Advertisement

ಡಿಸೆಂಬರ್‌ನಲ್ಲಿ ಫಿನ್‌ಟೆಕ್‌ ಹಬ್‌ ಮಂಗಳೂರಿನಲ್ಲಿ ಬಿಡುಗಡೆ: ಪ್ರಶಾಂತ್‌ ಪ್ರಕಾಶ್‌

10:01 PM Nov 17, 2022 | Team Udayavani |

ಬೆಂಗಳೂರು: ಬಹುನಿರೀಕ್ಷಿತ ಫಿನ್‌ಟೆಕ್‌ ಕಾರ್ಯಪಡೆ ವರದಿ ಸಿದ್ಧಗೊಂಡಿದ್ದು, ಡಿಸೆಂಬರ್‌ನಲ್ಲಿ ಫಿನ್‌ಟೆಕ್‌ ಹಬ್‌ ಮಂಗಳೂರಿನಲ್ಲಿ  ಬಿಡುಗಡೆ ಆಗಲಿದೆ ಎಂದು ರಾಜ್ಯದ ಸ್ಟಾರ್ಟ್‌ಅಪ್‌ ವಿಜನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌ ತಿಳಿಸಿದರು.

Advertisement

ಅರಮನೆ ಆವರಣದಲ್ಲಿ ಗುರುವಾರ ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ  “ಉದಯವಾಣಿ’ ಜತೆಗೆ ಮಾತನಾಡಿದ ಅವರು,  ಹಣಕಾಸು ತಂತ್ರಜ್ಞಾನ(ಫಿನ್‌ಟೆಕ್‌)ಕ್ಕೆ ಸಂಬಂಧಿಸಿ ಹರ್ಷಿಲ್‌ ಮಾಥುರ್‌ ನೇತೃತ್ವದಲ್ಲಿ ರಚಿಸಲಾದ ಕಾರ್ಯಪಡೆಯ ವರದಿ ಸಿದ್ಧಗೊಂಡಿದ್ದು, ಡಿಸೆಂಬರ್‌ನಲ್ಲಿ ಇದು ಬಿಡುಗಡೆ ಆಗಲಿದೆ. ಈ ವರದಿಯು ರಾಜ್ಯದಲ್ಲಿ ಹಣಕಾಸು ತಂತ್ರಜ್ಞಾನದ ಬೆಳವಣಿಗೆಗೆ ಹೊಸ ನೀಲನಕ್ಷೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ಈಗಾಗಲೇ  “ಫಿನ್‌ಟೆಕ್‌ ರಾಜಧಾನಿ’ಯಾಗಿ ಬೆಳೆಯುತ್ತಿದೆ. ಇದಕ್ಕೆ ಇನ್ನಷ್ಟು ಉತ್ತೇಜನ ನೀಡುವ ಅಗತ್ಯ ಇದ್ದು, ಈ ನಿಟ್ಟಿನಲ್ಲಿ ಬೆಂಗಳೂರು ಹೊರತಾಗಿ ಉಳಿದ ನಗರ ಮತ್ತು ಮಹಾನಗರಗಳಿಗೆ ಫಿನ್‌ಟೆಕ್‌ ಅನ್ನು ಪರಿಣಾಕಾರಿಯಾಗಿ ತೆಗೆದುಕೊಂಡು ಹೋಗಬೇಕಿದೆ. ಈ ದಿಸೆಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ವರದಿ ಬೆಳಕು ಚೆಲ್ಲಲಿದೆ.

ಬಹುತೇಕ ವಲಯಗಳಲ್ಲಿ ಫಿನ್‌ಟೆಕ್‌ ನೀತಿಗಳು ಕೇಂದ್ರದ ವ್ಯಾಪ್ತಿಯಲ್ಲಿ ಬರುತ್ತವೆ. ಇದರ ಹೊರತಾಗಿಯೂ ಹಲವಾರು ಕ್ಷೇತ್ರಗಳಲ್ಲಿ ರಾಜ್ಯದ ನೀತಿಗಳನ್ನು ಅಳವಡಿಸಲು ಅವಕಾಶ ಇದೆ. ಅದರ ಸಾಧ್ಯಾಸಾಧ್ಯತೆಗಳ ಜತೆಗೆ ಅದಕ್ಕೆ ಒತ್ತು ನೀಡಬೇಕಿದೆ. ಹಾಗೂ ಈಗಾಗಲೇ ಸ್ಟಾರ್ಟ್‌ಅಪ್‌ಗ್ಳ ತೊಟ್ಟಿಲು ಆಗಿರುವ ಕರ್ನಾಟಕದಲ್ಲಿ ಮತ್ತಷ್ಟು ಉತ್ತೇಜನ ನೀಡಬೇಕಿದೆ. ಈ ಮೂರು ಅಂಶಗಳ ಮೇಲೆ ವರದಿ  ಕೇಂದ್ರೀಕೃತ ಆಗಿರಲಿದೆ ಎಂದು ಪ್ರಶಾಂತ್‌ ಪ್ರಕಾಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next