Advertisement

ವಾಹನಗಳ ನಂಬರ್‌ ಪ್ಲೇಟ್‌ನಲ್ಲಿ ಚಿಹ್ನೆ ಅಳವಡಿಸಿದ್ದರೆ ದಂಡ !

10:05 AM Dec 29, 2019 | mahesh |

 ಸಾರಿಗೆ ಇಲಾಖೆಯ ಮಹತ್ವ ನಿರ್ಧಾರ
ನಂಬರ್‌ ಪ್ಲೇಟ್‌ನಲ್ಲಿ ಚಿಹ್ನೆ ಬಳಕೆಯಿಲ್ಲ
ಕಾನೂನು ಕ್ರಮ, ದುಬಾರಿ ದಂಡ

Advertisement

ಮಹಾನಗರ: ಸಾರಿಗೆ ಇಲಾಖೆಯು ದಂಡ ಹೆಚ್ಚಳ, ಫಾಸ್ಟಾಗ್‌ ಸಹಿತ ಹೊಸ ಮಾದರಿ ನಿಯಮವನ್ನು ಜಾರಿಗೆ ತರುತ್ತಿದ್ದು, ಇದೀಗ ಕೇಂದ್ರ ಸಾರಿಗೆ ಇಲಾ ಖೆಯು ಮತ್ತೂಂದು ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. ಅದರಂತೆ, ವಾಹನಗಳ ನಂಬರ್‌ ಪ್ಲೇಟ್‌ನಲ್ಲಿ ಕೇವಲ ನಂಬರ್‌ ಮಾತ್ರ ಇರಬೇಕು. ಬದಲಾಗಿ ಯಾವುದೇ ಚಿಹ್ನೆ, ಹೆಸರು ನಮೂದಿಸುವಂತಿಲ್ಲ.

ಅಷ್ಟೇಅಲ್ಲ, ದೋಷಯುಕ್ತ ನಂಬರ್‌ ಪ್ಲೇಟ್‌ ಹೊಂದಿದ್ದರೆ ದುಬಾರಿ ದಂಡ ಪಾವತಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಂಗಳೂರು ನಗರದಲ್ಲಿ ಕಾರ್ಯಾಚರಣೆಗೆ ಸಾರಿಗೆ ಇಲಾಖೆ ಅಧಿಕಾರಿಗಳು ಇದೀಗ ಸನ್ನದ್ಧರಾಗುತ್ತಿದ್ದಾರೆ. ನಗರದಲ್ಲಿ ಓಡಾಡುವ ಅನೇಕ ವಾಹನ ಗಳು ನಂಬರ್‌ ಪ್ಲೇಟ್‌ ಮೇಲೆ ಆಯಾ ಸಂಘಟನೆಯ ಫಲಕಗಳನ್ನು ನಮೂದು ಮಾಡಿರುತ್ತವೆ. ಇನ್ಮುಂದೆ ಆ ರೀತಿಯಾಗಿ ನಂಬರ್‌ ಪ್ಲೇಟ್‌ಗಳ ಮೇಲೆ ಇತರೆ ಚಿಹ್ನೆ ಅಥವಾ ಬರಹವಿದ್ದರೆ ಕಟ್ಟು ನಿಟ್ಟಾಗಿ ಕ್ರಮ ಜರಗಿಸಲಾಗುತ್ತದೆ. ನಿಗಮ ಮಂಡಳಿ, ಸರಕಾರಿ ವಾಹನಗಳು ಮಾತ್ರ ಈ ರೀತಿಯ ಫಲಕಗಳನ್ನು ಬಳಸಬಹುದು. ಕೆಲವೊಂದು ನಿಗಮಗಳು ಟೂರಿಸ್ಟ್‌ ವಾಹನಗಳನ್ನು ಬಾಡಿಗೆ ತೆಗೆದುಕೊಳ್ಳುತ್ತದೆ. ಅಂತಹ ವಾಹನಗಳಿಗೆ ಕರ್ನಾಟಕ ಸರಕಾರ ಸೇವೆಯಲ್ಲಿ ಎಂದು ನಮೂದಿಸಬಹುದು. ಕರ್ನಾಟಕದಲ್ಲಿ ಸರಕಾರಿ ವಾಹನಗಳ ನಂಬರ್‌ ಪ್ಲೇಟ್‌ “ಜಿ’ ಸೀರಿಸ್‌ ಸಂಖ್ಯೆಯಿಂದ ಪ್ರಾರಂಭವಾಗುತ್ತದೆ.

