ಕುದುರೆಮುಖ ಹತ್ತೋದು, ಇಳಿಯೋದು ಸೇರಿ ಇಪ್ಪತ್ತು ಕಿ.ಮೀ.! ಒಂದೊಂದೇ ಕಿ.ಮೀ. ಕಡಿಮೆ ಆಗ್ತಿದ್ದಂಗೆ ಒಳಗೆ ಪುಳಕ. ಗೈಡ್ ಮುಂದೆ ಮುಂದೆ, ನಾವುಗಳು ಅವನ ಹಿಂದೆ ಹಿಂದೆ. ಮಳೆಗಾಲ. ಜಿಗಣೆಗಳ ಕಾಟ. ಆ ಜಿಗಣೆಗಳಿಗೋ, ನಮ್ಮ ಮೇಲೆ ಚಾರಣ ಮಾಡುವಾಸೆ. ಅವುಗಳ ದಾಳಿ ತಡೆಯಲು ನಮ್ಮ ಕೈಯಲ್ಲಿ ಡೆಟಾಲ…, ಕಡ್ಡಿಗಳು ಆಯುಧಗಳಂತೆ ಇದ್ದವು…
ಚಾರಣವಾ! ಅಷ್ಟೆಲ್ಲ ಯಾರು ನಡೀತಾರೆ ಅನ್ನುತ್ತಿದ್ದವಳು ಅವತ್ತೇಕೋ ಏಕಾಏಕಿ ಚಾರಣಕ್ಕೆ ಹೊರಟು ನಿಂತಿದ್ದೆ. ನಾನು, ನನ್ನ ಗಂಡ ಮತ್ತು ಅವರ ಸ್ನೇಹಿತರೆಲ್ಲ ಸೇರಿಕೊಂಡು, “ಕುದುರೆಮುಖಕ್ಕೆ ಟ್ರೆಕ್ಕಿಂಗ್ ಹೋಗೋಣ’ ಎಂದು ನಿರ್ಧರಿಸಿ, ತಡಮಾಡದೇ ಹೊರಟೆವು. ಅದೂ ಕುಟುಂಬ ಸಮೇತ ಚಾರಣ. ಐವರು ದಂಪತಿ ಹಾಗೂ ಒಂದು ದಂಪತಿಯ ಹತ್ತು ವರ್ಷದ ಮಗ- ಹೀಗೆ ಹನ್ನೊಂದು ಜನ, ಬೆಂಗಳೂರಿನಿಂದ ಚಿಕ್ಕಮಗಳೂರಿನತ್ತ ಹೊರಟೆವು.
ಹೋಟೆಲ್ ತಲುಪಿ, ತಿಂಡಿ ಎಲ್ಲ ಮುಗಿಸಿ, ಟ್ರೆಕ್ಕಿಂಗ್ ಆರಂಭದ ಸ್ಥಳಕ್ಕೆ ಜೀಪಿನಲ್ಲಿ ಹೊರಟೆವು. ಸುತ್ತಮುತ್ತ ಹಸಿರಿರುವ ಸುಂದರ ಊರು ಚಿಕ್ಕಮಗಳೂರು. ಬೆಳಗಿನ ತಂಪು ಗಾಳಿಗೆ ಮೈಮನವೊಡ್ಡಿ ಜೀಪ್‌ನಲ್ಲಿ ನಿಂತ ನಮಗೆಲ್ಲ ಏನೋ ಅತೀವ ಪುಳಕ.
ಕುದುರೆಮುಖ ಹತ್ತೋದು, ಇಳಿಯೋದು ಸೇರಿ ಇಪ್ಪತ್ತು ಕಿ.ಮೀ.! ಒಂದೊಂದೇ ಕಿ.ಮೀ. ಕಡಿಮೆ ಆಗ್ತಿದ್ದಂಗೆ ಒಳಗೆ ಪುಳಕ. ಗೈಡ್ ಮುಂದೆ ಮುಂದೆ, ನಾವುಗಳು ಅವನ ಹಿಂದೆ ಹಿಂದೆ. ಮಳೆಗಾಲ. ಜಿಗಣೆಗಳ ಕಾಟ. ಆ ಜಿಗಣೆಗಳಿಗೋ, ನಮ್ಮ ಮೇಲೆ ಚಾರಣ ಮಾಡುವಾಸೆ. ಅವುಗಳ ದಾಳಿ ತಡೆಯಲು ನಮ್ಮ ಕೈಯಲ್ಲಿ ಡೆಟಾಲ…, ಕಡ್ಡಿಗಳು ಆಯುಧಗಳಂತೆ ಇದ್ದವು. ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ, ಅಲ್ಲೊಂದು ಅಸ್ಥಿಪಂಜರ ಕಾಣಿಸಿತು. “ಯಾವುದೋ ಪ್ರಾಣಿ, ಇನ್ನೊಂದು ಕಾಡುಪ್ರಾಣಿಯನ್ನು ತಿಂದಿದೆ’ ಎಂದು ಗೈಡ್ ಹೇಳಿದ. ಅದನ್ನು ಕೇಳಿ, ಒಮ್ಮೆ ನಾವೆಲ್ಲ ಸ್ತಬ್ಧ. ಪುಟ್ಟ ಆತಂಕದಲ್ಲಿ ಮುಂದಿನ ದಾರಿಯನ್ನು ಸವೆಸಲು ಶುರುಮಾಡಿದೆವು. ಐದು ಕಿ.ಮೀ. ಮುಗಿಸಿದ ಬಳಿಕ, ಒಂದು ಸಮತಟ್ಟಾದ ಜಾಗ ಸಿಕ್ಕಿತು. ಅದನ್ನು ಕಂಡಿದ್ದೇ ಕಂಡಿದ್ದು, ಎಲ್ಲರಲ್ಲೂ “ಉಸ್ಸಪ್ಪಾ’ ಎಂಬ ಉದ್ಗಾರ. ಆಗಲೇ ಸಮಯ, ಮಧ್ಯಾಹ್ನ ಎರಡು ಗಂಟೆ ಕಳೆದಿತ್ತು.
ಒಂದೆಡೆ ನಮಗೆಲ್ಲ ಸುಸ್ತಾಗಿತ್ತು. ಹೆಜ್ಜೆ ಮುಂದೆ ಇಡೋದೂ ಕಷ್ಟ ಎನ್ನುವಂತಿತ್ತು. ಆದರೆ, ಜೊತೆಗಿದ್ದ ಪುಟ್ಟ ಬಾಲಕ ಮಾತ್ರ ಹೈ ಜೋಶ್‌ನಲ್ಲಿದ್ದ. ತಾನೇ ನಾಯಕ ಎಂಬಂತೆ, ಉತ್ಸಾಹದಿಂದ ನಡೆಯುತ್ತಿದ್ದ. ಕೊನೆಗೂ ಅಪಾರ ಬೆವರಿಳಿಸಿ, ಏದುಸಿರು ಬಿಟ್ಟು, ಕುದುರೆಮುಖ ಬೆಟ್ಟದ ತುದಿ ತಲುಪಿದೆವು. ಆ ಉತ್ತುಂಗದಲ್ಲಿ ನಿಂತಾಗ, ಆಹಾ! ನಿಜಕ್ಕೂ ಆ ಪ್ರಕೃತಿಯನ್ನು ನೋಡಿ, ನಿಬ್ಬೆರಗಾದೆವು. ತಣ್ಣನೆ ಗಾಳಿ, ಅಕ್ಕಪಕ್ಕ- ಹಿಂದೆಮುಂದೆ ಹಬ್ಬಿದ್ದ ಹಸಿರು, ಹಕ್ಕಿಗಳ ಚಿಲಿಪಿಲಿ, ತುಂತುರು ಮಳೆ… ಇದನ್ನೆಲ್ಲ ನೋಡುತ್ತಾ, ಅಲ್ಲೇ ಕುಳಿತುಬಿಡೋಣ ಅಂತನ್ನಿಸಿತು. ಪ್ರಕೃತಿ ಇಷ್ಟೊಂದು ಸೌಂದರ್ಯವಂತೆ ಆಗಿರಲು ಸಾಧ್ಯವೇ ಎನ್ನುವಂತೆ, ಅದರ ರಮ್ಯತೆ ಕಣ್ಣೆದುರು ಹಬ್ಬಿತ್ತು.
