ದಾರಿಯಲ್ಲಿ ಹೋಗುವಾಗ ಒಂದು ಮಗು ಅಮ್ಮ ಕೊಟ್ಟಿದ್ದ ಒಂದು ರೂಪಾಯಿಯನ್ನು ಎಲ್ಲೋ ಕಳೆದುಕೊಂಡುಬಿಡುತ್ತದೆ. ಅಮ್ಮನ ಭಯಕ್ಕೋ, ಅಮ್ಮ ಕೊಟ್ಟಿದ್ದು ಎಂಬ ಪ್ರೀತಿಗೋ ಮಗು ಅದನ್ನು ಎಲ್ಲ ಕಡೆಗಳಲ್ಲೂ ಹುಡುಕಿ- ಹುಡುಕಿ ಕೊನಗೆ ಸುಸ್ತಾಗಿ ಮನೆಗೆ ಹೋಗಲು ಅಂಜಿ ಅಲ್ಲೇ ಕುಳಿತುಕೊಳ್ಳುತ್ತದೆ.
ಆಗ ಅದೇ ದಾರಿಯಲ್ಲಿ ಬಂದ ಒಬ್ಬ ಸಂತ ಮಕ್ಕಳೇ ಯಾಕೆ ಇಲ್ಲಿ ಕುಳಿತಿದ್ದೀರಿ, ಕತ್ತಲಾಗುತ್ತ ಬಂತು. ಮನೆಗೆ ತೆರಳಿ ಎಂದರು. ಆಗ ಮಗುವು ಅಮ್ಮ ಕೊಟ್ಟ ಹಣವನ್ನು ಕಳೆದುಕೊಂಡಿರುವುದಾಗಿ ಮತ್ತು ಎಲ್ಲ ಕಡೆ ಹುಡುಕಿದರೂ ಅದು ಸಿಗಲಿಲ್ಲ ಎಂದು ಅಳುಮುಖದಿಂದ ಹೇಳುತ್ತದೆ. ಆಗ ಆ ಸಂತ ಒಮ್ಮೆ ನಕ್ಕು, ನೀನು ಕಳೆದುಕೊಂಡಲ್ಲೇ ಹುಡುಕು ಅದು ದೊರೆಯುತ್ತದೆ ಎಂದು ಹೇಳಿ ತೆರಳುತ್ತಾನೆ. ಮಕ್ಕಳಿಗೇ ಅದೇನೂ ಅರ್ಥವಾಯಿತೋ ಆದರೆ ಎಲ್ಲಿ ಕಳೆದುಕೊಂಡರೋ ಅಲ್ಲೇ ಹುಡುಕುತ್ತಾರೆ. ಹಣ ದೊರೆಯುತ್ತದೆ. ಆದರೆ ಆ ಸಂತ ಹೇಳಿದ ಮಾತಿನ ಗೂಡಾರ್ಥ ಅಗಾಧವಾದುದು.
ಎಲ್ಲೋ ಕಳೆದುಕೊಂಡಿರುತ್ತೇವೆ, ಇನ್ನೆಲ್ಲೋ ಹುಡುಕುತ್ತೇವೆ. ಮನುಷ್ಯ ತಾನೇನೂ ಕಳೆದುಕೊಂಡಿದ್ದೇನೆ ಎಂದು ನಕಾರಾತ್ಮವಾಗಿ ಯೋಚಿಸುತ್ತಾನೆ. ಜತೆಗೆ ಕಳೆದುಕೊಂಡಲ್ಲಿ ಹುಡುಕದೆ ಬೇರೆಲ್ಲಾ ಕಡೆಗಳಲ್ಲೂ ಹುಡುಕಲಾರಂಭಿಸುತ್ತಾನೆ. ಕಳೆದುಕೊಂಡದ್ದು ವಸ್ತು, ಖುಷಿ, ನೆಮ್ಮದಿ, ಯಶಸ್ಸು ಏನೇ ಆದರೂ ಕಳೆದುಕೊಂಡಲ್ಲೇ ಹುಡುಕಿದರೆ ಖಂಡಿತ ಕಳೆದುಕೊಂಡದ್ದು ದೊರೆಯುತ್ತದೆ. ಕಳೆದುಕೊಂಡದ್ದು ಮನೆಯಲ್ಲಿ ಆದರೆ ಹುಡುಕುವುದು ಊರೆಲ್ಲಾ ಎಂದರೆ ಕಳೆದುಕೊಂಡದ್ದು ಸಿಗಲು ಸಾಧ್ಯವೇ?
ಕಳೆದುಕೊಂಡಲ್ಲೇ ಹುಡುಕಿದರೆ ಕಳೆದುಕೊಂಡದ್ದು ದೊರೆಯಲು ಸಾಧ್ಯ. ಮನುಷ್ಯ ಎಲ್ಲೋ ಖುಷಿಯನ್ನು ಕಳೆದುಕೊಳ್ಳುತ್ತಾನೆ. ಮತ್ತೆ ಖುಷಿಯನ್ನರಸಿ ಇನ್ನೆಲ್ಲೋ ಹುಡುಕುತ್ತಾನೆ. ಆದರೆ ಖುಷಿ ಖಂಡಿತ ದೊರೆಯಲು ಸಾಧ್ಯವಿಲ್ಲ. ಕಳೆದುಕೊಂಡಲ್ಲೇ ಮತ್ತೆ ಖುಷಿಯನ್ನು ಹುಡುಕಿ ಜೀವನ ಸುಂದರವಾಗಿರುತ್ತದೆ.
ಜೀವನದಲ್ಲಿ ಏನೋ ಗುರಿ ಇಟ್ಟುಕೊಂಡು ಸಾಧಿಸಲು ಹೊರಟ ನಮಗೆ ಸೋಲು ದೊರೆತರೆ ಅದನ್ನು ಅಲ್ಲೇ ಬಿಟ್ಟುಬಿಟ್ಟರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಎಲ್ಲಿ ಸೋಲು ಕಂಡೆವೋ ಅಲ್ಲೇ ಮತ್ತೆ ಗೆಲುವನ್ನು ಹುಡುಕಬೇಕು. ಒಂದು ಸೋಲು ಗುರಿಯ ದಾರಿಯನ್ನು ಬದಲಿಸುವ ಬದಲು ಸಾಧನೆಗೆ ಮೆಟ್ಟಿಲನ್ನಾಗಿ ಬದಲಿಸಬೇಕು. ಆಗ ಜೀವನದಲ್ಲಿ ಯಶಸ್ಸು ದೊರೆಯಲು ಸಾಧ್ಯ.
ಜೀವನದಲ್ಲಿ ಖುಷಿಯಲ್ಲಿರುವವರೂ, ಸಾಧಿಸಿದವರೂ ನೋವು ಅನುಭವಿಸಿಲ್ಲ, ಸೋಲು ಅನುಭವಿಸಿಲ್ಲ ಎಂದಲ್ಲ. ಅವರು ಸೋತಲ್ಲೆ ಗೆಲುವನ್ನು ಹುಡುಕಿದ್ದಾರೆ. ನೋವು ದೊರೆತಲ್ಲೇ ಖುಷಿಯನ್ನು ಹುಡುಕಿದ್ದಾರೆ. ಜೀವನವೆಂದರೆ ಅಷ್ಟೇ ಎಲ್ಲಿ ಕಳೆದುಕೊಂಡಿದ್ದೇವೋ ಅಲ್ಲೇ ಹುಡುಕುವುದು…
- ರಂಜಿನಿ ಮಿತ್ತಡ್ಕ