ನಕಲಿ ನಂಬರ್‌ ಪ್ಲೇಟ್‌ ಜಾಲ ಕಡಿಮೆ
ನಗರದಲ್ಲಿ ಕೆಲವು ವರ್ಷಗಳ ಹಿಂದೆ ನಕಲಿ ನಂಬರ್‌ ಪ್ಲೇಟ್‌ ಜಾಲ ಹೆಚ್ಚಿತ್ತು. ನಕಲಿ ನಂಬರ್‌ ಪ್ಲೇಟ್‌ ಜಾಲಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಎಲ್ಲ ವಾಹನಗಳಿಗೆ ಹೈ ಸೆಕ್ಯೂರಿಟಿ ಲೈಸನ್ಸ್‌ ಪ್ಲೇಟ್‌ಗಳನ್ನು ವಾಹನ ಉತ್ಪಾದಕರೇ ನೀಡಬೇಕು. ಉತ್ಪಾದಕ ಡೀಲರ್‌ಗಳು ವಾಹನ ಮಾರಾಟದ ಸಂದರ್ಭ ಪ್ಲೇಟ್‌ಗಳಲ್ಲಿ ನೋಂದಣಿ ಸಂಖ್ಯೆ ನಮೂದಿಸಿ ವಾಹನಗಳಿಗೆ ಅಳವಡಿಸಿದ ಅನಂತರೇ ಗ್ರಾಹಕರಿಗೆ ನೀಡಬೇಕು ಎಂಬ ನಿಯಮವನ್ನು ಕೇಂದ್ರ ಸರಕಾರವು ಜಾರಿಗೆ ತಂದಿತ್ತು. ಇದರಿಂದಾಗಿ ಮಂಗಳೂರಿನಲ್ಲೂ ನಕಲಿ ನಂಬರ್‌ ಪ್ಲೇಟ್‌ ಜಾಲ ಕಡಿಮೆಯಾಗಿದೆ.

ಕನ್ನಡ ಅಕ್ಷರಕ್ಕೆ ಅವಕಾಶ
ಕರ್ನಾಟಕದಲ್ಲಿ ನೋಂದಣಿಯಾದಂತಹ ಕೆಲವೊಂದು ವಾಹನಗಳಲ್ಲಿ ಕನ್ನಡ ಅಕ್ಷರದಲ್ಲಿ ನೋಂದಣಿ ಸಂಖ್ಯೆಯನ್ನು ಬರೆದಿರುತ್ತಾರೆ. ಕನ್ನಡ ಭಾಷೆ ಬಳಕೆಗೆ ಸಾರಿಗೆ ಇಲಾಖೆ ಅನುಮತಿ ನೀಡಿದೆ. ಆದರೆ ನಂಬರ್‌ ಪ್ಲೇಟ್‌ನಲ್ಲಿ ಕನ್ನಡ ಭಾಷೆಯ ಜತೆ ಆಂಗ್ಲಭಾಷೆಯನ್ನೂ ನಮೂದು ಮಾಡಬೇಕು. ಕೇವಲ ಕನ್ನಡ ಭಾಷೆಯನ್ನು ಮಾತ್ರ ನಮೂದಿಸಿದರೆ ನಿಯಮ ಉಲ್ಲಂಘಿಸಿದಂತಾಗುತ್ತದೆ ಎಂದು ಸಾರಿಗೆ ಅಧಿಕಾರಿಯೊಬ್ಬರು “ಉದಯವಾಣಿ ಸುದಿನ’ಕ್ಕೆ ತಿಳಿಸಿದ್ದಾರೆ.

Advertisement

ಟ್ರಾಫಿಕ್‌ ನಿಯಮ ಎಲ್ಲರೂ ಪಾಲಿಸಿ
ಟ್ರಾಫಿಕ್‌ ನಿಯಮಗಳನ್ನು ಪ್ರತಿಯೊಬ್ಬ ಸವಾರನೂ ಪಾಲನೆ ಮಾಡಬೇಕು. ವಾಹನಗಳ ನಂಬರ್‌ ಪ್ಲೇಟ್‌ಗಳಲ್ಲಿ ಯಾವುದೇ ರೀತಿಯ ಚಿಹ್ನೆಗಳನ್ನು ನಮೂದು ಮಾಡುವಂತಿಲ್ಲ ಎಂಬುವುದಾಗಿ ಸಾರಿಗೆ ಇಲಾಖೆ ಇದೀಗ ಕಟ್ಟುನಿಟ್ಟಿನಲ್ಲಿ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಯಾವೆಲ್ಲಾ ವಾಹನಗಳಲ್ಲಿ ದೋಷಯುಕ್ತ ನಂಬರ್‌ ಪ್ಲೇಟ್‌ಗಳಿವೆ ಎಂಬ ಪತ್ತೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
 - ರಾಮಕೃಷ್ಣ ರೈ, ಮಂಗಳೂರು ಆರ್‌ಟಿಒ

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next