ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಯೋಜನೆಯ ಸುರಂಗ ನಿರ್ಮಾಣ ಕಾಮಗಾರಿಯಲ್ಲಿ ಮರಗಳ ತೆರವಿಗೆ ಸಂಬಂಧಿಸಿದಂತೆ ತನ್ನದಲ್ಲದ ತಪ್ಪಿಗೆ ಕೋಟ್ಯಂತರ ರೂ. ದಂಡ ತೆರಬೇಕಾಗಿದೆ. ಆ ಮೊತ್ತ ಹೆಚ್ಚು-ಕಡಿಮೆ ಇಡೀ ಪಾಲಿಕೆ ವ್ಯಾಪ್ತಿಯಲ್ಲಿ ಗಿಡ ನೆಡುವುದರ ಜತೆಗೆ ಅವುಗಳ ನಿರ್ವಹಣೆಗಾಗಿ ಮಾಡುವ ಖರ್ಚಿಗೆ ಸರಿಸಮವಾಗಿದೆ!
ಮೆಟ್ರೋ ಎರಡನೇ ಹಂತದ ಗೊಟ್ಟಿಗೆರೆ-ನಾಗವಾರ ಸುರಂಗ ಮಾರ್ಗದ ಪೈಕಿ ವೆಲ್ಲಾರ ಜಂಕ್ಷನ್- ಶಿವಾಜಿನಗರ ಮತ್ತು ಶಿವಾಜಿನಗರ-ಪಾಟರಿ ಟೌನ್ ನಡುವೆ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಮಾರ್ಚ್ ನಲ್ಲೇ ಎಲ್ ಆಂಡ್ ಟಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಆದರೆ, ಈವರೆಗೆ ಸಂಪೂರ್ಣವಾಗಿ ಆ ಭೂಮಿಯನ್ನು ಗುತ್ತಿಗೆ ಪಡೆದ ಕಂಪನಿಗೆ ಹಸ್ತಾಂತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಸಾಧ್ಯವಾಗಿಲ್ಲ. ಈ ಮಾರ್ಗದುದ್ದಕ್ಕೂ 300ಕ್ಕೂ ಅಧಿಕ ಮರಗಳು ಬರುತ್ತಿದ್ದು, ಅವುಗಳ ತೆರವು ಕಾರ್ಯಾಚರಣೆ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ 90 ದಿನಗಳಲ್ಲಿ ಭೂಮಿ ಹಸ್ತಾಂತರಿಸಬೇಕಿತ್ತು. ಆದರೆ, ಈಗ 180 ದಿನಗಳು ಕಳೆದರೂ ಈ ಕಾರ್ಯ ಪೂರ್ಣಗೊಂಡಿಲ್ಲ. ಪರಿಣಾಮ ಯೋಜನೆ ವಿಳಂಬದಲ್ಲಿ ಇದು ಪರಿಣಮಿಸಲಿದ್ದು, ನಿಯಮದ ಪ್ರಕಾರ ನಿಗಮದ ಮೇಲೆ ಗುತ್ತಿಗೆ ಪಡೆದ ಕಂಪನಿಯು “ದಂಡ ಪ್ರಯೋಗ’ ಮಾಡುವ ಸಾಧ್ಯತೆ ಇದೆ.
ಗೊಟ್ಟಿಗೆರೆ-ನಾಗವಾರ ನಡುವಿನ ಒಟ್ಟಾರೆ 21 ಕಿ.ಮೀ. ಉದ್ದದ ಮಾರ್ಗದಲ್ಲಿ 609 ಮರಗಳು ತೆರವುಗೊಳಿಸಬೇಕಿದೆ. ಇದರಲ್ಲಿ 300ಕ್ಕೂ ಅಧಿಕ ಮರಗಳು ಪ್ಯಾಕೇಜ್ 2 ಮತ್ತು 3ರಲ್ಲಿ ಬರುವ ಐದು ನಿಲ್ದಾಣಗಳಲ್ಲೇ ಇವೆ. ಈ ಸಂಬಂಧ ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮರ ವಿಜ್ಞಾನ ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿ ಹಾಗೂ ಏಟ್ರಿ ಸರ್ಕಾರೇತರ ಸಂಸ್ಥೆಯ ಸದಸ್ಯರೊಬ್ಬರನ್ನು ಒಳಗೊಂಡ ತಜ್ಞರ ಸಮಿತಿ ರಚಿಸಿ ತಿಂಗಳು ಕಳೆದಿದೆ. ಪ್ರತಿ ತಿಂಗಳು ಮೂರನೇ ಮಂಗಳವಾರ ಈ ಸಮಿತಿ ಸಭೆ ಸೇರುತ್ತದೆ. ಮೊದಲ ತಿಂಗಳಲ್ಲೇ ಅನಿವಾರ್ಯ ಕಾರಣಗಳಿಂದ ಸಭೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಮತ್ತೆ ಮುಂದಿನ ತಿಂಗಳು ಮೂರನೇ ಮಂಗಳವಾರಕ್ಕೆ ಮುಂದೂಡಲ್ಪಟ್ಟಿದೆ. ಅಂದರೆ, ಎರಡು ತಿಂಗಳು ಕಳೆದಂತಾಗಲಿದೆ.
