Advertisement

ಸಿಡಿದ RCB ಯ ಮಾಜಿ ಆಟಗಾರ: 16 ಸಿಕ್ಸರ್‌,137 ರನ್‌.. ಒಂದು T20 ಪಂದ್ಯದಲ್ಲಿ ಹಲವು ದಾಖಲೆ

10:16 AM Jan 17, 2024 | Team Udayavani |

ಡ್ಯುನೆಡಿನ್: ನ್ಯೂಜಿಲೆಂಡ್‌ – ಪಾಕಿಸ್ತಾನ ನಡುವಿನ ಮೂರನೇ T20I ಪಂದ್ಯದಲ್ಲಿ ಕಿವೀಸ್‌ ಪಡೆ 45 ರನ್‌ ಗಳಿಂದ ಗೆದ್ದು ಸರಣಿ ತನ್ನದಾಗಿಸಿಕೊಂಡಿದ್ದು, ಒಂದು ಪಂದ್ಯದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿವೆ.

Advertisement

ಟಿ-20 ಸರಣಿ ಆರಂಭದಿಂದಲೂ ನ್ಯೂಜಿಲೆಂಡ್‌ ಸಂಪೂರ್ಣವಾಗಿ ಪಂದ್ಯದಲ್ಲಿ ನಿಯಂತ್ರಣ ಸಾಧಿಸಿದೆ. ಬೌಲಿಂಗ್‌ ಬ್ಯಾಟಿಂಗ್‌ ಎರಡರಲ್ಲೂ ಪ್ರವಾಸಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದಿದೆ. ಬುಧವಾರ (ಜ.17 ರಂದು) ಡ್ಯುನೆಡಿನ್ ನ ಯೂನಿವರ್ಸಿಟಿ ಓವಲ್ ಮೈದಾನದಲ್ಲಿ ನಡೆದ 3ನೇ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 7 ವಿಕೆಟ್‌ ಕಳೆದಕೊಂಡು 224 ರನ್‌ ಪೇರಿಸಿತು.

ಆರಂಭದಲ್ಲಿ ಕಾನ್ವೆ ಅವರ ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ ಸ್ಯಾಂಟ್ನರ್‌ ಪಡೆ ಆ ಬಳಿಕ ಫಿನ್‌ ಅಲೆನ್‌ ಅವರ ಅಬ್ಬರದ ಬ್ಯಾಟಿಂಗ್‌ ನಿಂದ ದೊಡ್ಡ ಮೊತ್ತವನ್ನು ಪೇರಿಸಿತು. 5 ಬೌಂಡರಿ, ಬರೋಬ್ಬರಿ 16 ಸಿಕ್ಸರ್‌ ದಾಖಲಿಸಿದ 137 ರನ್‌ ಗಳಿಸಿದ ಅಲೆನ್‌ ಪಾಕ್‌ ಬೌಲರ್‌ ಗಳನ್ನು ಚೆಂಡಾಡಿದರು.

ಅಲೆನ್‌ – ಸೀಫರ್ಟ್ ಜೊತೆಯಾಗಿ 125 ರನ್‌ ಪೇರಿಸಿದರು. ಅಂತಿಮವಾಗಿ ಪಾಕ್‌ 225 ರ ಗುರಿಯನ್ನು ನೀಡಿತು.

ಬೃಹತ್‌ ಗುರಿ ಬೆನ್ನಟ್ಟಿದ ಪಾಕ್‌ ಸೈಮ್ ಅಯೂಬ್‌ (10 ರನ್), ಮೊಹಮ್ಮದ್ ರಿಜ್ವಾನ್ (24 ರನ್)‌  ಅವರ ವಿಕೆಟ್ ನ್ನು ಬೇಗನೇ ಕಳೆದುಕೊಂಡಿತು.‌ 58 ರನ್‌ ಗಳಿಸಿ ತಂಡಕ್ಕೆ ಆಸರೆಯಾಗಿದ್ದ ಬಾಬರ್‌ ಅಜಂ ಸೋಧಿ ಎಸೆತಕ್ಕೆ ಗ್ಲೆನ್ ಫಿಲಿಪ್ಸ್ ಕೈಗೆ ಕ್ಯಾಚ್ ಕೊಟ್ಟು‌ ತೆರಳಿದರು. ಆ ಬಳಿಕ ಬಂದ ಫಖರ್ ಜಮಾನ್, ಅಜಂ ಖಾನ್‌‌ , ಇಫ್ತಿಕರ್ ಅಹಮದ್ ನಂತಹ ಆಟಗಾರರು ಹೆಚ್ಚು ಹೊತ್ತು ಕ್ರಿಸ್‌ ನಲ್ಲಿ ನಿಲ್ಲದೆ ವಿಕೆಟ್‌ ಒಪ್ಪಿಸಿದರು.

