ಲಕ್ನೋ: ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕಾರು ಅಪಘಾತಕ್ಕೀಡಾದ ಘಟನೆ ಸೋಮವಾರ ಭಾರೀ ಸುದ್ದಿ ಮಾಡಿದೆ. ಪ್ರತಿಪಕ್ಷಗಳ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಸೀತಾರಾಂ ಯೆಚೂರಿ, ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಈ ಅಪಘಾತದ ಹಿಂದೆ ಕಾಣದ ಕೈಗಳು ಕೆಲಸ ಮಾಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಅಪಘಾತ ಸಂಬಂಧ ದೂರು ದಾಖಲಾದ ಹಿನ್ನೆಲೆಯಲ್ಲಿ ಅತ್ಯಾಚಾರ ಆರೋಪಿ, ಉತ್ತರಪ್ರದೇಶದ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್ ಸೇರಿದಂತೆ 10 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಘಟನೆ ಕುರಿತು ಸಿಬಿಐ ತನಿಖೆಗೂ ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಡಿಜಿಪಿ ಹೇಳಿದ್ದಾರೆ.
ಭಾನುವಾರ ಸಂತ್ರಸ್ತೆ, ಆಕೆಯ ಪರ ವಕೀಲ ಮತ್ತು ಇಬ್ಬರು ಸಂಬಂಧಿಗಳು ಕಾರಿನಲ್ಲಿ ಸಂಚರಿಸುತ್ತಿದ್ದಾಗ ರಾಯ್‌ಬರೇಲಿಯಲ್ಲಿ ಟ್ರಕ್‌ವೊಂದು ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಸಂತ್ರಸ್ತೆ ಮತ್ತು ವಕೀಲ ಗಂಭೀರ ಗಾಯಗೊಂಡಿದ್ದರೆ, ಮತ್ತಿಬ್ಬರು ಸ್ಥಳದಲ್ಲೇ ಅಸುನೀಗಿದ್ದರು. ಸೋಮವಾರ ಮಾತನಾಡಿರುವ ಸಂತ್ರಸ್ತೆಯ ತಾಯಿ, ‘ಇದು ಅಪಘಾತವಲ್ಲ, ನಮ್ಮ ಸಂಪೂರ್ಣ ಕುಟುಂಬವನ್ನು ನಾಶ ಮಾಡಲು ಮಾಡಿರುವ ಸಂಚು’ ಎಂದಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ಬೇಟಿ ಬಚಾವೋ-ಬೇಟಿ ಪಢಾವೋ ಆಂದೋಲನವನ್ನು ಪ್ರಸ್ತಾಪಿಸಿ ಟೀಕಿಸಿದ್ದು ‘ಬಿಜೆಪಿ ಶಾಸಕರೇನಾದರೂ ಅತ್ಯಾಚಾರ ಮಾಡಿದರೆ, ಅದನ್ನು ಪ್ರಶ್ನಿಸಲು ಹೋಗದಿರಿ’ ಎಂದು ಟ್ವೀಟ್ ಮಾಡಿದ್ದಾರೆ.