Advertisement

ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಸಿಗ‌ಲಿ

11:54 AM Sep 06, 2019 | Suhan S |

ಹಾನಗಲ್ಲ: ತಾಯಿಯಂತೆ ಮಮತೆ ತೋರಿ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕನಿಗೆ ಸಮಾಜದಲ್ಲಿ ಗೌರವಗಳು ಸಿಗಬೇಕು ಎಂದು ಹೋತನಹಳ್ಳಿ ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಶ್ರೀ ಕುಮಾರೇಶ್ವರ ವಿರಕ್ತಮಠದ ಸದಾಶಿವ ಮಂಗಲಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ತಾಪಂ ಸಹಯೋಗದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರ ದಿನಾಚರಣೆ ನೆಪಕ್ಕೆ ಮಾತ್ರ ಆಗುವುದು ಬೇಡ. ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರಗಳು ಸಿಗುವಂತಾಗಬೇಕು. ಎಲ್ಲವನ್ನೂ ಹೋರಾಟದಿಂದ ಪಡೆಯುವ ಸ್ಥಿತಿ ಇರುವಾಗ ಇದಕ್ಕೆ ಶಿಕ್ಷಕರೂ ಹೊರತಾಗಿಲ್ಲ. ಶಿಕ್ಷಕರ ಶ್ರದ್ಧೆಯ ಸೇವೆ ಸಾರ್ಥಕವಾಗಲು ಸಮಾಜ ಹಾಗೂ ಸರ್ಕಾರ ಶಿಕ್ಷಕರನ್ನು ಗೌರವಿಸಬೇಕು ಎಂದರು.

ಡಾ| ಹೊನ್ನಪ್ಪ ಹೊನ್ನಪ್ಪನವರ ಮಾತನಾಡಿ, ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಆದರ್ಶಗಳನ್ನು ಶಿಕ್ಷಕರಾದವರು ಎಷ್ಟು ಅಳವಡಿಸಿಕೊಂಡಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಉತ್ತಮ ವಿದ್ಯಾರ್ಥಿಯಾದರೆ ಮಾತ್ರ ಉತ್ತಮ ಶಿಕ್ಷಕನಾಗಬಲ್ಲ ಎಂಬುದನ್ನು ಅರಿತು, ಈ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದರು. ಜಿಪಂ ಸದಸ್ಯ ಮಾಲತೇಶ ಸೊಪ್ಪಿನ ಮಾತನಾಡಿ, ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಬದ್ಧವಾಗಿದೆ. ಶಾಸಕ ಸಿ.ಎಂ. ಉದಾಸಿ ಅವರನ್ನು ಶಿಕ್ಷಕರ ಪದಾಧಿಕಾರಿಗಳೊಂದಿಗೆ ಭೇಟಿ ಮಾಡಿ ಶಿಕ್ಷಣ ಸಚಿವರ ಗಮನಸೆಳೆಯಲು ಪ್ರಯತ್ನಿಸಲಾಗುವುದು. ಶಿಕ್ಷಕರು ಕನ್ನಡ ಶಾಲೆಗಳ ಉಳಿವಿಗೆ ಕಾರ್ಯಯೋಜನೆ ರೂಪಿಸಬೇಕು. ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದರೂ, ಪಾಲಕರಲ್ಲಿ ಆಂಗ್ಲಮಾಧ್ಯಮ ವ್ಯಾಮೋಹ ತಪ್ಪುತ್ತಿಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತವರೂ ಉನ್ನತ ಹುದ್ದೆಗಳಲ್ಲಿದ್ದಾರೆ ಎಂಬುದನ್ನು ಅರಿತುಕೊಳ್ಳಿ ಎಂದು ಹೇಳಿದರು.

ಶಿಕ್ಷಕರ ಸಂಘದ ಅಧ್ಯಕ್ಷ ವಿಜೇಂದ್ರ ಯತ್ನಳ್ಳಿ ಮಾತನಾಡಿ, ಮೂರು ಸರ್ಕಾರಗಳು ಬಂದು ಹೋದರೂ ಶಿಕ್ಷಕರ ವರ್ಗಾವಣೆ ಸಮಸ್ಯೆ ಬಗೆಹರಿಯದಾಗಿದೆ. ಸಂವಿಧಾನ ತಿದ್ದಬಹುದು, ಶಿಕ್ಷಕರ ವರ್ಗಾವಣೆ ನೀತಿ ತಿದ್ದಲಾಗದ ಸ್ಥಿತಿಯಿದೆ. ನಿತ್ಯ ಪರಿಷ್ಕೃತ ವೇಳಾಪಟ್ಟಿ ನೋಡುವುದಾಗಿದೆ. ಇದರಿಂದ ಶಿಕ್ಷಕರ ಮನಸ್ಥಿತಿ ಹಾಳಾಗುತ್ತಿದೆ. ಶಿಕ್ಷಕರಿಗೆ ಪಾಠ-ಪ್ರವಚನಕ್ಕಿಂತ ಉಳಿದ ಕೆಲಸಗಳೇ ಹೆಚ್ಚಾಗುತ್ತಿವೆ. ಸರ್ಕಾರ ತಕ್ಷಣ ನಮ್ಮ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

Advertisement

ಜಿಪಂ ಸದಸ್ಯರಾದ ಟಾಕನಗೌಡ ಪಾಟೀಲ, ಗೌರವ್ವ ಶೇತಸನದಿ, ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಸದಸ್ಯರಾದ ಬಸವರಾಜ್‌ ಬೂದಿಹಾಳ, ಅಜ್ಜಪ್ಪ ಶಿರಳ್ಳಿ, ಎಪಿಎಂಸಿ ಅಧ್ಯಕ್ಷ ಶೇಕಣ್ಣ ಮಹರಾಜ್‌ಪೇಟ, ಎನ್‌.ಎಂ.ಪಾಟೀಲ, ವೆಂಕಟೇಶ ನಾಯಕ್‌, ಎನ್‌.ಪಿ.ಕಲ್ಲೇದೇವರು, ಬಿ.ಎಸ್‌.ಕರೆಣ್ಣನವರ, ಪ್ರಭು ಚಿಕ್ಕಾಂಶಿ, ಎಫ್‌.ಎಲ್.ನದಾಫ್‌, ಸಂತೋಷ ದೊಡ್ಡಮನಿ, ಎಸ್‌.ಎಂ.ದೊಡ್ಡಮನಿ, ದೀಪಾ ಮೇಸ್ತಾ, ಬಿ.ಎಂ.ಬೇವಿನಮರದ, ಬಿ.ಉಮೇಶ್‌, ಇಒ ಚನ್ನಪ್ಪ ರಾಯಣ್ಣನವರ, ಶೇಖರ ಹಂಚಿನಮನಿ, ಡಿ.ಮೋಹನ್‌ಕುಮಾರ್‌ ಅತಿಥಿಗಳಾಗಿದ್ದರು. ಬಿಇಒ ಎಚ್.ಶ್ರೀನಿವಾಸ ಸ್ವಾಗತಿಸಿದರು. ಅನಿಲ್ಕುಮಾರ ಗೋಣೆಣ್ಣವರ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು, ವರ್ಗಾವಣೆಗೊಂಡ ಶಿಕ್ಷಕರು, ನಲಿಕಲಿ ಕೇಂದ್ರದ ಶಿಕ್ಷಕರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next