Advertisement

ಅಂತಿಮವಾಗಿ 7 ವಿಕೆಟ್‌ ಕಳೆದುಕೊಂಡ ಪಾಕ್‌ 179 ರನ್‌ ಗಳಿಸಿ ಸೋಲು ಒಪ್ಪಿಕೊಂಡಿತು.

ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಅಲೆನ್:‌  ಕಿವೀಸ್‌ ನ ಯುವ ಆಟಗಾರ ಫಿನ್‌ ಅಲೆನ್‌ ಕಳೆದ ಪಂದ್ಯದ ಸ್ಫೋಟಕ ಆಟಗಾರಿಕೆಯ ಲಯವನ್ನು ಈ ಪಂದ್ಯದಲ್ಲೂ ತೋರಿಸಿದರು. ಅವರ 137 ರನ್‌ ಹಲವು ದಾಖಲೆಗೆ ಕಾರಣವಾಗಿದೆ.

ಟಿ-20 ಪಂದ್ಯದಲ್ಲಿ 16 ಸಿಕ್ಸರ್‌ ದಾಖಲಿಸಿರುವ ಮೂಲಕ ಅಲೆನ್‌ ನಾಲ್ಕು ವರ್ಷಗಳ ಹಿಂದೆ ಡೆಹ್ರಾಡೂನ್‌ನಲ್ಲಿ ಐರ್ಲೆಂಡ್ ವಿರುದ್ಧ ಅಫ್ಘಾನಿಸ್ತಾನದ ಆರಂಭಿಕ ಆಟಗಾರ ಹಜರತುಲ್ಲಾ ಝಜೈ  ಮಾಡಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.

ಅಲೆನ್‌ ಅವರ 62 ಎಸೆತಗಳಲ್ಲಿ 137 ರನ್ ಟಿ-20 ಮಾದರಿಯಲ್ಲಿ ನ್ಯೂಜಿಲೆಂಡ್ ಬ್ಯಾಟರ್‌ನಿಂದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಈ ಹಿಂದೆ ಬ್ರೆಂಡನ್ ಮೆಕಲಮ್ ಅವರು 123 ರನ್ ಗಳಿಸಿದ್ದರು.

ನ್ಯೂಜಿಲೆಂಡ್‌ ಬ್ಯಾಟರ್‌ ಯೊಬ್ಬ‌ ಒಂದು ಪಂದ್ಯದಲ್ಲಿ 10 ಕ್ಕಿಂತ ಹೆಚ್ಚು ಸಿಕ್ಸರ್‌ ದಾಖಲಿಸಿದ್ದು ಇದೇ ಮೊದಲು. ಈ ಹಿಂದೆ 2017 ಹಾಗೂ 2018 ರಲ್ಲಿ ಕೋರಿ ಆಂಡರ್ಸನ್ ಮತ್ತು ಕಾಲಿನ್ ಮುನ್ರೊ ತಲಾ 10 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಟಿ-20 ಮಾದರಿಯಲ್ಲಿ ನ್ಯೂಜಿಲೆಂಡ್‌ ಆಟಗಾರನೊಬ್ಬ ಸಿಡಿಸಿದ ಮೂರನೇ ಅತ್ಯಂತ ವೇಗದ ಶತಕ ಇದಾಗಿದೆ. ಅಲೆನ್‌ ಕೇವಲ 48 ಎಸೆತಗಳಲ್ಲಿ ತನ್ನ ಶತಕವನ್ನು ದಾಖಲಿಸಿದರು. ಈ ಹಿಂದೆ ಗ್ಲೆನ್ ಫಿಲಿಪ್ಸ್ ಅವರು 46 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು.

ಈ ಪಂದ್ಯದಲ್ಲಿ ಅಲೆನ್ ಹ್ಯಾರಿಸ್ ರೌಫ್ ಓವರ್‌ ನಲ್ಲಿ ಮೂರು ಸಿಕ್ಸರ್‌ಗಳು, ಎರಡು ಬೌಂಡರಿಗಳು ಮತ್ತು ಒಂದು ಸಿಂಗಲ್‌ ನೊಂದಿಗೆ 27 ರನ್ ಗಳಿಸಿದರು.

5 ಪಂದ್ಯಗಳ ಟಿ-20 ಸರಣಿಯಲ್ಲಿ ನ್ಯೂಜಿಲೆಂಡ್‌ 3 ರಲ್ಲಿ ಗೆದ್ದು ಲೀಡ್‌ ನಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next