ಶಿಗ್ಗಾವಿ: ಲಾಕ್‌ಡೌನ್ ಮುಕ್ತಗೊಳಿಸಿದ ನಂತರ ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಮರೆತೇ ಹೋಗಿದ್ದ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜೆ. ದೇವರಾಜ ಹಾಗೂ ಸಿಬ್ಬಂದಿ ಪಟ್ಟಣದ ವಿವಿಧ ಭಾಗಗಳಲ್ಲಿ ಸಂಚರಿಸಿ, ಮಾಸ್ಕ್ ಧರಿಸದವರಿಗೆ ಮುಲಾಜಿಲ್ಲದೇ ದಂಡ
ವಿಧಿಸಿ ಎಚ್ಚರಿಕೆ ನೀಡಿದರು.
ಶನಿವಾರ ಪಟ್ಟಣದ ವಿವಿಧ ರಸ್ತೆಗಳಲ್ಲಿ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದ ವಾಹನ ಚಾಲಕರು, ಪ್ರಯಾಣಿಕರು, ವ್ಯಾಪಾರಸ್ಥರು, ಗ್ರಾಹಕರು ಹಾಗೂ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದವರನ್ನು ತಡೆದು ಎಚ್ಚರಿಕೆ ನೀಡಿದರು. ಅಲ್ಲದೇ, ನೂರಾರು ಜನರಿಗೆ ದಂಡ ವಿಧಿಸಿದರು. ಇನ್ನು ಮುಂದೆ ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮನೆಯಿಂದ ಹೊರಬರುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಮುಲಾಜಿಲ್ಲದೇ ಸಾರ್ವಜನಿಕರು ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದರು.
ಮಾಸ್ಕ್ ಧರಿಸದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕೇಸು ದಾಖಲಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು. ಜನಜಾಗೃತಿ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜೆ. ದೇವರಾಜ ಅವರು ನಗರದಲ್ಲಿ ಕಾಲ್ನಡಿಗೆಯಲ್ಲೇ ಸಂಚರಿಸಿ ಕೊರೊನಾ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು.