Advertisement

ಕಲ್ಮನೆ ಸಹಕಾರ ಸಂಘ ಶತಮಾನೋತ್ಸವ ಇಂದು

05:18 PM Nov 30, 2018 | |

ಸಾಗರ: ಅಪ್ಪಟ ಗ್ರಾಮೀಣ ಪ್ರದೇಶ ಕಲ್ಮನೆಯಲ್ಲಿ ಆರಂಭವಾದ “ಕಲ್ಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ’ಕ್ಕೆ ಶತಮಾನೋತ್ಸವ ಸಂಭ್ರಮ. 1916ರಲ್ಲಿ ಸಾಗರದಿಂದ 10 ಕಿ.ಮೀ. ದೂರದ ಕಲ್ಮನೆ ಗ್ರಾಮದೇವರಾದ “ಶ್ರೀ ಗೋಪಾಲಕೃಷ್ಣ ಕೋ- ಆಪರೇಟಿವ್‌ ಸೊಸೈಟಿ ಅನ್‌ಲಿಮಿಟೆಡ್‌, ಕಲ್ಲಮನೆ’ ಹೆಸರಿನಲ್ಲಿ ಶಿವಮೊಗ್ಗ ವಿಭಾಗದ ಸಹಕಾರ ಸಂಘಗಳ ಸಹಾಯಕ ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಾವಣೆಗೊಂಡ ಈ ಸಂಸ್ಥೆ ಆರಂಭದಲ್ಲಿ ಕಲ್ಲಮನೆ, ಅರಳಿಕೊಪ್ಪ, ಹಳೇ ಇಕ್ಕೇರಿ, ಉದ್ರಿ, ಬ್ರಾಹ್ಮಣ ಬೇದೂರು, ಹೊಸೂರು, ಲಿಂಗದಹಳ್ಳಿ, ಬೆಂಕಟವಳ್ಳಿ, ಮಂಕಳಲೆ, ನಾಡವದ್ದಳ್ಳಿ, ಕೊಪ್ಪಲಗದ್ದೆ, ಎಡಜಿಗಳೇಮನೆ ಮತ್ತು ಇವುಗಳ ಮಜರೆ ಗ್ರಾಮಗಳು, ಶೆಟ್ಟಿಸರ ಪ್ರದೇಶಗಳನ್ನು ಆಡಳಿತ ವ್ಯಾಪ್ತಿಯನ್ನಾಗಿಸಿಕೊಂಡಿತ್ತು. ಆರಂಭದ ಹಲವಾರು ವರ್ಷ ಹುಲಿಮನೆಯ ಪಟೇಲ್‌ ಕಾಳೆ ಸುಬ್ಬರಾಯರ ಮನೆಯೇ ಸಂಘದ ಕಚೇರಿಯಾಗಿತ್ತು. 2010ರಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವಾಗಿ ರೂಪುಗೊಂಡಿತು.

Advertisement

ಈ ಸಂಸ್ಥೆ ತನ್ನದೇ ವಿಶಾಲವಾದ ಕಟ್ಟಡವನ್ನು ಹೊಂದಿದೆ. 1,592 ಷೇರುದಾರರಲ್ಲಿ 812 ರೈತರು ಸಾಲ ಪಡೆಯುತ್ತಿದ್ದಾರೆ. ಕಳೆದ ವರ್ಷ 3.47 ಕೋಟಿ ರೂ. ಕೃಷಿ ಸಾಲ ವಿತರಿಸಿ ಸಾಗರ ತಾಲೂಕಿನಲ್ಲೇ ಅಗ್ರಸ್ಥಾನ ಪಡೆದಿದೆ. ಸಹಕಾರಿ ತತ್ವದ ಇನ್ನೊಂದು ಸಂಸ್ಥೆ ಸುವಿಧಾ ಸೂಪರ್‌ ಮಾರ್ಕೆಟ್‌ ಸಹಕಾರದೊಂದಿಗೆ ಕಿರಾಣಿ ಅಂಗಡಿಯನ್ನು 2015ರಲ್ಲೇ ಪ್ರಾರಂಭಿಸಿದೆ. ದ್ವಿಚಕ್ರ ವಾಹನ ಸಾಲ, ನಿತ್ಯನಿಧಿ  ಠೇವಣಿ ಯೋಜನೆಗಳನ್ನು ಸದಸ್ಯರಿಗೆ ಕಲ್ಪಿಸಿದೆ. ಸೊಸೈಟಿಗಳ ನಡುವೆ ಸಮನ್ವಯ ರೂಪಿಸುವ ಕೆಲಸವನ್ನು ಕೂಡ ಕಲ್ಮನೆ ಕೃಷಿ ಪತ್ತಿನ ಸಹಕಾರ ಸಂಘ ಮಾಡುತ್ತಿದೆ. ಸಾಗರ ತಾಲೂಕಿನಲ್ಲೇ ಅತ್ಯಧಿಕ ವ್ಯವಹಾರ ನಡೆಸುವ
ಖ್ಯಾತಿ ಈ ಸಂಘದ್ದು. 

