ಔರಾದ: ಮೊದಲನೇ ಅವಧಿಯಲ್ಲಿ ಬಾಕಿ ಉಳಿದ ಕನ್ನಡದ ಕೆಲಸ ಪೂರ್ಣಗೊಳಿಸಲು ಹಾಗೂ ಗಡಿ ಭಾಗದಲ್ಲಿ ಎಲ್ಲರೊಂದಿಗೆ ಬೆರೆತು ಕನ್ನಡ ಕಟ್ಟಲು ಅವಕಾಶ ಕಲ್ಪಿಸಿದ ಕನ್ನಡದ ಮನಸ್ಸುಗಳ ಅಪೇಕ್ಷೆಯಂತೆ ಮುಂದಿನ ದಿನಗಳಲ್ಲಿ ಕನ್ನಡದ ಕಾರ್ಯ ಮಾಡುವೆ ಎಂದು ಕಸಾಪ ನೂತನ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಳೆದ ಬಾರಿಯಂತೆ ಈ ಬಾರಿಯೂ ಕೂಡ ತಾವು ನನ್ನ ಕೈ ಹಿಡಿದಿದ್ದೀರಿ. ಗಡಿ ಕನ್ನಡಿಗರ ಸಮಸ್ಯೆ ಸೇರಿದಂತೆ ಗಡಿಯಲ್ಲಿನ ಶಾಲಾ- ಕಾಲೇಜುಗಳಲ್ಲಿ ಕನ್ನಡದ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುವುದಲ್ಲದೇ ಎಲ್ಲ ಭಾಷಿಕರನ್ನು ವಿಶ್ವಾಸಕ್ಕೆ ಪಡೆದು ರೂಪುರೇಷೆ ಸಿದ್ಧಪಡಿಸಲಾಗುವುದು. ಜಿಲ್ಲೆಯಲ್ಲಿ ಬಾಕಿ ಉಳಿದ ಕೆಲಸ ಮಾಡುವ ಜೊತೆಗೆ ಜಿಲ್ಲೆಯಲ್ಲಿ ವಿನೂತನ ಕಾರ್ಯಕ್ರಮದ ಮೂಲಕ ಕಸಾಪ ಜನ ಮೆಚ್ಚುಗೆ ಪಡೆಯಲಿದೆ ಎಂದರು.
ಮಲ್ಲಿಕಾರ್ಜುನ ರಾಗಾ ಮಾತನಾಡಿ, ಸತ್ಯ- ಅಸತ್ಯದ ನಡುವಿನ ಸ್ಪರ್ಧೆಯಲ್ಲಿ ಸತ್ಯದ ಗೆಲುವಾಗಿದೆ. ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಅವಿರತ ಶ್ರಮಿಸಿದ ಸುರೇಶ ಚನಶೆಟ್ಟಿ ಕೈ ಬಲಪಡಿಸುವ ಮೂಲಕ ಕನ್ನಡಕ್ಕೆ ನ್ಯಾಯ ಒದಗಿಸಿದ್ದಾರೆ ಎಂದರು.
ನಿಕಟಪೂರ್ವ ಅಧ್ಯಕ್ಷ ಜಗನ್ನಾಥ ಮೂಲಗೆ ಮಾತನಾಡಿ, ಚನಶೆಟ್ಟಿ ಗೆಲುವು ಸಮಸ್ತ ಕನ್ನಡಿಗರ ಗೆಲುವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸದಸ್ಯರು ಕೂಡ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನಶೆಟ್ಟಿ ಅವರನ್ನು ಸತ್ಕರಿಸಿದರು. ಈ ವೇಳೆ ಗಜಾನನ ಮಳ್ಳಾ, ಡಾ| ಮನ್ಮಥ ಡೋಳೆ, ಗುರುನಾಥ ತವಾಡೆ, ಶಿವಶಂಕರ ಟೋಕರೆ, ಬಿ.ಎಂ. ಅಮರವಾಡಿ, ಡಾ| ಶಾಲಿವಾನ ಉದಗಿರೆ, ರಮೇಶ ಬಿರಾದಾರ, ಕೈಲಾಸಪತಿ ಕೇದಾರೆ, ಸಂದೀಪ ಪಾಟೀಲ್, ಆನಂದ ದ್ಯಾಡೆ, ಎಂ.ಡಿ. ಸಾಜೀದ್, ಜಗನ್ನಾಥ ದೇಶಮುಖ, ಜಗನ್ನಾಥ ಬಿರಾದಾರ ಇತರರಿದ್ದರು.