Advertisement

ಮರಳು ಸಾಗಾಣಿಕೆಗಳಿಂದ ದಂಡ ವಸೂಲಿ ಮಾಡಿ

09:38 PM Nov 12, 2019 | Lakshmi GovindaRaju |

ಹಾಸನ: ಮರಳು ಸಾಗಿಸುವ ವಾಹನಗಳ ಜಿಪಿಎಸ್‌ನ್ನು ನಿಷ್ಕ್ರಿಯಗೊಳಿಸಿ ಅಕ್ರಮವಾಗಿ ಮರಳು ಸಾಗಿಸಿದ ಲಾರಿ ಮಾಲಿಕರಿಗೆ ವಿಧಿಸಿರುವ ದಂಡವನ್ನು ಕಡ್ಡಾಯವಾಗಿ ವಸೂಲಿ ಮಾಡಬೇಕೆಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಟಾಸ್ಕ್ ಪೋರ್ಸ್‌ ಸಮಿತಿ, ಕ್ರಷರ್‌ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಮರಳು ಸಾಗಾಣಿಕೆ ವಾಹನಗಳಿಗೆ ಅಳಡಿಸಲಾಗಿರುವ ಜಿಪಿಎಸ್‌ ಸಾಧನದ ಸಂಪರ್ಕವನ್ನು 103 ಬಾರಿ 56 ಲಾರಿಗಳು ನಿಷ್ಕ್ರಿಯಗೊಳಿಸಿ ಸಂಚರಿಸಿವೆ. ಈ ಲಾರಿಗಳ ಜಿಪಿಎಸ್‌ ಕಾರ್ಯನಿರ್ವಹಿಸುವಂತೆ ಮಾಡಬೇಕು ಹಾಗೂ ಈಗಾಗಲೇ ವಿಧಿಸಿರುವ ನಿಗದಿತ ದಂಡವನ್ನು ನಿರ್ದಾಕ್ಷಿಣ್ಯವಾಗಿ ವಸೂಲಿ ಮಾಡಬೇಕು. ಜಿಪಿಎಸ್‌ ಇಲ್ಲದಿರುವ ವಾಹನಗಳಲ್ಲಿ ಮರಳು ಸಾಗಿಸಲು ನೀಡಿರುವ ಪರವಾನಗಿಯನ್ನು ರದ್ದುಮಾಡಿ ವಿಧಿಸಿರುವ ದಂಡವನ್ನು ವಸೂಲಿ ಮಾಡಬೇಕು ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರ ದೂರು ಪರಿಶೀಲಿಸಿ: ಅಕ್ರಮ ಮರಳು ಸಾಗಾಣಿಕೆ ಮತ್ತು ಕಲ್ಲು ಗಣಿಗಾರಿಕೆ ನಡೆಯುವ ಜಾಗದಲ್ಲಿ ನಡೆದಿರುವ ಬ್ಲಾಸ್ಟಿಂಗ್‌ ಕುರಿತು ಸ್ಥಳೀಯರು ನೀಡಿರುವ ದೂರಿನನ್ವಯ ಉಪಭಾಗಾಧಿಕಾರಿ ಸ್ಥಳ ಪರಿಶೀಲಿಸಿ ವರದಿ ನೀಡಬೇಕು. ಜಿಲ್ಲೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಜಾಗಗಳಲ್ಲಿ ಕ್ರಷರ್‌ ಘಟಕ ಸ್ಥಾಪಿಸಲು ಪರವಾನಗಿ ಕೋರಿರುವವರು ಕಡ್ಡಾಯವಾಗಿ ಕ್ವಾರಿಗಳನ್ನು ಹೊಂದಿದ್ದರಷ್ಟೇ ಪರವಾನಗಿ ನೀಡಬೇಕು. ಭೂ ಪರಿವರ್ತನೆಯಾದ ಜಾಗದಲ್ಲಷ್ಟೇ ಕ್ರಷರ್‌ ಘಟಕ ಚಾಲನೆಗೆ ಅವಕಾಶ ನೀಡಬೇಕು ಎಂದೂ ಹೇಳಿದರು.

