Advertisement
ಆ ರಂಗು, ಒಂದು ಸಿಹಿಯಾದ ಕಚಗುಳಿ. ಮದರಂಗಿಯ ಬಣ್ಣಕ್ಕಾಗಿ ಶರೀರವನ್ನೇ ಕ್ಯಾನ್ವಾಸ್ ಮಾಡಿಕೊಳ್ಳುವ ಹೆಣ್ಣಿಗೆ, ತನ್ನ ಜೀವನುದ್ದಕ್ಕೂ ಅದರ ಚಿತ್ತಾರ ಅರಳಿಕೊಂಡೇ ಇರಲಿಯೆಂಬ ಇಂಗಿತವೂ ಇರುತ್ತೆ. ಮದರಂಗಿಯು ಪರಂಪರಾಗತವಾಗಿ ಹೆಣ್ಣಿನ ಅಲಂಕಾರದ ಭಾಗವಾಗಿ ಬಂದಿದೆ. ಮದುವೆಯೇ ಇರಲಿ, ಹಬ್ಬ ಹರಿದಿನಗಳೇ ಇರಲಿ, ಅಂಗೈ ಮೇಲೆ ಚಿತ್ತಾರ ಮೂಡಿದರೇನೇ ಸಂಭ್ರಮಕ್ಕೊಂದು ಕಳೆ. ಕಾಲ ಕಳೆದಂತೆ ಬೇರೆಲ್ಲಾ ಹಳೆಯ ಸಂಗತಿಗಳು ಮೂಲೆಗುಂಪಾದರೂ, ಮದರಂಗಿಯ ಕೆಂಪು ಮಾತ್ರ ಮಾಸಿಲ್ಲ, ಮಾಸುವುದೂ ಇಲ್ಲ. ಮಾಡರ್ನ್ ಹುಡುಗಿಯರೂ ರಂಗು ರಂಗಿನ ಚಿತ್ತಾರಕ್ಕೆ ಕೈ ಒಡ್ಡುವುದೇ ಅದಕ್ಕೆ ಸಾಕ್ಷಿ.
Related Articles
Advertisement
– ತೋರುಬೆರಳಿನಿಂದ ಮುಂಗೈ ಮಣಿಕಟ್ಟಿನವರೆಗಿನ ಫ್ಲೋರಲ್ ಡಿಸೈನ್ (ಹೂವಿನ ಚಿತ್ತಾರ) ಅತ್ಯಂತ ಸುಲಭ ಹಾಗೂ ಸುಂದರವಾದ ಚಿತ್ತಾರ.
– ತೋರುಬೆರಳು ಹಾಗೂ ಉಂಗುರದ ಬೆರಳಿನ ಮೇಲೆ ಮೂಡುವ ಹೂಬಳ್ಳಿಯ ಸೊಬಗು ಕೈಗಳ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹೂಬಳ್ಳಿಯ ನಡುವೆ ಗುಲಾಬಿಯ ಡಿಸೈನ್ ಬಿಡಿಸಿಕೊಳ್ಳಿ.
– ಬಳ್ಳಿ ಮರವನ್ನು ಅಪ್ಪಿಕೊಂಡಿದ್ದರೆ ಮಾತ್ರ ಚೆಂದ ಅಂದವರಾರು? ಕೈಗಳ ಮೇಲೆಯೂ ಬಳ್ಳಿ ಹಬ್ಬಲಿ. ಚಿಕ್ಕ ಚಿಕ್ಕ ಎಲೆಯನ್ನು ಹರಡಿಕೊಂಡು ಸೌಂದರ್ಯ ಹೆಚ್ಚಿಸಲಿ.
– ಮಧ್ಯದ ಬೆರಳಿನ ಮೇಲೆ ಚಿಕ್ಕ ಚಿಕ್ಕ ಚೌಕಗಳನ್ನು ಬರೆದು, ಅದರೊಳಗೆ ಸಿಂಪಲ್ ಡಿಸೈನ್ ಮೂಡಿಸಬಹುದು.
– ಅಂಗೈ ಮೇಲಿನ ಗ್ರ್ಯಾಂಡ್ ಡಿಸೈನ್‌ಗಳನ್ನೇ ಬೆರಳಿನ ಮೇಲೆಯೂ ಮೂಡಿಸಬಹುದು. ಶುಭ ಸಮಾರಂಭಗಳಲ್ಲಿ ಕೈಗಳ ಎರಡೂ ಬದಿ ಮದರಂಗಿ ಬರೆಯುವಾಗ ಇಂಥ ಡಿಸೈನ್‌ಗಳು ಹೆಚ್ಚು ಸೂಕ್ತ.