ಶತಮಾನೋತ್ಸವ ಭವನ: ನೂರು ಸಾರ್ಥಕ ವಸಂತಗಳನ್ನು ಪೂರೈಸಿದ ಸಂಭ್ರಮದ ಆಚರಣೆಗಾಗಿ ಶುಕ್ರವಾರ (ನ.30) ಬೆಳಗ್ಗೆ 11ಕ್ಕೆ ಸಂಘದ ಆವರಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸುಮಾರು 23 ಲಕ್ಷ ರೂ. ವೆಚ್ಚದ ಸುಮಾರು 250 ಆಸನಗಳ ಸಾಮರ್ಥಯದ ಸಭಾಭವನ ಲೋಕಾರ್ಪಣೆಯಾಗಲಿದೆ. ಈ ಶತಮಾನೋತ್ಸವ ಭವನವನ್ನು ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷ ಡಾ| ಆರ್‌. ಎಂ. ಮಂಜುನಾಥ ಗೌಡ ಲೋಕಾರ್ಪಣೆ ಮಾಡಲಿದ್ದಾರೆ. ಶಾಸಕ ಎಚ್‌. ಹಾಲಪ್ಪ ಸಮಾರಂಭ ಉದ್ಘಾಟಿಸಲಿದ್ದಾರೆ.
 
“ಶತಾನಂದ’ ಸ್ಮರಣ ಸಂಚಿಕೆಯನ್ನು ಜಿಪಂ ಸದಸ್ಯ ಭೀಮನೇರಿ ಶಿವಪ್ಪ ಬಿಡುಗಡೆಗೊಳಿಸುವರು. ತಾಪಂ ಆಧ್ಯಕ್ಷ ಬಿ.ಎಚ್‌. ಮಲ್ಲಿಕಾರ್ಜುನ ಹಕ್ರೆ ಅಧ್ಯಕ್ಷ, ಕಾರ್ಯದರ್ಶಿಗಳ ಭಾವಚಿತ್ರ ಅನಾವರಣ ನಡೆಸಿಕೊಡಲಿದ್ದಾರೆ. ತಾಪಂ ಸದಸ್ಯ ಪ್ರತಿಮಾ ಪ್ರಕಾಶ್‌, ಗ್ರಾಪಂ ಅಧ್ಯಕ್ಷರಾದ ನರಿ ಮಂಜಪ್ಪ, ಎಂ.ಡಿ.ರಾಮಚಂದ್ರ, ಡಿಸಿಸಿ ಶಿವಮೊಗ್ಗದ ಎಂ.ಎಂ. ಪರಮೇಶ್‌, ಟಿ. ರಘುಪತಿ, ಸಿ.ರಾಜಣ್ಣ ರೆಡ್ಡಿ, ಸಹಕಾರ ಇಲಾಖೆಯ ತಿಪ್ಪೇಸ್ವಾಮಿ ಮೊದಲಾದವರು ಪಾಲ್ಗೊಳ್ಳುವ ನಿರೀಕ್ಷೆಯಿದೆ. 

ಸಂಘದ ಅಧ್ಯಕ್ಷರೂ ಆದ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಚ್‌.ಕೆ.ವೆಂಕಟೇಶ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಸುಧಾ ಶರ್ಮಾ ಹಳೆಇಕ್ಕೇರಿ ಅವರಿಂದ ಸಂಗೀತ, ಹೊಸೂರಿನ ಭಾರತಿ ಕಲಾ ಪ್ರತಿಷ್ಠಾನದಿಂದ ಸಂಜೆ ಆರರಿಂದ ದಕ್ಷ ಯಜ್ಞ ಯಕ್ಷಗಾನ ನಡೆಯಲಿದೆ ಎಂದು ಸಂಘದ ಮುಖ್ಯ ಕಾರ್ಯ ನಿರ್ವಾಹಕ ಮೇಘರಾಜ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಲಾಭದ ಹಾದಿಯಲ್ಲಿ!
ಕಲ್ಮನೆ ಸೊಸೈಟಿ ಕಳೆದ 10 ವರ್ಷಗಳಿಂದ ಪ್ರತಿ ವರ್ಷ ಲಾಭವನ್ನೇ ಕಾಣುತ್ತಿದೆ. 2007-08ರ ವೇಳೆಗೆ 4.72 ಲಕ್ಷ ರೂ. ನಿವ್ವಳ ಲಾಭ ಮಾಡಿದ ಸಂಸ್ಥೆ 10 ವರ್ಷಗಳಲ್ಲಿ ಏಳು ವರ್ಷ ಮೂರು ಲಕ್ಷಕ್ಕೂ ಹೆಚ್ಚಿನ ಲಾಭ ಗಳಿಸಿದೆ. 2012-13ರಲ್ಲಿ ಹಾಗೂ 13-15ರಲ್ಲಿ ಈ ಲಾಭ ಆರು ಲಕ್ಷ ಮೀರಿದ್ದೂ ಉಂಟು. ಮುಂದಿನ ದಿನಗಳಲ್ಲಿ ವಿವಿಧೆಡೆ ಶಾಖೆಗಳನ್ನು ತೆರೆದು ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ಸೇವೆ ನೀಡಲು ಉದ್ದೇಶಿಸಲಾಗಿದ್ದು, ಸದ್ಯದಲ್ಲೇ ಎಡಜಿಗಳೇಮನೆಯಲ್ಲಿ ಶಾಖೆ ಆರಂಭಿಸಿ ಗ್ರಾಹಕ ಉಪಯೋಗಿ ವಸ್ತುಗಳ ಮಾರಾಟ ಮಳಿಗೆ ತೆರೆಯಲಾಗುತ್ತದೆ ಎಂದು ಅಧ್ಯಕ್ಷ ಎಚ್‌.ಕೆ. ವೆಂಕಟೇಶ ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next