ಮೊಬೈಲ್‌ ಸ್ಕ್ವಾಡ್‌ ಆರಂಭಿಸಿ: ಅಕ್ರಮ ಮರಳು ಸಾಗಾಣಿಕೆ ಮಾಡುವ ಪ್ರಕರಣಗಳನ್ನು ತಡೆಯುವ ಸಲುವಾಗಿ ಮೊಬೈಲ್‌ ಸ್ಕ್ವಾಡ್‌ಗಳನ್ನು ಶೀಘ್ರವಾಗಿ ಆರಂಭಿಸಬೇಕು. ಚೆಕ್‌ ಪೋಸ್ಟ್‌ಗಳಿಗೆ ಸೂಕ್ತ ಭದ್ರತೆ ಒದಗಿಸಿ ಜಲ್ಲಿ ಸಾಗಿಸುವ ವಾಹನಗಳಿಗೂ ಜಿಪಿಎಸ್‌ ಅಳವಡಿಸಿ ಅಕ್ರಮ ಸಾಗಾಣಿಕೆಗೆ ಕಡಿವಾಣ ಹಾಕಬೇಕು ಎಂದರು. ಚೆಕ್‌ ಪೋಸ್ಟ್‌ ಮತ್ತು ಮೊಬೈಲ್‌ ಸ್ಕ್ವಾಡ್‌ಗಳಲ್ಲಿ ಕಾರ್ಯನಿರ್ವಹಿಸುವ ಸ್ಕ್ವಾಡ್‌ಗಳಿಗೆ ಸೂಕ್ತ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಬೇಕು. ಸಿಸಿ ಕ್ಯಾಮೆರಾ ದೃಶ್ಯಾವಳಿ ನೀಡದ ಮರಳು ಗುತ್ತಿಗೆದಾರರಿಗೆ ನೋಟೀಸ್‌ ನೀಡಿ ಪರವಾನಗಿ ರದ್ದುಪಡಿಸುವಂತೆಯೂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.

ಪೊಲೀಸ್‌ ಭದ್ರತೆ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ ನಿವಾಸ್‌ ಸೆಪೆಟ್‌ ಮಾತನಾಡಿ, ಅಕ್ರಮ ಮರಳು ಗಣಿಗಾರಿಕೆ ಸ್ಥಳಕ್ಕೆ ಭೂ ವಿಜ್ಞಾನಾಧಿಕಾರಿಗಳು ತಪಸಣೆಗೆ ತೆರಳುವಾಗ ಪೊಲೀಸ್‌ ಇಲಾಖೆಯಿಂದ ಅಗತ್ಯ ಭದ್ರತೆ ಒದಗಿಸಲಾಗುವುದು ಎಂದು ಹೇಳಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಸಿವರಾಂಬಾಬು, ಉಪ ಭಾಗಾಧಿಕಾರಿ ನವೀನ್‌ ಭಟ್‌, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಸಿ.ಎಸ್‌.ಮಂಜು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ್‌ ಪ್ರಾದೇಶಿಕ ಸಾರಿಗೆ ಅಧೀಕ್ಷಕ ಎಂ.ಕೆ.ಗಿರೀಶ್‌ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

