ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‌ಡೌನ್, ನಿಷೇಧಾಜ್ಞೆ ಜಾರಿಯಲ್ಲಿದ್ದರೂ ತಮ್ಮ ಒಡೆತನದ ರೆಸಾರ್ಟ್ ಮುಚ್ಚದೇ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟ ಆರೋಪದ ಅನ್ವಯ ನಿರೂಪಕ ನಟ ಅಕುಲ್ ಬಾಲಾಜಿ ವಿರುದ್ಧ ದೊಡ್ಡ ಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಲಗುಮೇನಹಳ್ಳಿ ಗ್ರಾಮದಲ್ಲಿ ನಟ ಅಕುಲ್ ಬಾಲಾಜಿ ಮೂಲ ಮಾಲೀಕತ್ವದ “ಸನ್ ಶೈನ್ ಬೈ ಜೆಡೆ’ ರೆಸಾರ್ಟ್ ಹೊಂದಿದ್ದಾರೆ. ಅದೇ ರೆಸಾರ್ಟ್‌ನಲ್ಲಿ ಬೆಂಗಳೂರಿನ ಥಣಿಸಂದ್ರ ನಿವಾಸಿಗಳು ಎನ್ನಲಾದ 20 ಅಧಿಕ ಮಂದಿಗೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಿದ್ದು ಲಾಕ್‌ಡೌನ್, ನಿಷೇಧಾಜ್ಞೆ ನಿಯಮ ಉಲ್ಲಂ ಸಿದ್ದಾರೆಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಪಂ ಸದಸ್ಯ ಜಿ.ಮಂಜುನಾಥ್ ನೀಡಿರುವ ದೂರಿನ ಅನ್ವಯ ನಟ ಅಕುಲ್ ಬಾಲಾಜಿ, ಶ್ರೀನಿವಾಸ ಸುಬ್ರಮಣಿಯಮ್ ಎಂಬುವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಡೆ ಕಾಯಿದೆ ಅನ್ವಯ ಕೇಸು ದಾಖಲಾಗಿದೆ.
ಗ್ರಾಮಸ್ಥರಲ್ಲಿ ಆತಂಕ: ಲಗುಮೇನಹಳ್ಳಿ ಗ್ರಾಮ ಹೊರವಲಯದ ರೆಸಾರ್ಟ್‌ಗೆ ಏ.18 ರ ರಾತ್ರಿ ಏಕಾಏಕಿ 20ಕ್ಕೂ ಅಧಿಕ ಮಂದಿ ಆಗಮಿಸಿದ್ದಾರೆ. ಜತೆಗೆ ಕಾರ್ಯಕ್ರಮವೊಂದನ್ನು ನಡೆಸಲು ಸಿದ್ಧತೆ ನಡೆಸಿದ್ದಾರೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಭೀತಿ ಸೃಷ್ಟಿಸಿದೆ. ಏ.19 ರ ಬೆಳಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಗಜೇಂದ್ರ ನೇತೃತ್ವದ ತಂಡ, ಕಾರ್ಯಕ್ರಮ ರದ್ದುಗೊಳಿಸಿ ಅಷ್ಟೂ ಮಂದಿಯನ್ನು ವಾಪಸ್ ಕಳುಹಿಸಿಕೊಟ್ಟಿದ್ದಾರೆ. ಮಾಲೀಕ ಅಕುಲ್ ಬಾಲಾಜಿ ಹಾಗೂ ಶ್ರೀನಿವಾಸ ಸುಬ್ರಮಣಿಯಮ್ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಇರಲಿಲ್ಲ: ತಮ್ಮ ರೆಸಾರ್ಟ್‌ನಲ್ಲಿ ಕಾರ್ಯಕ್ರಮ ನಿಗದಿ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ. ರೆಸಾರ್ಟ್ ಅನ್ನು ಈಗ ಬೇರೊಬ್ಬರು ನಡೆಸುತ್ತಿದ್ದಾರೆ ಎಂದು ನಟ ಅಕುಲ್ ಬಾಲಾಜಿ ಪ್ರತಿಕ್ರಿಯಿಸಿದ್ದಾರೆ.