– ಪೂರ್ತಿ ಬೆರಳಿನ ಮೇಲೆ ಡಿಸೈನ್ ಬೇಡ ಅಂತಿದ್ದರೆ, ಅರ್ಧ ಬೆರಳುಗಳ ಮೇಲೆ ಸಿಂಪಲ್ ಗೆರೆಗಳನ್ನು ಎಳೆದು ಡಿಸೈನ್ ಬರೆಯಬಹುದು.
– ಬೆರಳುಗಳನ್ನು ಮಾತ್ರ ಸಿಂಗರಿಸಿದರೆ ಸಾಕೇ? ಹಿಂಗೈ ಖಾಲಿ ಖಾಲಿಯಾಗಿ ಕಾಣಿಸಬಾರದೆಂದರೆ, ಒಂದು ವೃತ್ತಾಕಾರದ ಚಿತ್ತಾರ ಬಿಡಿಸಿಕೊಳ್ಳಿ.
– ಸೀರೆ, ಲೆಹೆಂಗಾದಂಥ ದಿರಿಸುಗಳಿಗೆ, ನವಿಲುಗರಿಯಂಥ ಡಿಸೈನ್ ಹೆಚ್ಚು ಸೂಕ್ತ. ಎರಡೂ ಕೈಗಳ ತೋರುಬೆರಳಿನಿಂದ ಹೊರಟ ಚುಕ್ಕಿ ಸಾಲುಗಳಿಂದ ನವಿಲುಗರಿ ಮೂಡಲಿ.
– ನವಿಲುಗರಿಯ ಸುಂದರ ಚಿತ್ತಾರವನ್ನು ಹಿಂಗೈ ಮೇಲೆ ಮೂಡಿಸಿದರೆ, ಮದರಂಗಿ ಗ್ರ್ಯಾಂಡ್ ಆಗಿ ಕಾಣಿಸುತ್ತದೆ. ಆಗ ಎಲ್ಲಾ ಬೆರಳುಗಳ ಮೇಲೆ ಡಿಸೈನ್ ಮೂಡಿಸುವ ಅಗತ್ಯವೂ ಇಲ್ಲ.
– ನಾಲ್ಕು ಬೆರಳುಗಳ ಮೇಲೆ ಒಂದೇ ರೀತಿಯ ಗ್ರ್ಯಾಂಡ್ ಡಿಸೈನ್ ಬರೆದು, ಉಂಗುರದ ಬೆರಳಿಗೆ ಹೂಬಳ್ಳಿಯ ಚಿತ್ತಾರ ಬರೆದರೆ ಕೈ ಮೇಲೊಂದು ಸುಂದರ ಕಲೆ ಅರಳುತ್ತದೆ.
– ನೀವು ಪ್ರಕೃತಿ ಪ್ರಿಯರಾಗಿದ್ದರೆ, ಎಲೆಗಳಿಲ್ಲದ ಬಳ್ಳಿಯಿಂದ ಹೂವು ಅರಳಿದಂತೆ ಕಾಣಿಸುವ ಡಿಸೈನ್ ನಿಮಗೆ ಇಷ್ಟವಾಗಬಹುದು.
– ಕಾಕ್ಟೇಲ್ ಸೀರೆಯನ್ನುಟ್ಟಾಗ, ಮೂರು ಬೆರಳುಗಳ ಮೇಲೆ ಈ ರೀತಿಯ ಮುದ್ದಾದ ಚಿತ್ತಾರವನ್ನು ಮೂಡಿಸಬಹುದು.
– ಅರೇಬಿಕ್ ಶೈಲಿಯ ಈ ಡಿಸೈನ್ ಬೋಲ್ಡ್ ಹಾಗೂ ಗ್ರ್ಯಾಂಡ್ ಆಗಿದ್ದು, ಅದ್ಧೂರಿ ದಿರಿಸುಗಳಿಗೆ ಚೆನ್ನಾಗಿ ಒಪ್ಪುತ್ತದೆ.
– ಲೆಹೆಂಗಾ ಹಾಗೂ ಗೌನ್‌ನಂಥ ಡ್ರೆಸ್‌ಗಳನ್ನು ಧರಿಸಿದಾಗ, ಉಂಗುರ ಬೆರಳನ್ನು ಹೀಗೆ ಸಿಂಗರಿಸಬಹುದು.
– ಒನ್ ಸ್ಟೇಟ್‌ಮೆಂಟ್ ಜ್ಯುವೆಲರಿ ಆಗಿ, ದೊಡ್ಡ ಉಂಗುರವನ್ನು ಧರಿಸಿದಾಗ ಬೆರಳಿನ ಮೇಲೆ ಸಾಂಪ್ರದಾಯಕವಾದ ಡಿಸೈನ್ ಮೂಡಿಸಿ.
– ಪ್ರಿಯಾಂಕಾ