Advertisement

48 ಗಂಟೆ: 150 ತಬ್ಲೀಘಿ ಪತ್ತೆ

03:42 PM Apr 24, 2020 | mahesh |

ಉತ್ತರಪ್ರದೇಶದಲ್ಲಿ 48 ಗಂಟೆಗಳ ಅವಧಿಯಲ್ಲಿ ವಿದೇಶಿಗರು ಸೇರಿದಂತೆ ಕನಿಷ್ಠ 150 ತಬ್ಲಿಘಿ ಜಮಾತ್‌ ಸದಸ್ಯರನ್ನು ದಿಲ್ಲಿ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಇದುವರೆಗೂ 341 ಧರ್ಮಗುರುಗಳು ಸೇರಿದಂತೆ 3,204 ಜಮಾತ್‌ ಸದಸ್ಯರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

Advertisement

ದಿಲ್ಲಿಯ ನಿಜಾಮುದ್ದೀನ್‌ ಮರ್ಕಜ್‌ನಲ್ಲಿ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ 500 ಮಂದಿ ತಲೆಮರೆಸಿಕೊಂಡಿರುವ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು ಎನ್ನಲಾಗಿದ್ದು, ಅದರ ಆಧಾರದ ಮೇರೆಗೆ ಕಾನ್ಪುರ ಐಐಟಿ ನೆರವಿನೊಂದಿಗೆ ವಿಶೇಷ ಕ್ಯಾಮೆರಾ, ಡ್ರೋನ್‌ಗಳನ್ನು ಬಳಸಿಕೊಂಡು ಇವರನ್ನು ಪತ್ತೆ ಹಚ್ಚಲಾಗಿದೆ. ಇದಕ್ಕಾಗಿಯೇ ಪ್ರತಿ ಜಿಲ್ಲೆಯಲ್ಲೂ ವಿಶೇಷ ತಂಡಗಳನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೀರತ್‌ ವಲಯವೊಂದರಲ್ಲೇ ಇದುವರೆಗೂ 1400 ತಬ್ಲಿಘಿ ಜಮಾತ್‌ ಸದಸ್ಯರನ್ನು ಪತ್ತೆ ಹಚ್ಚಲಾಗಿದೆ.

21 ವಿದೇಶಿಯರ ಬಂಧನ
ಥಾಣೆ: ಮಾರ್ಚ್‌ನಲ್ಲಿ ದಿಲ್ಲಿಯಲ್ಲಿ ನಡೆದ ತಬ್ಲೀಘಿಜಮಾತ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದ 21 ವಿದೇಶಿಯರು ಸೇರಿದಂತೆ ಒಟ್ಟು 25 ಮಂದಿಯನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ.

ಇವರೆಲ್ಲರ ಕ್ವಾರಂಟೈನ್‌ ಅವಧಿ ಮುಗಿದಿದ್ದು, ಗುರುವಾರ ಇವರನ್ನು ಬಂಧಿಸಿ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಇವರಿಗೆ ಜಾಮೀನು ಮಂಜೂರು ಮಾಡಿದ್ದು, ದೇಶ ಬಿಟ್ಟು ಹೋಗದಂತೆ ತಾಕೀತು ಮಾಡಿದೆ. ಬಂಧಿತರಲ್ಲಿ 13 ಬಾಂಗ್ಲಾದೇಶಿಯರು, 8 ಮಂದಿ ಮಲೇಷ್ಯಾ ಪ್ರಜೆಗಳು ಹಾಗೂ ನಾಲ್ವರು ಸ್ಥಳೀಯರು ಸೇರಿದ್ದಾರೆ. ಈ ವಿದೇಶಿ ಪ್ರಜೆಗಳು ತಮ್ಮ ಪ್ರವಾಸಿ ವೀಸಾವನ್ನು ದುರುಪಯೋಗ ಪಡಿಸಿಕೊಂಡು, ಸಮಾವೇಶದಲ್ಲಿ ಪಾಲ್ಗೊಂಡ ನಂತರ ಇಲ್ಲಿಗೆ ಆಗಮಿಸಿದ್ದರು. ಇಲ್ಲಿನ ತನ್ವೀರ್‌ ಉಲಮ್‌ ಮದರಸಾ ಹಾಗೂ ಇತರೆಡೆ ಆಶ್ರಯ ಪಡೆದಿದ್ದರು. ಎ.1ರಂದು ಇವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು ಎಂದು ಹಿರಿಯ ಇನ್‌ಸ್ಪೆಕ್ಟರ್‌ ನಿತಿನ್‌ ಠಾಕ್ರೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next