ಚ.ಮೀ.ಗೆ 100 ರೂ.: ಮೂಲಗಳ ಪ್ರಕಾರ ಒಂದು ಚದರ ಮೀಟರ್‌ಗೆ ಒಂದು ದಿನಕ್ಕೆ 100 ರೂ. ಕಾಮಗಾರಿ ಖರ್ಚು ಆಗುತ್ತದೆ. ಒಂದೊಂದು ನಿಲ್ದಾಣದ ವಿಸ್ತೀರ್ಣ ಕನಿಷ್ಠ ಸಾವಿರದಿಂದ ಗರಿಷ್ಠ ಎರಡು ಸಾವಿರ ಚ.ಮೀ. ಇರುತ್ತದೆ. ಹಾಗಾಗಿ, ಮೂರು ತಿಂಗಳು ವಿಳಂಬ ಎಂದು ಲೆಕ್ಕಹಾಕಿದರೂ ಕೋಟ್ಯಂತರ ರೂ. ಆಗುತ್ತದೆ. ಸಕಾಲದಲ್ಲಿ ಎಲ್ಲ ಪ್ರಕ್ರಿಯೆ ಮುಗಿದಿದ್ದರೆ, ಇದೇ ಹಣವನ್ನು ಗಿಡಗಳ ನಿರ್ವಹಣೆಗೆ ವಿನಿಯೋಗಿಸಬಹುದಿತ್ತು. ಅಂದಹಾಗೆ ಬಿಬಿಎಂಪಿ ಒಂದು ವರ್ಷಕ್ಕೆ ಗಿಡಗಳ ನಿರ್ವಹಣೆಗಾಗಿ ಐದು ಕೋಟಿ ರೂ. ಮೀಸಲಿಡುತ್ತದೆ.
ಸಮಿತಿ ಕಾರ್ಯ ಏನು?: “ನಿಗಮವು ಮರಗಳ ಪಟ್ಟಿ ಮಾಡಿ, ಫೋಟೋ ಸಹಿತ (ಅಗತ್ಯಬಿದ್ದರೆ ಮಾತ್ರ) ಅವುಗಳ ತೆರವಿಗೆ ಸೂಕ್ತ ಕಾರಣವನ್ನು ನೀಡುತ್ತದೆ. ಸ್ಥಳೀಯವಾಗಿ ಯಾವುದಾದರೂ ಆಕ್ಷೇಪಣೆಗಳಿದ್ದರೆ, ಅವುಗಳನ್ನು ಸಮಿತಿ ಆಲಿಸಲಿದೆ. ಅಲ್ಲದೆ, ಸ್ಥಳಾಂತರಿಸಲು ಯೋಗ್ಯವಾದ ಮರಗಳನ್ನು ಗುರುತಿಸಿ, ಅಂತಿಮವಾಗಿ ಎಷ್ಟು ಮರಗಳನ್ನು ತೆರವುಗೊಳಿಸಬಹುದು ಎಂದು ಸಮಿತಿ ಸೂಚಿಸುತ್ತದೆ. ನಂತರವಷ್ಟೇ ಮುಂದುವರಿಯಲು ಅವಕಾಶ ಇರುತ್ತದೆ. ಯಾವಾಗ ಸಮಿತಿ ಸೂಚನೆ ನೀಡುತ್ತದೆಯೋ ಆಗ ಅದನ್ನು ಪಾಲನೆ ಮಾಡುತ್ತೇವೆ’ ಎಂದು ಮರಗಳ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ. ಚೋಳರಾಜಪ್ಪ “ಉದಯವಾಣಿ’ಗೆ ಸ್ಪಷ್ಟಪಡಿಸಿದರು. ಮುಖ್ಯವಾಗಿ ನಿಗಮಕ್ಕೆ ಆಲ್‌ಸೆಂಟ್ ಚರ್ಚ್ ಆವರಣದಲ್ಲಿನ ಮರಗಳ ತೆರವು ಕಗ್ಗಂಟಾಗಿದೆ. ನೂರಾರು ವರ್ಷಗಳ ಹಿಂದಿನ ಮರಗಳು ಇಲ್ಲಿವೆ. ಅವುಗಳ ತೆರವಿಗೆ ಅವಕಾಶ ನೀಡುವುದಿಲ್ಲ ಎಂದು ಚರ್ಚ್ ಸದಸ್ಯರು ಮತ್ತು ಸಮುದಾಯದ ಮುಖಂಡರು ಪಟ್ಟುಹಿಡಿದಿದ್ದಾರೆ. ಇದು ಕೂಡ ಇತ್ಯರ್ಥ ಆಗಬೇಕಿದ್ದು, ಈ ಹಿನ್ನೆಲೆಯಲ್ಲಿ ಯೋಜನೆ ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
-ವಿಜಯಕುಮಾರ್ ಚಂದರಗಿ