ಅತಿವೃಷ್ಟಿ ಹಾನಿ: ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ
ಹಾಸನ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿರುವ ಶಾಲಾ ಕಟ್ಟಡಗಳ ದುರಸ್ತಿ ಕಾಮಗಾರಿಗಳನ್ನು ನ. 16ರ ಒಳಗಾಗಿ ಪ್ರಾರಂಭಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅತಿವೃಷ್ಟಿ ಹಾನಿ ಕಾಮಗಾರಿಗಳ ಪ್ರಗತಿ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಶಾಲೆ, ಅಂಗನವಾಡಿ ಮತ್ತು ಆಸ್ಪತ್ರೆ ಕಟ್ಟಡಗಳ ದುರಸ್ತಿ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಬೇಕು. ಕೆರೆ, ಕಟ್ಟೆ, ರಸ್ತೆ, ಸರ್ಕಾರಿ ಕಟ್ಟಡಗಳು ಸೇರಿದಂತೆ ಯಾವುದೇ ಕಾಮಗಾರಿಗಳಲ್ಲಿ ವಿಳಂಬವಾಗಬಾರದು ತಕ್ಷಣವೇ ತಾತ್ಕಾಲಿಕ ವ್ಯವಸ್ಥೆ ಹಾಗೂ ಶಾಶ್ವತ ಪರಿಹಾರ ಕ್ರಮಗಳನ್ನು ಮಾಡಬೇಕು ಎಂದು ಅವರು ಹೇಳಿದರು.

ಅತಿವೃಷ್ಟಿ ಹಾನಿ ಪರಿಹಾರ ಕ್ರಮಗಳಲ್ಲಿ ಯಾವುದೇ ವಿಳಂಬ ಧೋರಣೆಯನ್ನು ಸಹಿಸುವುದಿಲ್ಲ. ಹಾಗಾಗಿ ಎಲ್ಲಾ ಇಲಾಖೆಗಳ ಸೂಕ್ಷ್ಮತೆಯನ್ನು ಅರಿತು ಸೂಕ್ತವಾಗಿ ಸ್ಪಂದಿಸಿ ಕಾರ್ಯನಿರ್ವಸಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಅತಿವೃಷ್ಟಿ ಹಾನಿ ಪ್ರದೇಶಗಳಲ್ಲಿ ರಸ್ತೆ ಸಂಚಾರ ವ್ಯವಸ್ಥೆ ಸರಿಪಡಿಸಬೇಕು. ಅತಿವೃಷ್ಟಿ ಹಾನಿಪೀಡಿತ ಎಂದು ಘೋಷಣೆಯಾಗಿರುವ ತಾಲೂಕುಗಳಲ್ಲಿ ಎಲ್ಲಾ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳಬೇಕು ಎಂದು ತಾಕೀತು ಮಾಡಿದರು.

ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳನ್ನು ಅನುಸರಿಸಿ ವಿವಿಧ ಇಲಾಖೆಗಳಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಯ ದುರಸ್ತಿ ಕಾರ್ಯಗಳನ್ನು ಶೀಘ್ರವಾಗಿ ಕೈಗೊಳ್ಳಬೇಕು. ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ 53 ಕಾಮಗಾರಿಗಳನ್ನೂ ತ್ವರಿತವಾಗಿ ಪೂರ್ಣಗೊಳಿಸಸಬೇಕು ಎಂದರು. ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿ ಅನುದಾನ ಹೊರತುಪಡಿಸಿ ಇಲಾಖಾ ಅನುದಾನ ಬಿಡುಗಡೆಯಾಗಿದ್ದರೆ ಅದಕ್ಕೆ ಪ್ರತ್ಯೇಕ ಮಾರ್ಗಸೂಚಿ ಅನ್ವಯವಾಗಲಿದ್ದು, ನಿಯಮಾನುಸಾರ ಕಾರ್ಯ ನಿರ್ವಹಿಸಬೇಕು.

ಬೇರೆ ಜಿಲ್ಲೆಗೆ ಸೇರಿದ ಗಡಿಭಾಗದ ಕಾಮಗಾರಿಗಳಿದ್ದಲ್ಲಿ ದುರಸ್ತಿಗೆ ಸಂಬಂಧಿಸಿದ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ತಮ್ಮ ಮೂಲಕ ಪತ್ರ ರವಾನಿಸಲು ಸೂಚಿಸಿದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಆನಂದ್‌, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಸಿ.ಎಸ್‌.ಮಂಜು ಮತ್ತಿರರು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next