬೆಳಗಾವಿಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕೆಡಿಸಲು ಹುನ್ನಾರ ನಡೆಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದ್ದು, ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಲಾಗಿದೆ.
ಯಾರೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು. ನಾವು ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇರಿಸಿದ್ದೇವೆ. ಪ್ರಚೋದನಾತ್ಮಕ ಪೋಸ್ಟ್ ಗಳು ಕಂಡು ಬಂದರೆ ಅದಕ್ಕೆ ಆ್ಯಡ್ಮಿನ್‍ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವದಲ್ಲದೆ ಎಫ್‍ಐಆರ್ ದಾಖಲಿಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ: ಗಟ್ಟಿ ಚರ್ಮದ ಸರ್ಕಾರ, ಸಾಮಾನ್ಯ ಜ್ಞಾನ ಇರೋರು ಹೀಗೆ ಮಾಡಲ್ಲ: ಡಿಕೆಶಿ ವಾಗ್ದಾಳಿ