ಊಟ ಕಟ್ಟಿಕೊಂಡು ಹೋಗಿದ್ದರಿಂದ, ಅಲ್ಲೇ ಕೆಲಕಾಲ ಕುಳಿತು, ಭೋಜನ ಸವಿದೆವು. ಹೊಟ್ಟೆಯೂ ಭರ್ತಿ ಆಯಿತು. ಮನಸ್ಸಿಗೂ ಅಪಾರ ಸಂತೃಪ್ತಿ ಆಯಿತು. ಹೊರಡುವಾಗ ನಮ್ಮೊಳಗೆ ಒಂದು ಅತಿಯಾದ ಆತ್ಮವಿಶ್ವಾಸ. “ಇಷ್ಟು ದೊಡ್ಡ ಬೆಟ್ಟ ಹತ್ತಿದ್ದೀವಿ, ಇಳಿಯೋದೇನು ಮಹಾ?’ ಅಂದ್ಕೊಂಡ್ರೆ, ಇಳಿಯೋದೇ ಕಷ್ಟ ನೋಡಿ. ಪುಸ್ ಪುಸ್ ಅಂತ ಪಾದಗಳು ಜಾರೋದು. ಪ್ರತಿ ಹೆಜ್ಜೆ ಇಡೋವಾಗ, ಇಲ್ಲಾದ್ರೂ ಮಣ್ಣು ಗಟ್ಟಿಯಾಗಿಯಾಗಿರುತ್ತೆ ಅಂತ ಇಟ್ಟರೆ, ಅಲ್ಲೂ ಜಾರೋದು. ಮತ್ತೂಬ್ಬರನ್ನು ನೋಡಿ ಹಾಸ್ಯ ಮಾಡಿ ಮುಗಿಸುವಷ್ಟರಲ್ಲಿ, ನಾವು ನೆಲದ ಮೇಲೆದ ಮೇಲೆ ಬಿದ್ದಿರುತ್ತಿದ್ದೆವು!
ಮೋಡ ಮುಸುಕಿತ್ತು. ಇನ್ನೇನು ಮಳೆ ಬರುವುದರಲಿತ್ತು. ಈಗ ಬಂತು, ಈಗ ಬಂತು ಅಂತ ಆಕಾಶ ನೋಡುತ್ತಿರುವಾಗಲೇ, ಹನಿಗಳು ಕಣ್ಣ ಮೇಲೆ ಬಿದ್ದವು. ಎಲ್ಲರ ಹೆಜ್ಜೆಗಳು ಚುರುಕಾದವು. ನಮ್ಮ ಗುಂಪಿನ ಒಬ್ಬರಿಗೆ ಕಾಲು ತಿರುಚಿ ನಡೆಯೋಕೇ ಆಗುತ್ತಿರಲಿಲ್ಲ. ಒಂದು ದಂಪತಿ ಆಗಲೇ ಮುಂದೆ ಸಾಗಿತ್ತು. ಎಲ್ಲರೂ ಒಟ್ಟಿಗೆ ಸೇರುವಾಗ, ಸಂಜೆ ಅಲ್ಲ… ರಾತ್ರಿ ಎಂಟು ಗಂಟೆಯಾಗಿತ್ತು.
ಚಾರಣವೇನೋ ಯಶಸ್ವಿ ಆಯ್ತು. ಮರುದಿನ ಯಾರಿಗೂ ಕಾಲು ಎತ್ತಿಡೋಕೆ ಆಗ್ತಿರಲಿಲ್ಲ. “ನಾ ನಿನ್ನ ಬಿಡಲಾರೆ’ ಎಂಬಂತೆ ಜಿಗಣೆಗಳು ಕಚ್ಚಿದ್ದ ಗಾಯಗಳೆಲ್ಲ, “ತುರಿಕೆ’ ಕಾರ್ಯಕ್ರಮ ಇಟ್ಟುಕೊಂಡಿದ್ದವು.
– ಸುಪ್ರೀತಾ ವೆಂಕಟ್, ಬೆಂಗಳೂರು