ರಾಯ್ಪುರ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸುಳ್ಳು ಹೇಳಿಕೆ ನೀಡಿದ್ದಾರೆ ಎಂಬ ಆರೋಪದಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಛತ್ತೀಸ್‌ಗಡದಲ್ಲಿ ಎಫ್ಐಆರ್ ದಾಖಲಾಗಿದೆ.
ರಾಹುಲ್ ಅವರು ಕೊಕೇನ್ ಸೇವಿಸುತ್ತಾರೆ ಎಂದು ಸ್ವಾಮಿ ನೀಡಿರುವ ಹೇಳಿಕೆಯು ಸುಳ್ಳಿನಿಂದ ಕೂಡಿದೆ ಎಂದು ಆರೋಪಿಸಿ ರಾಯ್ಪುರದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪವನ್ ಅಗರ್ವಾಲ್ ಶನಿವಾರ ರಾತ್ರಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ತಮ್ಮ ವಿರುದ್ಧದ ಪ್ರಕರಣದ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸುಬ್ರಮಣಿಯನ್ ಸ್ವಾಮಿ, ‘ನನ್ನ ವಿರುದ್ಧ ಎಫ್ಐಆರ್ ಹಾಕಿರುವುದೇ ಮೂರ್ಖತನದ ಕೆಲಸ. ಏಕೆಂದರೆ, ಸತ್ಯವನ್ನು ದೃಢೀಕರಿಸಲು ಪೊಲೀಸರೇನು ಡ್ಯೂಪ್ ಟೆಸ್ಟ್ ಮಾಡಿದ್ದಾರೆಯೇ’ ಎಂದು ಪ್ರಶ್ನಿಸಿದ್ದಾರೆ. ಈ ನಡುವೆ, ಭಾನುವಾರ ದೆಹಲಿ ಕಾಂಗ್ರೆಸ್ ಕಾರ್ಯಕರ್ತರು ಸುಬ್ರಮಣಿಯನ್ ಸ್ವಾಮಿ ಹೇಳಿಕೆ ಖಂಡಿಸಿ ರಾಷ್ಟ್ರರಾಜಧಾನಿಯಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದು, ಪ್ರತಿಕೃತಿಯನ್ನೂ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.